ಜಾರ್ಖಂಡ್ ವಿಧಾನಸಭಾ ಚುನಾವಣೆ | ನುಸುಳುಕೋರರನ್ನು ಹೊರಹಾಕಲು ಬುಲ್ಡೋಝರ್ ಗಳು ಕಾಯುತ್ತಿವೆ: ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ್ | PC : PTI
ನಳ (ಜಮ್ತಾರ): ಲೂಟಿ ಮಾಡಿದ ಸಂಪತ್ತನ್ನು ವಶಪಡಿಸಿಕೊಳ್ಳಲು ಹಾಗೂ ನುಸುಳುಕೋರರನ್ನು ಹೊರ ಹಾಕಲು ಬುಲ್ಡೋಝರ್ ಗಳು ಕಾಯುತ್ತಿವೆ ಎಂದು ಸೋಮವಾರ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಜೆಎಂಎಂ ನೇತೃತ್ವದ ಮೈತ್ರಿಕೂಟದ ವಿರುದ್ಧದ ತಮ್ಮ ವಾಗ್ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದ ಅವರು, ಜೆಎಂಎಂ ನೇತತ್ವದ ಮೈತ್ರಿಕೂಟವು ನೈಸರ್ಗಿಕ ಸಂಪನ್ಮೂಲಗಳು ಹಾಗೂ ಪ್ರಧಾನಿ ನರೇಂದ್ರ ಮೋದಿ ಕಳಿಸಿದ್ದ ಕೇಂದ್ರ ಅನುದಾನಗಳ ದರೋಡೆಯಲ್ಲಿ ಮುಳುಗಿದೆ ಎಂದು ಅವರು ಆರೋಪಿಸಿದರು.
ಜಮ್ತಾರದ ನಳದಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, “ಜೆಎಂಎಂ ನೇತತ್ವದ ಮೈತ್ರಿಕೂಟವು ಜಾರ್ಖಂಡ್ ನ ನೈಸರ್ಗಿಕ ಸಂಪನ್ಮೂಲಗಳು ಹಾಗೂ ಮೋದಿ ಕಳಿಸಿದ ಕೇಂದ್ರ ಅನುದಾನಗಳನ್ನು ಲೂಟಿ ಹೊಡೆದಿದೆ. ಅಲ್ಲದೆ, ಬಾಂಗ್ಲಾದೇಶಿ ವಲಸಿಗರು ಹಾಗೂ ರೋಹಿಂಗ್ಯಾಗಳ ಒಳನುಸುಳುವಿಕೆಗೆ ಕುಮ್ಮಕ್ಕು ನೀಡುವ ಮೂಲಕ, ಮಗಳು, ಭೂಮಿ ಹಾಗೂ ರೊಟ್ಟಿಗೆ ಗಂಭೀರ ತೊಂದರೆಯುಂಟು ಮಾಡಿದೆ. ಇದೀಗ, ಲೂಟಿ ಹೊಡೆದ ನಿಧಿಯನ್ನು ವಶಪಡಿಸಿಕೊಳ್ಳಲು ಬುಲ್ಡೋಝರ್ ಗಳು ಕಾದು ಕುಳಿತಿವೆ” ಎಂದು ಎಚ್ಚರಿಸಿದರು.
ಇದೇ ವೇಳೆ, ಸುರಕ್ಷಿತವಾಗುಳಿಯಲು ಹಿಂದೂಗಳು ಒಗ್ಗಟ್ಟಾಗಬೇಕು ಎಂದೂ ಕರೆ ನೀಡಿದ ಅವರು, ಅಯೋಧ್ಯೆಯಲ್ಲಿನ ರಾಮಮಂದಿರದ ನಂತರ, ಇದೀಗ ಮಥುರಾದಲ್ಲಿನ ಕೃಷ್ಣ ದೇವಾಲಯದ ಸರದಿ ಎಂದು ಪ್ರತಿಪಾದಿಸಿದರು.
ಮರಳು, ಕಲ್ಲಿದ್ದಲು ಹಾಗೂ ಅರಣ್ಯ ಸಂಪನ್ಮೂಲಗಳ ಕಬಳಿಕೆ ತೀವ್ರವಾಗಿ ಸಾಗುತ್ತಿದ್ದು, ಇದಕ್ಕೆ ಆಡಳಿತಾರೂಢ ಮೈತ್ರಿಕೂಟದ ರಕ್ಷಣೆ ಇದೆ. ಇದರಿಂದ ಜಾರ್ಖಂಡ್ ಮಾಫಿಯಾ ಚಟುವಟಿಕೆಗಳ ಸ್ವರ್ಗವಾಗಿ ಬದಲಾಗಿದೆ ಎಂದೂ ಅವರು ಆರೋಪಿಸಿದರು.
ಜಾರ್ಖಂಡ್ ನಲ್ಲಿ ಲ್ಯಾಂಡ್ ಜಿಹಾದ್ ಮತ್ತು ಲವ್ ಜಿಹಾದ್ ನಲ್ಲಿ ಭಾಗಿಯಾಗಿರುವ ನುಸುಳುಕೋರರಿಗೆ ಜೆಎಂಎಂ ನೇತೃತ್ವದ ಸರಕಾರದ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದ ಅವರು, ಒಂದು ವೇಳೆ ಎನ್ಡಿಎ ಸರಕಾರ ಅಧಿಕಾರಕ್ಕೆ ಬಂದರೆ ಅಂತಹ ಶಕ್ತಿಗಳನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಸಿದರು.