ದಿಲ್ಲಿ ವಿಧಾನಸಭಾ ಚುನಾವಣೆ | ಆಪ್ ಸೋಲು ಇಡೀ ವಿರೋಧ ಪಕ್ಷಗಳಿಗಾಗಿರುವ ಹಿನ್ನಡೆ: ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್ | PTI
ಹೊಸದಿಲ್ಲಿ: ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿನ ಆಮ್ ಆದ್ಮಿ ಪಕ್ಷದ ಸೋಲು ಕೇವಲ ಆ ಪಕ್ಷಕ್ಕಾಗಿರುವ ಹಿನ್ನಡೆ ಮಾತ್ರವಲ್ಲದೆ, ಇಡೀ ವಿರೋಧ ಪಕ್ಷಗಳಿಗಾಗಿರುವ ಹಿನ್ನಡೆಯಾಗಿದೆ. ಆಮ್ ಆದ್ಮಿ ಪಕ್ಷವು ಇದೀಗ ಪಂಜಾಬ್ ಗೆ ಮಾತ್ರ ಸೀಮಿತವಾಗಿರುವುದರಿಂದ, ಅದರ ಭವಿಷ್ಯದ ಕುರಿತು ಪ್ರಶ್ನೆಗಳು ಮೂಡಿವೆ ಎಂದು ಶನಿವಾರ ಸ್ವರಾಜ್ ಇಂಡಿಯಾ ಪಕ್ಷದ ಸಹ ಸಂಸ್ಥಾಪಕ ಹಾಗೂ ಚುನಾವಣಾ ತಜ್ಞ ಯೋಗೇಂದ್ರ ಯಾದವ್ ಅಭಿಪ್ರಾಯ ಪಟ್ಟಿದ್ದಾರೆ.
ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ಸದಸ್ಯರ ಪೈಕಿ ಒಬ್ಬರಾಗಿದ್ದ ಹಾಗೂ 2015ರಲ್ಲಿ ಪಕ್ಷದಿಂದ ಉಚ್ಚಾಟಿತರಾಗಿದ್ದ ಯೋಗೇಂದ್ರ ಯಾದವ್, ದೇಶದಲ್ಲಿ ಪರ್ಯಾಯ ರಾಜಕಾರಣದ ಕನಸು ಕಾಣುತ್ತಿದ್ದ ಎಲ್ಲರಿಗೂ ಈ ಫಲಿತಾಂಶದಿಂದ ಹಿನ್ನಡೆಯಾಗಿದೆ ಎಂದೂ ಹೇಳಿದ್ದಾರೆ.
PTI Videosನೊಂದಿಗೆ ಮಾತನಾಡಿರುವ ಯೋಗೇಂದ್ರ ಯಾದವ್, “ಇದು ಕೇವಲ ಆಪ್ ಪಕ್ಷಕ್ಕೆ ಆಗಿರುವ ಹಿನ್ನಡೆಯಲ್ಲ. ಬದಲಿಗೆ, 10-12 ವರ್ಷಗಳ ಹಿಂದೆ ದೇಶದಲ್ಲಿ ಪರ್ಯಾಯ ರಾಜಕಾರಣದ ಕನಸು ಕಂಡಿದ್ದ ಎಲ್ಲರಿಗೂ ಆಗಿರುವ ಹಿನ್ನಡೆ. ಇದು ಆಪ್ ಪಕ್ಷವನ್ನು ಬೆಂಬಲಿಸಿದ ಎಲ್ಲ ಪಕ್ಷಗಳು ಹಾಗೂ ದೇಶದಲ್ಲಿನ ಇಡೀ ವಿರೋಧ ಪಕ್ಷಗಳಿಗೆ ಆಗಿರುವ ಹಿನ್ನಡೆ” ಎಂದು ವ್ಯಾಖ್ಯಾನಿಸಿದ್ದಾರೆ.
