ಯಮುನಾ ನದಿಯ 23 ಸ್ಥಳಗಳಲ್ಲಿಯ ನೀರು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲ: ಸಂಸದೀಯ ಸಮಿತಿಯ ವರದಿ

PC : ANI
ಹೊಸದಿಲ್ಲಿ: ಯಮುನಾ ನದಿಯ ನೀರು ಎಷ್ಟೊಂದು ಕಲುಷಿತಗೊಂಡಿದೆಯೆಂದರೆ ಅದು ದಿಲ್ಲಿಯ ಜೀವನಾಡಿಯಾಗಿ ಉಳಿದಿಲ್ಲ ಎಂಬ ಆಘಾತಕಾರಿ ವಿಷಯವನ್ನು ತನ್ನ ವರದಿಯಲ್ಲಿ ಬಹಿರಂಗಗೊಳಿಸಿರುವ ಜಲ ಸಂಪನ್ಮೂಲಗಳ ಕುರಿತ ಸಂಸದೀಯ ಸ್ಥಾಯಿ ಸಮಿತಿಯು, ರಾಷ್ಟ್ರೀಯ ರಾಜಧಾನಿಯಲ್ಲಿಯ ಆರು ಸೇರಿದಂತೆ ನಿಗಾ ಇರಿಸಲಾಗಿದ್ದ ಯಮುನಾ ನದಿಯ 33 ಸ್ಥಳಗಳ ಪೈಕಿ 23ರಲ್ಲಿಯ ನೀರು ಪ್ರಾಥಮಿಕ ಜಲ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲಗೊಂಡಿದೆ ಎಂದು ತಿಳಿಸಿದೆ.
ಹರ್ಯಾಣದಿಂದ ಪಲ್ಲಾದ ಮೂಲಕ ದಿಲ್ಲಿಯನ್ನು ಪ್ರವೇಶಿಸುವ ಯಮುನಾ ನದಿಯು ಅಸ್ಗರ್ಪುರದ ಮೂಲಕ ಉತ್ತರ ಪ್ರದೇಶಕ್ಕೆ ಸಾಗುವ ಮುನ್ನ ರಾಷ್ಟ್ರ ರಾಜಧಾನಿಯಲ್ಲಿ 40 ಕಿ.ಮೀ.ಉದ್ದದ ಪ್ರದೇಶದಲ್ಲಿ ಹರಿಯುತ್ತದೆ.
ನದಿಯ ಬಳಕೆಯೋಗ್ಯ ಸಾಮರ್ಥ್ಯವನ್ನು ಪ್ರತಿಬಿಂಬಿಸುವ ಕರಗಿದ ಆಮ್ಲಜನಕ (ಡಿಒ) ಮಟ್ಟಗಳು ದಿಲ್ಲಿಯುದ್ದಕ್ಕೂ ಬಹುತೇಕ ಅಸ್ತಿತ್ವದಲ್ಲಿಯೇ ಇಲ್ಲ ಎಂದು ಸಮಿತಿಯು ಮಂಗಳವಾರ ಸಂಸತ್ತಿನಲ್ಲಿ ಮಂಡಿಸಿದ ತನ್ನ ವರದಿಯಲ್ಲಿ ಹೇಳಿದೆ.
ಮೇಲಿನ ಯಮುನಾ ನದಿ ಸ್ವಚ್ಛತಾ ಯೋಜನೆ ಮತ್ತು ನದಿ ಪಾತ್ರ ನಿರ್ವಹಣೆ ಕುರಿತು ತನ್ನ ವರದಿಯಲ್ಲಿ ಸಮಿತಿಯು, ದಿಲ್ಲಿ ಮತ್ತು ಉತ್ತರ ಪ್ರದೇಶಗಳಲ್ಲಿ ಒಳಚರಂಡಿ ಸಂಸ್ಕರಣಾ ಸ್ಥಾವರ(ಎಸ್ಟಿಪಿ)ಗಳ ನಿರ್ಮಾಣ ಮತ್ತು ನವೀಕರಣದ ಹೊರತಾಗಿಯೂ ಮಾಲಿನ್ಯ ಮಟ್ಟಗಳು ಆತಂಕಕಾರಿಯಾಗಿ ಹೆಚ್ಚಿನ ಮಟ್ಟದಲ್ಲಿಯೇ ಉಳಿದುಕೊಂಡಿವೆ ಎಂದು ಎಚ್ಚರಿಕೆ ನೀಡಿದೆ.
