ಅಭ್ಯರ್ಥಿಗಳ ಆಯ್ಕೆಯಲ್ಲಿ ತಪ್ಪು, ಅತಿಯಾದ ಆತ್ಮವಿಶ್ವಾಸ ಸೋಲಿಗೆ ಕಾರಣ: ಬಿಜೆಪಿ ಆತ್ಮಾವಲೋಕನ
ಲಕ್ನೋ: ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಸೋಲಿಗೆ ಕಾರಣವಾದ ಅಂಶಗಳ ಬಗ್ಗೆ ಸಮಗ್ರ ಆತ್ಮಾವಲೋಕನಕ್ಕೆ ಮುಂದಾಗಿರುವ ಬಿಜೆಪಿ ತಳಹಂತದಿಂದ ಅಭಿಪ್ರಾಯ ಪಡೆಯುವ ಅಭಿಯಾನ ಆರಂಭಿಸಿದೆ. ಕನಿಷ್ಠ 50 ಸಾವಿರ ಮಂದಿ ತಳಹಂತದ ಕಾರ್ಯಕರ್ತರಿಂದ ಅಭಿಪ್ರಾಯ ಪಡೆದು ಪಕ್ಷದ ಕಳಪೆ ಪ್ರದರ್ಶನಕ್ಕೆ ಕಾರಣವಾದ ಅಂಶಗಳ ಬಗ್ಗೆ ತಿಳಿದುಕೊಳ್ಳಲು ಪಕ್ಷ ಮುಂದಾಗಿದೆ. 2019ರಲ್ಲಿ 66 ಮಂದಿ ಬಿಜೆಪಿ ಸಂಸದರಿದ್ದರೆ, 2024 ಚುನಾವಣೆಯಲ್ಲಿ ಪಕ್ಷದ 33 ಮಂದಿ ಸಂಸದರು ಮಾತ್ರ ಆಯ್ಕೆಯಾಗಿದ್ದರು.
ಈ ನಿರಾಶಾದಾಯಕ ಫಲಿತಾಂಸಕ್ಕೆ ಯಾವುದೇ ಒಂದು ನಿರ್ದಿಷ್ಟ ಕಾರಣವನ್ನು ಬಿಜೆಪಿ ಹೇಳಿಲ್ಲ. ಬದಲಾಗಿ ಅಭ್ಯರ್ಥಿಗಳ ಆಯ್ಕೆ, ಕಾರ್ಯಕರ್ತರ ನಿರಾಸಕ್ತಿ, ಎಲ್ಲೆಡೆ ಕಂಡುಬAದ ಅತಿಯಾದ ಆತ್ಮವಿಶ್ವಾಸ ಮತ್ತು ಪಕ್ಷದಲ್ಲಿ ಹೊರಗಿನವರ ಪ್ರಭಾವ ಹೆಚ್ಚುತ್ತಿರುವ ಬಗೆಗಿನ ಅತೃಪ್ತಿ ಸೋಲಿಗೆ ಮುಖ್ಯ ಕಾರಣ ಎಂದು ಉನ್ನತ ಮೂಲಗಳು ಹೇಳಿವೆ.
ಪಕ್ಷದ ಉತ್ತಮ ಸಾಧನೆಗಳ ಕೀರ್ತಿಯನ್ನು ಪಕ್ಷದ ಉನ್ನತ ಮುಖಂಡರು ಸಂಘಟಿತವಾಗಿ ತೆಗೆದುಕೊಳ್ಳುತ್ತಾರೆ ಎಂದಾದರೆ ಪಕ್ಷದ ಸೋಲಿನ ಹೊಣೆಯ ಜವಾಬ್ದಾರಿ ಕೂಡಾ ಎಲ್ಲರದ್ದಾಗಿರುತ್ತದೆ ಎಂದು ಕಾರ್ಯಕರ್ತರಿಂದ ಬಂದ ಅಭಿಪ್ರಾಯಗಳು ಉಲ್ಲೇಖಿಸಿವೆ.