ಸೋಫಾದ ಮೇಲೆ ಕುಳಿತು ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಾ, ನ್ಯಾಯಾಲಯವನ್ನು ವಿಡಂಬಿಸುವಂತಿಲ್ಲ : ಭಾರತೀಯ ವೈದ್ಯಕೀಯ ಮಂಡಳಿ ಅಧ್ಯಕ್ಷರ ಕ್ಷಮಾಯಾಚನೆಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್
ಆರ್.ವಿ.ಅಶೋಕನ್ , ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ: “ನೀವು ಸೋಫಾದ ಮೇಲೆ ಕುಳಿತುಕೊಂಡು ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಾ, ನ್ಯಾಯಾಲಯವನ್ನು ವಿಡಂಬಿಸುವ ಅಗತ್ಯವಿಲ್ಲ” ಎಂದು ನ್ಯಾ. ಹಿಮಾ ಕೊಹ್ಲಿ ಹಾಗೂ ನ್ಯಾ. ಅಹ್ಸಾನುದ್ದೀನ್ ಅಮಾನುಲ್ಲಾ ಅವರನ್ನೊಳಗೊಂಡ ಪೀಠವು IMA ಅಧ್ಯಕ್ಷ ಆರ್.ವಿ.ಅಶೋಕನ್ ಅವರಿಗೆ ಚಾಟಿ ಬೀಸಿದೆ. ಈ ಹಂತದಲ್ಲಿ ಅಶೋಕನ್ ಅವರ ಕ್ಷಮಾಪಣಾ ಪ್ರಮಾಣ ಪತ್ರವನ್ನು ಅಂಗೀಕರಿಸಲು ಸಾಧ್ಯವಿಲ್ಲ ಎಂದೂ ನ್ಯಾಯಾಲಯವು ಸ್ಪಷ್ಟಪಡಿಸಿತು.
ಭಾರತೀಯ ವೈದ್ಯಕೀಯ ಮಂಡಳಿ(IMA)ಯ ಅಧ್ಯಕ್ಷ ಆರ್.ವಿ.ಅಶೋಕನ್ ಅವರ ಬೇಷರತ್ ಕ್ಷಮಾಪಣೆಯನ್ನು ಮಂಗಳವಾರ ತಿರಸ್ಕರಿಸಿರುವ ಸುಪ್ರೀಂ ಕೋರ್ಟ್, ಅವರಿಗೆ ಕೆಲವು ಕಠಿಣ ಪ್ರಶ್ನೆಗಳನ್ನು ಕೇಳಿದೆ. PTI ಸುದ್ದಿ ಸಂಸ್ಥೆಗೆ ನೀಡಿದ್ದ ಸಂದರ್ಶನದಲ್ಲಿ ಅಶೋಕನ್ ಸುಪ್ರೀಂ ಕೋರ್ಟ್ ಘನತೆಗೆ ಧಕ್ಕೆಯಾಗುವಂಥ ಹೇಳಿಕೆಗಳನ್ನು ನೀಡಿ, ಸರ್ವೋಚ್ಛ ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾಗಿದ್ದರು.
“ಅಭಿವ್ಯಕ್ತಿ ಸ್ವಾತಂತ್ರ್ಯ, ಮುಕ್ತ ಅಭಿವ್ಯಕ್ತಿ ಹಕ್ಕು ಹಾಗೂ ಚಿಂತನೆಯ ಹಕ್ಕನ್ನು ಎತ್ತಿ ಹಿಡಿಯುವುದರಲ್ಲಿ ನಾವೇ ಮೊದಲಿಗರಾಗಿದ್ದರೂ, ಸ್ವಯಂ ನಿಯಂತ್ರಣದ ಸಂದರ್ಭಗಳೂ ಇವೆ” ಎಂದು ನ್ಯಾ. ಹಿಮಾ ಕೊಹ್ಲಿ ಅಭಿಪ್ರಾಯಪಟ್ಟರು. “ನಾವದನ್ನು ನಿಮ್ಮ ಸಂದರ್ಶನದಲ್ಲಿ ಕಾಣಲಿಲ್ಲ” ಎಂಬುದರತ್ತ ಅವರು ಬೊಟ್ಟು ಮಾಡಿದರು. ನ್ಯಾಯಾಲಯದಲ್ಲಿದ್ದ ಹಾಜರಿದ್ದ ಅಶೋಕನ್, ನ್ಯಾಯಪೀಠದ ಬೇಷರತ್ ಕ್ಷಮೆ ಯಾಚಿಸಿದರು ಹಾಗೂ ಕ್ಷಮಾದಾನಕ್ಕೆ ಮನವಿ ಮಾಡಿದರು.