ಯೆಮನ್ : ಶುಶ್ರೂಷಕಿ ನಿಮಿಷಾ ಪ್ರಿಯಾ ಮರಣ ದಂಡನೆ ವಿರುದ್ಧದ ಮೇಲ್ಮನವಿ ತಿರಸ್ಕೃತ
ದಿಲ್ಲಿ ಹೈಕೋರ್ಟ್ ನಲ್ಲಿ ವಿಚಾರಣೆ ವೇಳೆ ಮಾಹಿತಿ ಬಹಿರಂಗ
Photo cradit: thenewsminute.com
ಹೊಸ ದಿಲ್ಲಿ: 2017ರಲ್ಲಿ ಯೆಮನ್ ಪ್ರಜೆಯೊಬ್ಬರ ಹತ್ಯಾ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿಸಲ್ಪಟ್ಟು, ಮರಣ ದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತೀಯ ಶುಶ್ರೂಷಕಿ ನಿಮಿಷಾ ಪ್ರಿಯಾರ ಮೇಲ್ಮನವಿಯನ್ನು ಯೆಮನ್ ಸುಪ್ರೀಂ ಕೋರ್ಟ್ ತಳ್ಳಿ ಹಾಕಿದೆ. ಈ ಬೆಳವಣಿಗೆಯನ್ನು ಗುರುವಾರ ದಿಲ್ಲಿ ಹೈಕೋರ್ಟ್ ನಲ್ಲಿ ನಡೆದ ವಿಚಾರಣೆಯ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ವಕೀಲರು ದೃಢಪಡಿಸಿದ್ದಾರೆ ಎಂದು thenewsminute.com ವರದಿ ಮಾಡಿದೆ.
ಯೆಮನ್ ಪ್ರಜೆ ತಲಾಲ್ ಅಬ್ದೊ ಮಹ್ದಿ ಎಂಬ ವ್ಯಕ್ತಿಯನ್ನು ಹತ್ಯೆಗೈದು, ಆತನ ದೇಹವನ್ನು ಛಿದ್ರಗೊಳಿಸಿ, ಮೃತ ದೇಹದ ಅವಶೇಷಗಳನ್ನು ತನ್ನ ಯೆಮನ್ ನಲ್ಲಿನ ನಿವಾಸದ ನೀರಿನ ಕೊಳದಲ್ಲಿ ವಿಸರ್ಜಿಸಿದ ಆರೋಪದಲ್ಲಿ ಕೇರಳದ ಪಾಲಕ್ಕಾಡ್ ಮೂಲದವರಾದ ನಿಮಿಷಾ ಪ್ರಿಯಾ ಅವರನ್ನು ಅಪರಾಧಿ ಎಂದು ಘೋಷಿಸಲಾಗಿತ್ತು. 2015ರಿಂದ ತಲಾಲ್ ರೊಂದಿಗೆ ಯೆಮನ್ ನಲ್ಲಿ ಕ್ಲಿನಿಕ್ ನಡೆಸುತ್ತಿದ್ದ ನಾನು, ಆತನಿಂದ ಎರಡು ವರ್ಷಗಳ ಕಾಲ ಕಿರುಕುಳಕ್ಕೆ ಒಳಗಾಗಿದ್ದೆ ಎಂದು ನಿಮಿಷಾ ಪ್ರಿಯಾ ಪ್ರತಿಪಾದಿಸಿದ್ದರು. ಆತ ನನ್ನ ಪಾಸ್ ಪೋರ್ಟ್ ಅನ್ನು ಕಿತ್ತುಕೊಂಡು ನಾನು ಮನೆಗೆ ಮರಳುವುದು ಅಸಾಧ್ಯವಾಗುವಂತೆ ಮಾಡಿದ್ದ. ಕೊಲೆ ಮಾಡುವ ಉದ್ದೇಶ ಇರಲಿಲ್ಲ ಎಂದು ಆಕೆ ವಾದಿಸಿದ್ದಳು. ಆತನಿಗೆ ಇಂಜೆಕ್ಷನ್ ನೀಡಿ, ಆತನನ್ನು ಪ್ರಜ್ಞಾಹೀನನ್ನಾಗಿಸಿದ ನಂತರ ಆತನಿಂದ ನನ್ನ ಪಾಸ್ ಪೋರ್ಟ್ ಅನ್ನು ವಶಪಡಿಸಿಕೊಳ್ಳುವುದು ನನ್ನ ಉದ್ದೇಶವಾಗಿತ್ತು. ಆದರೆ, ಆತ ಕುಸಿದು ಬಿದ್ದು, ಮೃತಪಟ್ಟ ಎಂದೂ ಆಕೆ ವಾದಿಸಿದ್ದಳು.
ನಿಮಿಷಾರ ತಾಯಿ ಪ್ರೇಮಾಕುಮಾರಿ, ತಾನು ಯೆಮನ್ ಗೆ ತೆರಳಲು ಅನುಮತಿ ನೀಡಬೇಕು ಎಂದು ಸಲ್ಲಿಸಿದ್ದ ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ದಿಲ್ಲಿ ಹೈಕೋರ್ಟ್ ನಲ್ಲಿ ಆಕೆಯ ಮೇಲ್ಮನವಿ ತಿರಸ್ಕೃತಗೊಂಡಿರುವ ಸಂಗತಿ ಬೆಳಕಿಗೆ ಬಂತು. ಈ ಸಂದರ್ಭದಲ್ಲಿ ನಿಮಿಷಾರ ಮರಣ ದಂಡನೆಯನ್ನು ತಪ್ಪಿಸಲು ಇರುವ ಏಕೈಕ ಮಾರ್ಗವೆಂದರೆ, ಮೃತ ವ್ಯಕ್ತಿಯ ಕುಟುಂಬದ ಸದಸ್ಯರಿಗೆ ಪರಿಹಾರ ಧನ ನೀಡುವುದಾಗಿ ಅವರ ಮನವೊಲಿಸುವುದು ಎಂದು ಪ್ರೇಮಾಕುಮಾರಿ ಮನವಿ ಮಾಡಿದರು. ಆದರೆ, ಯೆಮನ್ ಪ್ರಯಾಣಕ್ಕೆ ನಿಷೇಧ ಹೇರಿರುವುದರಿಂದ, ಆಕೆ ಈ ಉದ್ದೇಶಕ್ಕೆ ತೆರಳುವುದು ಅಸಾಧ್ಯವಾಗಿ ಪರಿಣಮಿಸಿದೆ.
ಪ್ರೇಮಾಕುಮಾರಿ ಅವರ ಅರ್ಜಿಗೆ ಸಂಬಂಧಿಸಿದಂತೆ, ಇಂತಹ ಪರಿಸ್ಥಿತಿಯಲ್ಲಿ ಯಾರು ಯೆಮನ್ ಗೆ ತೆರಳಲು ಮಾನ್ಯತೆ ಹೊಂದಿದ್ದಾರೆ ಎಂಬ ಕುರಿತು ಮಾಹಿತಿ ಒದಗಿಸುವಂತೆ ಕೇಂದ್ರ ಸರ್ಕಾರದ ವಕೀಲರಿಗೆ ದಿಲ್ಲಿ ಹೈಕೋರ್ಟ್ ಸೂಚಿಸಿತು.