ಯೆಮೆನ್ | ಮರಣ ದಂಡನೆಗೆ ಗುರಿಯಾಗಿರುವ ಭಾರತೀಯ ನರ್ಸ್ ಪ್ರಕರಣ ಯೆಮೆನ್ ಅಧ್ಯಕ್ಷರ ಬಳಿ ಇದೆ : ವಿದೇಶಾಂಗ ವ್ಯವಹಾರಗಳ ಸಚಿವಾಲಯ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಯೆಮೆನ್ ಪ್ರಜೆಯನ್ನು ಹತ್ಯೆಗೈದ ಆರೋಪದಲ್ಲಿ ಯೆಮೆನ್ ಸುಪ್ರೀಂ ಕೋರ್ಟ್ ನಿಂದ ಮರಣ ದಂಡನೆಗೆ ಗುರಿಯಾಗಿರುವ ಭಾರತೀಯ ಶುಶ್ರೂಷಕಿಯ ಪ್ರಕರಣವು ಸದ್ಯ ಯೆಮೆನ್ ಅಧ್ಯಕ್ಷರ ವಿವೇಚನಾಧಿಕಾರಕ್ಕೆ ಒಳಪಟ್ಟಿದೆ ಎಂದು ಶುಕ್ರವಾರ ಕೇಂದ್ರ ಸರಕಾರವು ಲೋಕಸಭೆಗೆ ತಿಳಿಸಿದೆ.
ಲೋಕಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆಯ ರಾಜ್ಯ ಸಚಿವ ಕೀರ್ತಿ ವರ್ಧನ್, ಸದ್ಯ ಜೈಲಿನಲ್ಲಿರುವ ಶುಶ್ರೂಷಕಿ ನಿಮಿಷಪ್ರಿ ಯಾರಿಗೆ ರಾಜತಾಂತ್ರಿಕ ನೆರವು ಸೇರಿದಂತೆ ಆಕೆಯ ಪ್ರಕರಣವನ್ನು ಪ್ರತಿನಿಧಿಸಲು ಓರ್ವ ವಕೀಲರನ್ನು ಒದಗಿಸಲು ಸಾಧ್ಯವಿರುವ ಎಲ್ಲ ನೆರವನ್ನೂ ಭಾರತ ಸರಕಾರ ಒದಗಿಸುತ್ತಿದೆ ಎಂದು ತಿಳಿಸಿದರು.
ಈ ಕುರಿತು ಲೋಕಸಭೆಗೆ ಲಿಖಿತ ಪ್ರತಿಕ್ರಿಯೆ ನೀಡಿದ ಅವರು, “ಯೆಮೆನ್ ಪ್ರಜೆಯನ್ನು ಹತ್ಯೆಗೈದ ಆರೋಪದಲ್ಲಿ ಭಾರತೀಯ ಶುಶ್ರೂಷಕಿ ನಿಮಿಷ ಪ್ರಿಯಾರಿಗೆ ಯೆಮೆನ್ ಸುಪ್ರೀಂ ಕೋರ್ಟ್ ಮರಣ ದಂಡನೆ ವಿಧಿಸಿದೆ” ಎಂದು ಮಾಹಿತಿ ನೀಡಿದರು.
“ಮರಣ ದಂಡನೆ ಸಂಬಂಧಿಸಿದ ವಿಷಯವು ಸದ್ಯ ಯೆಮೆನ್ ಅಧ್ಯಕ್ಷರ ವಿವೇಚನಾಧಿಕಾರಕ್ಕೆ ಒಳಪಟ್ಟಿದೆ” ಎಂದು ಅವರು ತಿಳಿಸಿದರು.
ನಿಮಿಷ ಪ್ರಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಿಕ ಸಂಘಟನೆಗಳು ಸೇರಿದಂತೆ ಕೆಲವು ಮನವಿಗಳನ್ನು ಸರಕಾರ ಸ್ವೀಕರಿಸಿದೆ ಎಂದು ಸಿಂಗ್ ಲೋಕಸಭೆಗೆ ತಿಳಿಸಿದರು.
ನಿಮಿಷ ಪ್ರಿಯಾರ ಸುರಕ್ಷಿತ ಬಿಡುಗಡೆಗೆ ಪರಿಹಾರ ಧನವನ್ನು ಖಾತ್ರಿಗೊಳಿಸಲು ಸರಕಾರವೇನಾದರೂ ಕ್ರಮ ಕೈಗೊಂಡಿದೆಯೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ನಿಮಿಷಪ್ರಿಯ ಬಿಡುಗಡೆಗೆ ಸಂಬಂಧಿಸಿದಂತೆ ಪರಿಹಾರ ಧನ ಪಾವತಿ ಮಾಡುವ ಸಂಗತಿಯು ನಿಮಿಷ ಪ್ರಿಯ ಕುಟುಂಬ ಹಾಗೂ ಮೃತ ವ್ಯಕ್ತಿಯ ಕುಟುಂಬದ ನಡುವಿನ ವ್ಯವಹಾರವಾಗಿದೆ” ಎಂದು ಸ್ಪಷ್ಟಪಡಿಸಿದರು.