“ನಾವು ಬಿಜೆಪಿಗಿಂತ ಶೇ. 4-5ರಷ್ಟು ಮತಗಳಿಂದ ಮಾತ್ರ ಹಿನ್ನಡೆ ಅನುಭವಿಸಿದ್ದೇವೆ ಎಂದು ಆಪ್ ಹೇಳಬಹುದು. ಆದರೆ, ಎಲ್ಲ ಭಾರಿ ಪ್ರಯತ್ನಗಳ ಹೊರತಾಗಿಯೂ ಅರವಿಂದ್ ಕೇಜ್ರಿವಾಲ್ ಹಾಗೂ ಮನೀಶ್ ಸಿಸೋಡಿಯಾ ಪರಾಭವಗೊಂಡಿರುವುದು ಆಪ್ ಪಕ್ಷದ ಭವಿಷ್ಯದ ಬಗ್ಗೆ ಪ್ರಶ್ನೆಗಳನ್ನು ಮೂಡಿಸುತ್ತದೆ” ಎಂದು ಅವರು ಹೇಳಿದ್ದಾರೆ.
“ಅವರು ಗುಜರಾತ್ ನಲ್ಲಿ ಗೆಲ್ಲಲು ಸಾಧ್ಯವಿಲ್ಲ. ಹೀಗಾಗಿ, ಆಪ್ ಶಾಸಕರನ್ನು ಸೆಳೆಯಲು ಬಿಜೆಪಿ ಪ್ರಯತ್ನಿಸುವುದರಿಂದ, ಎಲ್ಲ ಹೊರೆಯೂ ಪಂಜಾಬ್ ಮೇಲೆ ಬೀಳಲಿದೆ. ಇದನ್ನು ಆಪ್ ಹೇಗೆ ಎದುರಿಸುತ್ತದೆ ಎಂಬುದೇ ಬಹು ದೊಡ್ಡ ಪ್ರಶ್ನೆಯಾಗಿದೆ. ಇದು ಈಗ ಆಪ್ ನೊಂದಿಗೆ ಇರದಿದ್ದರೂ, ಪರ್ಯಾಯ ರಾಜಕಾರಣದ ಕನಸು ಕಂಡಿದ್ದವರಿಗೂ ಆಗಿರುವ ಹಿನ್ನಡೆಯಾಗಿದೆ” ಎಂದು ಅವರು ತಿಳಿಸಿದ್ದಾರೆ.
ಆದರೆ, ಅಧಿಕಾರಕ್ಕೆ ಬಂದ ಕೂಡಲೇ ಆಪ್ ಪರ್ಯಾಯ ರಾಜಕಾರಣವನ್ನು ನೀಡಿತಾದರೂ, ಅದು ಕೇವಲ ಕಲ್ಯಾಣ ಕಾರ್ಯಕ್ರಮಗಳಿಗೆ ಸೀಮಿತಗೊಂಡಿದ್ದರಿಂದ, ತುತ್ತತುದಿ ತಲುಪಿತು ಎಂದು ಅವರು ಹೇಳಿದ್ದಾರೆ.
“ಬಿಜೆಪಿಯು ದೇಶದಲ್ಲಿ ಸಂಪೂರ್ಣ ಹಿಡಿತವನ್ನು ಬಯಸುತ್ತಿರುವುದರಿಂದ, ವಿರೋಧ ಪಕ್ಷಗಳ ಪಾಲಿಗೆ ಇದೊಂದು ಸವಾಲಾಗಿದೆ. ಅವರು ಕೇವಲ ಗೆಲುವಿನಿಂದ ಸಂತುಷ್ಟಗೊಂಡಿಲ್ಲ. ಈ ಹೊಸ ಗೆಲುವಿನೊಂದಿಗೆ ಸಂಪೂರ್ಣ ಹಿಡಿತ ಸಾಧಿಸುವ ತಮ್ಮ ಯೋಜನೆಯಲ್ಲಿ ಅವರು ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದು, ಇದನ್ನು ವಿರೋಧಿಸುತ್ತಿರುವವರ ಪಾಲಿನ ಸವಾಲೂ ಕೂಡಾ ಇಮ್ಮಡಿಗೊಂಡಿದೆ” ಎಂದು ಅವರು ಎಚ್ಚರಿಸಿದ್ದಾರೆ.
