“ರೈತರನ್ನು ಬಂಧಿಸುವುದು ತಪ್ಪಾದ ಕ್ರಮ”ʼ: ಸ್ಟೇಡಿಯಂ ಅನ್ನು ತಾತ್ಕಾಲಿಕ ಜೈಲು ಆಗಿ ಪರಿವರ್ತಿಸುವ ಕೇಂದ್ರದ ಪ್ರಸ್ತಾವನೆ ತಿರಸ್ಕರಿಸಿದ ಕೇಜ್ರಿವಾಲ್ ಸರ್ಕಾರ
Photo: PTI
ಹೊಸದಿಲ್ಲಿ: ಸಾವಿರಾರು ರೈತರು ಬೃಹತ್ ಪ್ರತಿಭಟನೆಗಾಗಿ ದಿಲ್ಲಿಯತ್ತ ಆಗಮಿಸುತ್ತಿರುವ ನಡುವೆ ರಾಜಧಾನಿಯ ಸ್ಟೇಡಿಯಂ ಒಂದನ್ನು ತಾತ್ಕಾಲಿಕ ಜೈಲಾಗಿ ಪರಿವರ್ತಿಸುವ ಕೇಂದ್ರದ ಪ್ರಸ್ತಾವನೆಯನ್ನು ಅರವಿಂದ್ ಕೇಜ್ರಿವಾಲ್ ಸರ್ಕಾರ ತಿರಸ್ಕರಿಸಿದೆ.
ರೈತರ ಬೇಡಿಕೆಗಳು ನ್ಯಾಯಸಮ್ಮತವಾಗಿವೆ ಹಾಗೂ ಶಾಂತಿಯುತ ಪ್ರತಿಭಟನೆ ನಡೆಸಲು ಪ್ರತಿಯೊಬ್ಬ ನಾಗರಿಕನಿಗೆ ಹಕ್ಕಿದೆ ಎಂದು ಕೇಜ್ರಿವಾಲ್ ಸರ್ಕಾರ ಹೇಳಿದೆ. ಹೀಗಿರುವಾಗ ರೈತರನ್ನು ಬಂಧಿಸುವುದು ತಪ್ಪಾದ ಕ್ರಮವಾಗುತ್ತದೆ,” ಎಂದು ಕೇಂದ್ರದ ಪ್ರಸ್ತಾವನೆಯನ್ನು ವಿರೋಧಿಸಿ ದಿಲ್ಲಿ ಗೃಹ ಸಚಿವ ಕೈಲಾಶ್ ಗೆಹ್ಲೋಟ್ ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ.
ಬವಾನ ಪ್ರದೇಶದಲ್ಲಿರುವ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಪ್ರತಿಭಟನೆಯಲ್ಲಿ ತೊಡಗುವ ರೈತರನ್ನು ಬಂಧನದಲ್ಲಿರಿಸುವ ಪ್ರಸ್ತಾವನೆ ಕೇಂದ್ರದ್ದಾಗಿತ್ತು.
“ಕೇಂದ್ರ ಸರ್ಕಾರ ರೈತರನ್ನು ಮಾತುಕತೆಗಳಿಗೆ ಆಹ್ವಾನಿಸಿ ಅವರ ನೈಜ ಸಮಸ್ಯೆಗಳನ್ನು ಪರಿಹರಿಸಲು ಕ್ರಮಕೈಗೊಳ್ಳಬೇಕು. ದೇಶದ ರೈತರು ನಮ್ಮ ಅನ್ನದಾತ, ಅವರನ್ನು ಬಂಧಿಸಿ ಅವರ ಗಾಯಗಳಿಗೆ ಉಪ್ಪು ಸವರುವುದು ಸರಿಯಲ್ಲ. ಕೇಂದ್ರದ ನಿರ್ಧಾರದ ಭಾಗವಾಗಲು ನಾವು ಒಪ್ಪುವುದಿಲ್ಲ,” ಎಂದು ದಿಲ್ಲಿ ಗೃಹ ಸಚಿವರು ಹೇಳಿದ್ದಾರೆ.