ನಿಮ್ಮ ನೀರಿನ ಬಾಟಲ್ನಲ್ಲಿ 2,40,000 ಪ್ಲಾಸ್ಟಿಕ್ ತುಣುಕುಗಳು ಇರಬಹುದು: ಅಧ್ಯಯನ ವರದಿ
ಸಾಂದರ್ಭಿಕ ಚಿತ್ರ (Credit:waterlogicaustralia.com.au)
ನೀವು ಅಂಗಡಿಯಲ್ಲಿ ಖರೀದಿಸುವ ಕುಡಿಯುವ ನೀರಿನ ಬಾಟಲಿಯಲ್ಲಿಯ ನೀರನ್ನು ನಿಸರ್ಗದಲ್ಲಿಯ ಪರಿಶುದ್ಧ ಬುಗ್ಗೆಗಳಿಂದ ಸಂಗ್ರಹಿಸಲಾಗಿದೆ ಎಂದು ಅದರ ಜಾಹೀರಾತು ಹೇಳುತ್ತಿರಬಹುದು, ಆದರೆ ವಾಸ್ತವವು ನಿಮ್ಮ ಊಹೆಗೂ ಮೀರಿ ಕೆಟ್ಟದ್ದಾಗಿರಬಹುದು. ಹೊಸ ಸಂಶೋಧನೆಯೊಂದು ಇದೇ ಮೊದಲ ಬಾರಿಗೆ ಇಂತಹ ಪ್ಯಾಕೇಜ್ಡ್ ಬಾಟಲ್ಗಳಲ್ಲಿ ಕಣ್ಣಿಗೆ ಕಾಣದ ಸುಮಾರು ಕಾಲು ಮಿಲಿಯನ್ನಷ್ಟು ನ್ಯಾನೊಪ್ಲಾಸ್ಟಿಕ್ನ ಪುಟ್ಟ ತುಣುಕುಗಳನ್ನು ಪತ್ತೆ ಹಚ್ಚಿ, ಅವುಗಳನ್ನು ವರ್ಗೀಕರಿಸಿದೆ ಎಂದು indianexpress.com ವರದಿ ಮಾಡಿದೆ.
ಪ್ಯಾಕೇಜ್ಡ್ ಬಾಟಲಿಯಲ್ಲಿಯ ನೀರಿನಲ್ಲಿ ಸೂಕ್ಷ್ಮ ಪ್ಲಾಸ್ಟಿಕ್ ತುಣುಕುಗಳು ಇರುತ್ತವೆ ಎನ್ನುವುದು ಗೊತ್ತಿರುವ ರಹಸ್ಯವೇ ಆಗಿತ್ತು,ಆದರೆ ಎಷ್ಟು ಪ್ಲಾಸ್ಟಿಕ್ ತುಣುಕುಗಳಿರುತ್ತವೆ ಮತ್ತು ಅವು ಯಾವ ಬಗೆಯದು ಎನ್ನುವುದು ಗೊತ್ತಿರಲಿಲ್ಲ. ಇದೀಗ ಕೊಲಂಬಿಯಾ ವಿವಿ ಮತ್ತು ರಟ್ಗರ್ಸ್ ವಿವಿಯ ಸಂಶೋಧಕರ ಅಧ್ಯಯನವು ಅದನ್ನು ಬಹಿರಂಗಗೊಳಿಸಿದೆ.
ಪ್ರೊಸೀಡಿಂಗ್ಸ್ ಆಫ್ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ನಲ್ಲಿ ಸೋಮವಾರ ಪ್ರಕಟಗೊಂಡಿರುವ ಅಧ್ಯಯನ ವರದಿಯಲ್ಲಿ ಸಂಶೋಧಕರು ಪ್ಲಾಸ್ಟಿಕ್ ಕಣಗಳ ಮಟ್ಟವು ಪ್ರತಿ ಲೀಟರ್ಗೆ 1,10,000 ದಿಂದ 4,00,000 ದ ನಡುವೆಯಿದ್ದು, ಸರಾಸರಿ ಮಟ್ಟವು ಸುಮಾರು 2,40,000ದಷ್ಟಿದೆ ಎನ್ನುವುದನ್ನು ದಾಖಲಿಸಿದ್ದಾರೆ.
