ಆಂಧ್ರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷೆಯಾಗಿ ವೈ.ಎಸ್. ಶರ್ಮಿಳಾ ನೇಮಕ
ವೈ ಎಸ್ ಶರ್ಮಿಳಾ (PTI)
ಹೊಸದಿಲ್ಲಿ: ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ವೈ ಎಸ್ ರಾಜಶೇಖರ ರೆಡ್ಡಿ ಅವರ ಪುತ್ರಿ, ವೈ ಎಸ್ ಶರ್ಮಿಳಾ ಅವರನ್ನು ರಾಜ್ಯ ಕಾಂಗ್ರೆಸ್ ಅಧ್ಯಕ್ಷೆಯನ್ನಾಗಿ ಕಾಂಗ್ರೆಸ್ ನೇಮಿಸಿದೆ.
ಆಂಧ್ರದ ಈಗಿನ ಸಿಎಂ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರ ಸಹೋದರಿಯಾಗಿರುವ ಶರ್ಮಿಳಾ ಜನವರಿ 4 ರಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಸದ ರಾಹುಲ್ ಗಾಂಧಿ ಸಮ್ಮುಖದಲ್ಲಿ ಪಕ್ಷ ಸೇರಿದ್ದರು.
ತಕ್ಷಣದಿಂದ ಜಾರಿಗೆ ಬರುವಂತೆ ಅವರನ್ನು ಆಂಧ್ರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷೆಯನ್ನಾಗಿ ನೇಮಿಸಲಾಗಿದೆ ಎಂದು ಪಕ್ಷದ ಅಧಿಕೃತ ಹೇಳಿಕೆ ತಿಳಿಸಿದೆ.
“ನಿರ್ಗಮನ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾದ ಗಿಡುಗು ರುದ್ರ ರಾಜು ಅವರನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ವಿಶೇಷ ಆಹ್ವಾನಿತರನ್ನಾಗಿ ನೇಮಿಸಲಾಗಿದೆ. ಅವರು ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷಕ್ಕೆ ನೀಡಿದ ಕೊಡುಗೆ ಶ್ಲಾಘನೀಯ,” ಎಂದು ಹೇಳಿಕೆ ತಿಳಿಸಿದೆ.
ವೈಎಸ್ಆರ್ ತೆಲಂಗಾಣ ಪಕ್ಷದ ಸ್ಥಾಪಕಿಯಾಗಿರುವ ಶರ್ಮಿಳಾ ತಾವು ಕಾಂಗ್ರೆಸ್ ಸೇರುವುದರೊಂದಿಗೆ ತಮ್ಮ ಪಕ್ಷವೂ ಕಾಂಗ್ರೆಸ್ ಜೊತೆ ವಿಲೀನವಾಗಿದೆ ಎಂದು ಈ ಹಿಂದೆಯೇ ಹೇಳಿದ್ದರು.
ತಮಗೆ ನೀಡುವ ಯಾವುದೇ ಜವಾಬ್ದಾರಿ ವಹಿಸಲು ಸಿದ್ಧ ಎಂದೂ ಹೇಳಿದ್ದ ಅವರು ಕಾಂಗ್ರೆಸ್ ಪಕ್ಷವು ಅತ್ಯಂತ ದೊಡ್ಡ ಜಾತ್ಯತೀತ ಪಕ್ಷವಾಗಿದೆ ಎಂದೂ ಹೇಳಿದ್ದಾರೆ.