ಮಾಲಿನ್ಯವನ್ನು ನಿಯಂತ್ರಿಸಲು ಮತ್ತು ನದಿ ನೀರಿನ ಗುಣಮಟ್ಟ ಮರುಸ್ಥಾಪನೆಗಾಗಿ ಸಂಬಂಧಿಸಿದ ಎಲ್ಲರ ಸಂಘಟಿತ ಪ್ರಯತ್ನಗಳಿಗೆ ಕರೆನೀಡಿರುವ ಸಮಿತಿಯು,ನಿಗಾ ಇರಿಸಲಾಗಿದ್ದ 33 ಸ್ಥಳಗಳ ಪೈಕಿ ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶಗಳಲ್ಲಿಯ ತಲಾ ನಾಲ್ಕು ಸ್ಥಳಗಳಲ್ಲಿ ಮಾತ್ರ ನದಿ ನೀರು ಪ್ರಾಥಮಿಕ ಗುಣಮಟ್ಟ ಮಾನದಂಡಗಳನ್ನು ಪೂರೈಸಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ(ಸಿಪಿಸಿಬಿ)ಯು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳ ಸಹಯೋಗದಲ್ಲಿ ಜನವರಿ 2021 ಮತ್ತು ಮೇ 2023ರ ನಡುವೆ 33 ಸ್ಥಳಗಳಲ್ಲಿ ನದಿ ನೀರಿನ ಗುಣಮಟ್ಟದ ಮೌಲ್ಯಮಾಪನವನ್ನು ಕೈಗೊಂಡಿತ್ತು. ಕರಗಿದ ಆಮ್ಲಜನಕ, ಪಿಎಚ್, ಬಯೊಕೆಮಿಕಲ್ ಆಕ್ಸಿಜನ್ ಡಿಮಾಂಡ್(ಬಿಒಡಿ) ಮತ್ತು ಫೇಕಲ್ ಕೊಲಿಫಾರ್ಮ್ (ಎಫ್ಸಿ) ಈ ನಾಲ್ಕು ಮಾನದಂಡಗಳನ್ನು ಮೌಲ್ಯಮಾಪನವು ಒಳಗೊಂಡಿತ್ತು.
ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶಗಳಲ್ಲಿ ನಿಗಾಯಿರಿಸಲಾಗಿದ್ದ ಎಲ್ಲ ಸ್ಥಳಗಳಲ್ಲಿಯ ನೀರು ಅಗತ್ಯ ಮಾನದಂಡಗಳನ್ನು ಪೂರೈಸಿದ್ದರೆ,ಹರ್ಯಾಣದಲ್ಲಿಯ ಎಲ್ಲ ಆರೂ ಸ್ಥಳಗಳು ವಿಫಲಗೊಂಡಿವೆ. ದಿಲ್ಲಿಯಲ್ಲಿ ನಿಗಾ ಇರಿಸಲಾಗಿದ್ದ ಎಲ್ಲ ಏಳೂ ಸ್ಥಳಗಳಲ್ಲಿಯ ನೀರು 2021ರಲ್ಲಿ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲಗೊಂಡಿದ್ದರೆ ಪಲ್ಲಾದಲ್ಲಿ 2022 ಮತ್ತು 2023ರಲ್ಲಿ ಸ್ವಲ್ಪ ಸುಧಾರಣೆ ಕಂಡು ಬಂದಿತ್ತು ಎನ್ನುವುದನ್ನು ವಿಶ್ಲೇಷಣೆಯು ತೋರಿಸಿದೆ.
ಯಮುನಾ ನದಿ ಪ್ರವಾಹ ಪ್ರದೇಶದುದ್ದಕ್ಕೂ ಅತಿಕ್ರಮಣದ ಕುರಿತು ಸಮಿತಿಯು ನಿರ್ದಿಷ್ಟ ಕಳವಳಗಳನ್ನು ವ್ಯಕ್ತಪಡಿಸಿದೆ. ದಿಲ್ಲಿ ಮತ್ತು ಹರ್ಯಾಣ ಅತಿಕ್ರಮಣಗಳ ಕುರಿತು ಮಾಹಿತಿಗಳನ್ನು ಒದಗಿಸಿದ್ದರೂ,ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಇನ್ನಷ್ಟೇ ಸಂಪೂರ್ಣ ವಿವರಗಳನ್ನು ಸಲ್ಲಿಸಬೇಕಿವೆ.