ಸಂಶೋಧಕರು ತಮ್ಮ ಅಧ್ಯಯನಕ್ಕೆ ಅತ್ಯಂತ ಸೂಕ್ಷ್ಮ ಕಣಗಳನ್ನೂ ಪತ್ತೆ ಹಚ್ಚಬಲ್ಲ ಅತ್ಯಾಧುನಿಕ ಲೇಸರ್ ತಂತ್ರಜ್ಞಾನವನ್ನು ಬಳಸಿದ್ದರು. ಇದು ಬಾಟಲ್ ನೀರಿನಲ್ಲಿಯ ಪತ್ತೆ ಹಚ್ಚಬಹುದಾದ ಪ್ಲಾಸ್ಟಿಕ್ ಕಣಗಳ ಸಂಖ್ಯೆಯನ್ನು 10 ಪಟ್ಟುಗಳಿಗೂ ಅಧಿಕ ಮತ್ತು ಕೆಲವು ಸಂದರ್ಭಗಳಲ್ಲಿ ನೂರು ಪಟ್ಟುಗಳಷ್ಟು ಹೆಚ್ಚಿಸಿದೆ.
ಈ ಪ್ಲಾಸ್ಟಿಕ್ ಕಣಗಳ ಹೆಚ್ಚಿನ ಭಾಗವು ಬಾಟಲಿಯಿಂದಲೇ ಉತ್ಪನ್ನಗೊಳ್ಳುತ್ತವೆ ಮತ್ತು ಉಳಿದವುಗಳಲ್ಲಿ ಹೆಚ್ಚಿನವು ಇತರ ಮಾಲಿನ್ಯಕಾರಕಗಳನ್ನು ಹೊರಗಿಡಲು ಬಳಸಲಾಗುವ ರಿವರ್ಸ್ ಒಸ್ಮೊಸಿಸ್ ಮೆಂಬ್ರೇನ್ ಫಿಲ್ಟರ್ನಿಂದ ಬರುತ್ತವೆ ಎಂದು ಅಂದಾಜಿಸಲಾಗಿದೆ. ರಿವರ್ಸ್ ಒಸ್ಮೊಸಿಸ್ ನೀರಿನ ಶುದ್ಧೀಕರಣ ಪ್ರಕ್ರಿಯೆಯಾಗಿದೆ. ಸಂಶೋಧಕರು ಅಧ್ಯಯನಕ್ಕೆ ಬಳಸಿದ್ದ ಬಾಟಲ್ಡ್ ನೀರಿನ ಮೂರು ಬ್ರ್ಯಾಂಡ್ಗಳನ್ನು ಸದ್ಯಕ್ಕೆ ಬಹಿರಂಗಗೊಳಿಸಿಲ್ಲ,ಇನ್ನಷ್ಟು ಹೆಚ್ಚಿನ ಬ್ರ್ಯಾಂಡ್ಗಳನ್ನು ಅಧ್ಯಯನಕ್ಕೆ ಒಳಪಡಿಸಲು ಅವರು ಉದ್ದೇಶಿಸಿರುವುದು ಇದಕ್ಕೆ ಕಾರಣವಾಗಿದೆ. ಈ ಬ್ರ್ಯಾಂಡ್ಗಳು ಸಾಮಾನ್ಯವಾಗಿ ಅಮೆರಿಕದಲ್ಲಿ ಲಭ್ಯವಿರುವ ಬ್ರ್ಯಾಂಡ್ಗಳಾಗಿವೆ.