ಆಪ್ ನಿಂದ ಮತಗಳು ವರ್ಗಾವಣೆಗೊಳ್ಳಲು ಕಾರಣವೇನು ಎಂಬ ಪ್ರಶ್ನೆಗೆ, ಇದಕ್ಕೂ ಮುಂಚೆ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ಚಲಾಯಿಸುತ್ತಿದ್ದ ಮೋದಿ ಬೆಂಬಲಿಗರು, ವಿಧಾನಸಭಾ ಚುನಾವಣೆಯಲ್ಲಿ ಆಪ್ ಗೆ ತಮ್ಮ ಬೆಂಬಲವನ್ನು ವರ್ಗಾಯಿಸುತ್ತಿದ್ದರು. ಆದರೆ, ಈ ಬಾರಿ ವಿಧಾನಸಭಾ ಚುನಾವಣೆಯಲ್ಲೂ ಕೆಲವರು ಬಿಜೆಪಿಯೊಂದಿಗೆ ಉಳಿದುಕೊಂಡಿದ್ದಾರೆ ಎಂದು ಯೋಗೇಂದ್ರ ಯಾದವ್ ಹೇಳಿದ್ದಾರೆ.
“ಮೋದಿಯ ಹಲವಾರು ಬೆಂಬಲಿಗರು ಕೇಜ್ರಿವಾಲ್ ಗೆ ಮತ ಚಲಾಯಿಸುತ್ತಿದ್ದರು. ಆದರೆ, ಈ ಬಾರಿ ಅವರು ಕೇಜ್ರಿವಾಲ್ ಗೆ ಮತ ಚಲಾಯಿಸಿಲ್ಲ. ಯಾಕೆಂದರೆ, ಅಬಕಾರಿ ಹಗರಣ ಹಾಗೂ ಶೀಶ್ ಮಹಲ್ ವಿವಾದ ಆಪ್ ಪಕ್ಷದ ಪ್ರಾಮಾಣಿಕ ಚಾರಿತ್ರ್ಯವನ್ನು ಮುಕ್ಕಾಗಿಸಿತು” ಎಂದು ಅವರು ಹೇಳಿದ್ದಾರೆ.
ಅರವಿಂದ್ ಕೇಜ್ರಿವಾಲ್ ಮುಖ್ಯದಮಂತ್ರಿಯಾಗಿದ್ದಾಗ, ನವೀಕರಿಸಲಾಗಿದ್ದ ದಿಲ್ಲಿ ಮುಖ್ಯಮಂತ್ರಿಯ ನಿವಾಸವನ್ನು ‘ಶೀಶ್ ಮಹಲ್’ ಎಂದು ಬಿಜೆಪಿ ಪ್ರಚಾರ ಮಾಡಿತ್ತು.
ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಹಾಗೂ ಆಪ್ ನಡುವಿನ ನಿರಂತರ ಕಿತ್ತಾಟ ಕೂಡಾ ಆಪ್ ಪಕ್ಷದ ವೈಫಲ್ಯಕ್ಕೆ ಕಾರಣ ಎಂದು ಅವರು ವ್ಯಾಖ್ಯಾನಿಸಿದ್ದಾರೆ.
“ಕಿತ್ತಾಟವು ಮುಂದುವರಿದಿದ್ದರಿಂದ, ಮೂಲಭೂತ ಕೆಲಸಗಳು ನಿರ್ಲಕ್ಷ್ಯಕ್ಕೊಳಗಾಗಿದ್ದರಿಂದ ಹಾಗೂ ಪ್ರತಿದಿನ ಲೆಫ್ಟಿನೆಂಟ್ ಗವರ್ನರ್ ಹಾಗೂ ಸರಕಾರದ ನಡುವಿನ ಕಿತ್ತಾಟದಿಂದ ನಾವು ಈ ಬಾರಿ ಬಿಜೆಪಿಯನ್ನು ಬೆಂಬಲಿಸಬೇಕು ಎಂಬ ಭಾವನೆ ಮೋದಿ ಬೆಂಬಲಿಗರಲ್ಲಿ ಮೂಡಿರುವ ಸಾಧ್ಯತೆ ಇದೆ” ಎಂದು ಯಾದವ್ ಅಭಿಪ್ರಾಯಪಟ್ಟಿದ್ದಾರೆ.
ಆಪ್-ಕಾಂಗ್ರೆಸ್ ನಡುವಿನ ಮೈತ್ರಿ ಉಳಿಯುತ್ತಿರಲಿಲ್ಲ ಎಂದು ಅವರು ಅಭಿಪ್ರಾಯ ಪಟ್ಟರೂ, ಇಂಡಿಯಾ ಮೈತ್ರಿಕೂಟದ ಪ್ರಮುಖ ಅಂಗ ಪಕ್ಷಗಳಾದ ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ, ಎನ್ಸಿಪಿ (ಎಸ್ಪಿ) ಹಾಗೂ ಶಿವಸೇನೆ (ಯುಬಿಟಿ) ಆಪ್ ಪಕ್ಷಕ್ಕೆ ತಮ್ಮ ಬೆಂಬಲವನ್ನು ವಿಸ್ತರಿಸಿದ್ದರಿಂದ, ಇಂಡಿಯಾ ಮೈತ್ರಿಕೂಟದಲ್ಲಿ ಕೆಲವು ಗಂಭೀರ ಬಿಕ್ಕಟ್ಟಿದೆ ಎಂಬ ಸುಳಿವು ನೀಡಿತು ಎಂದು ಅವರು ಹೇಳಿದ್ದಾರೆ.
“ಕಾಂಗ್ರೆಸ್-ಆಪ್ ಮೈತ್ರಿ ದೀರ್ಘಕಾಲ ಉಳಿಯುತ್ತಿರಲಿಲ್ಲ ಹಾಗೂ ಈ ಸಂಗತಿ ಲೋಕಸಭಾ ಚುನಾವಣೆ ಸಂದರ್ಭದಲ್ಲೇ ಸ್ಪಷ್ಟವಾಗಿತ್ತು. ಬಿಜೆಪಿ ವಿರೋಧಿ ಮೈತ್ರಿಕೂಟದಲ್ಲಿ ಆಪ್ ಆರಾಮವಾಗಿರಲಿಲ್ಲ. ಸಮಾಜವಾದಿ ಪಕ್ಷ, ಟಿಎಂಸಿಯಂತಹ ಇತರ ಪಕ್ಷಗಳು ಆಪ್ ಗೆ ಬೆಂಬಲಿಸಿದವು. ಅವು ಇಂಡಿಯಾ ಮೈತ್ರಿಕೂಟದ ಪಾಲಿಗೆ ಮಹತ್ವದ್ದಾಗಿವೆ. ಮಹಾರಾಷ್ಟ್ರ ಚುನಾವಣೆಯಾದಾಗಿನಿಂದ ಇಂಡಿಯಾ ಮೈತ್ರಿಕೂಟವು ಅನಿಶ್ಚಿತತೆ ಎದುರಿಸುತ್ತಿರುವುದರಿಂದ, ಈ ಬೆಂಬಲವು ಇಂಡಿಯಾ ಮೈತ್ರಿಕೂಟದಲ್ಲಿ ಗಂಭೀರ ಬಿಕ್ಕಟ್ಟಿದೆ ಎಂಬುದನ್ನು ಸೂಚಿಸಿತ್ತು. ಇದು ವಿರೋಧ ಪಕ್ಷಗಳ ಪಾಲಿಗೆ ಅಪಾಯಕಾರಿ ಚಿಹ್ನೆಯಾಗಿದೆ” ಎಂದು ಅವರು ಎಚ್ಚರಿಸಿದ್ದಾರೆ.
ಇತ್ತೀಚಿನ ವರದಿಗಳ ಪ್ರಕಾರ, ಬಿಜೆಪಿ 47 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಒಂದು ಕ್ಷೇತ್ರದಲ್ಲಿ ಮುನ್ನಡೆಯಲ್ಲಿದೆ. ಆಪ್ 22 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ದಾಖಲಿಸಿದೆ. ಮತ್ತೊಂದು ಪ್ರಮುಖ ಪಕ್ಷವಾದ ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿದೆ.