"ನಾವು ಜಾಮೀನು ಮಂಜೂರು ಮಾಡಿದ ಮರುದಿನ ನೀವು ಸಚಿವರಾದಿರಿ": ಸೆಂಥಿಲ್ ಬಾಲಾಜಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅಚ್ಚರಿ
ವಿ.ಸೆಂಥಿಲ್ ಬಾಲಾಜಿ | PC : NDTV
ಹೊಸದಿಲ್ಲಿ: ಜಾಮೀನು ದೊರೆತ ಬೆನ್ನಿಗೇ ವಿ.ಸೆಂಥಿಲ್ ಬಾಲಾಜಿ ತಮಿಳುನಾಡು ಸಚಿವರಾಗಿ ನೇಮಕಗೊಂಡಿರುವ ಕುರಿತು ಸೋಮವಾರ ಅಚ್ಚರಿ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಜಾಮೀನು ಮಂಜೂರಾದ ನಂತರ, ಸಾಕ್ಷಿಗಳು ಒತ್ತಡಕ್ಕೆ ಒಳಗಾಗಿದ್ದಾರೆಯೇ ಎಂಬ ಸಂಗತಿಯ ಕುರಿತು ತಾನು ಪರಿಶೀಲಿಸುವುದಾಗಿ ಹೇಳಿದೆ.
ಆದರೆ, ಜಾಮೀನು ತೀರ್ಪನ್ನು ರದ್ದುಗೊಳಿಸುವ ಕ್ರಮದಿಂದ ನ್ಯಾ. ಅಭಯ್ ಎಸ್. ಓಕಾ ಹಾಗೂ ನ್ಯಾ. ಆಗಸ್ಟಿನ್ ಜಾರ್ಜ್ ಮಸೀಹ್ ಅವರನ್ನೊಳಗೊಂಡಿದ್ದ ನ್ಯಾಯಪೀಠ ದೂರ ಉಳಿಯಿತು.
“ನಾವು ಜಾಮೀನು ಮಂಜೂರು ಮಾಡಿದೆವು ಹಾಗೂ ನೀವು ಮರು ದಿನವೇ ಸಚಿವರಾದಿರಿ! ನಿಮ್ಮ ಈಗಿನ ಹಿರಿಯ ಸಂಪುಟ ಸಚಿವ ಹುದ್ದೆಯಿಂದ ಸಾಕ್ಷಿಗಳು ಒತ್ತಡಕ್ಕೆ ಒಳಗಾಗಿದ್ದಾರೆ ಎಂದು ಯಾರಾದರೂ ಭಾವಿಸಬಹುದಾಗಿದೆ. ಏನಾಗುತ್ತಿದೆ ಇಲ್ಲಿ?” ಎಂದು ನ್ಯಾ. ಓಕಾ ಪ್ರಶ್ನಿಸಿದರು.
ತಮಿಳುನಾಡು ಸಚಿವ ವಿ.ಸೆಂಥಿಲ್ ಬಾಲಾಜಿ ವಿರುದ್ಧ ಮೇಲ್ನೋಟದ ಸಾಕ್ಷಿಗಳಿರುವುದನ್ನು ಸುಪ್ರೀಂ ಕೋರ್ಟ್ ಪತ್ತೆ ಹಚ್ಚಿದರೂ, ಅವರು ದೀರ್ಘಾವಧಿಯಿಂದ ಬಂಧನದಲ್ಲಿದ್ದಾರೆ (ಜೂನ್ 2023ರಿಂದ) ಹಾಗೂ ಶೀಘ್ರದಲ್ಲೇ ವಿಚಾರಣೆ ನಡೆಯುವ ಸಾಧ್ಯತೆ ಇಲ್ಲ ಎಂಬ ಅಂಶಗಳನ್ನು ಪರಿಗಣಿಸಿ ಅವರಿಗೆ ಜಾಮೀನು ಮಂಜೂರು ಮಾಡಿತ್ತು.
ಜೈಲಿನಿಂದ ಬಿಡುಗಡೆಗೊಂಡ ಕೂಡಲೇ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸಂಪುಟದಲ್ಲಿ ವಿದ್ಯುತ್, ಅಸಾಂಪ್ರದಾಯಿಕ ಇಂಧನಗಳ ಅಭಿವೃದ್ಧಿ, ಅಬಕಾರಿ ಸಚಿವರಾಗಿ ವಿ.ಸೆಂಥಿಲ್ ಬಾಲಾಜಿ ಪ್ರಮಾಣ ವಚನ ಸ್ವೀಕರಿಸಿದ್ದರು.