ಬಾಟಲ್ಡ್ ನೀರಿನಲ್ಲಿಯ ಪ್ಲಾಸ್ಟಿಕ್ ತುಣುಕುಗಳ ವಿವಿಧ ಗಾತ್ರಗಳು ಮತ್ತು ಆಕಾರಗಳಿಂದ ಅವು ಎಲ್ಲಿಂದ ಬಂದಿವೆ ಎನ್ನುವುದನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಉದಾಹರಣೆಗೆ ಪಾಲಿಥಿಲಿನ್ ಟೆರೆಫ್ತಾಲೇಟ್ (ಪಿಇಟಿ ಅಥವಾ ಪೆಟ್) ದಪ್ಪ ಮೈಕ್ರೋಮೀಟರ್ ಗಾತ್ರದ ಚೂರುಗಳಲ್ಲಿ ಕಾಣಿಸಿಕೊಂಡಿದ್ದು,ಇವು ಹೆಚ್ಚಾಗಿ ಪೆಟ್ನಿಂದ ತಯಾರಾಗುವ ಬಾಟಲ್ಗಳಿಂದಲೇ ಬಂದಿದ್ದವು.
ಚಿಕ್ಕ ನ್ಯಾನೋಪಾರ್ಟಿಕಲ್ಗಳು ಬಾಟಲ್ಡ್ ನೀರಿನ ಉತ್ಪಾದನೆಯ ಆರಂಭಿಕ ಹಂತದಲ್ಲಿ ನೀರಿನ ಶುದ್ಧೀಕರಣ ಪ್ರಕ್ರಿಯೆಯಲ್ಲಿ ಸೇರಿಕೊಂಡಿರಬಹುದು. ಸಂಸ್ಕರಣೆಯಲ್ಲಿ ಅವು ಇನ್ನಷ್ಟು ಚಿಕ್ಕ ಕಣಗಳಾಗಿ ವಿಭಜಿಸಲ್ಪಟ್ಟಿರಬಹುದು ಎನ್ನುವುದು ಸಂಶೋಧಕರ ಅಭಿಪ್ರಾಯವಾಗಿದೆ.
ಆದರೆ ನ್ಯಾನೊಪ್ಲಾಸ್ಟಿಕ್ಗಳು ಆರೋಗ್ಯಕ್ಕೆ ಹಾನಿಕಾರಕವೇ ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಸಂಶೋಧಕರು ಇನ್ನೂ ಉತ್ತರಿಸಿಲ್ಲ.
‘ಅದು ಸದ್ಯಕ್ಕೆ ಪರಿಶೀಲನೆಯಲ್ಲಿದೆ. ಅದು ಅಪಾಯಕಾರಿಯೇ ಅಥವಾ ಎಷ್ಟು ಅಪಾಯಕಾರಿ ಎನ್ನುವುದು ನಮಗೆ ಇನ್ನೂ ತಿಳಿದಿಲ್ಲ. ಅವು ಮಾನವರು ಸೇರಿದಂತೆ ಸಸ್ತನಿಗಳ ಅಂಗಾಂಶಗಳನ್ನು ಪ್ರವೇಶಿಸುತ್ತವೆಯೇ ಎನ್ನುವುದು ನಮಗೆ ಗೊತ್ತಿಲ್ಲ. ಈ ನ್ಯಾನೋಪ್ಲಾಸ್ಟಿಕ್ಗಳು ಜೀವಕೋಶಗಳಲ್ಲಿ ಯಾವ ಚಟುವಟಿಕೆಗಳನ್ನು ನಡೆಸುತ್ತವೆ ಎಂಬ ಬಗ್ಗೆ ಅಧ್ಯಯನ ನಡೆಯುತ್ತಿದೆ’ ಎಂದು ಅಧ್ಯಯನ ವರದಿಯ ಸಹಲೇಖಕಿ ರಟ್ಗರ್ಸ್ನ ವಿಷಶಾಸ್ತ್ರಜ್ಞೆ ಫೀಬಿ ಸ್ಟ್ಯಾಪಲ್ಟನ್ ಹೇಳಿದರು.
ಆದರೆ ತಮ್ಮ ಅಧ್ಯಯನದ ಬಳಿಕ ತಾವು ಬಾಟಲ್ ನೀರಿನ ಬಳಕೆಯನ್ನು ಕಡಿಮೆ ಮಾಡಿರುವುದಾಗಿ ಸಂಶೋಧಕರು ಒಪ್ಪಿಕೊಂಡಿದ್ದಾರೆ.