ನಿಮ್ಮ ಒಂದು ಮತ ಪ್ರಜಾಪ್ರಭುತ್ವವನ್ನು ರಕ್ಷಿಸಲಿದೆ: ಮತದಾರರಿಗೆ ಪ್ರಿಯಾಂಕಾ ಗಾಂಧಿ ಕರೆ
ಪ್ರಿಯಾಂಕಾ ಗಾಂಧಿ | PC : ANI
ಹೊಸದಿಲ್ಲಿ: ನಿಮ್ಮ ಒಂದು ಮತ ದೇಶವನ್ನು ಹಣದುಬ್ಬರ, ನಿರುದ್ಯೋಗ ಮತ್ತು ಆರ್ಥಿಕ ಸಂಕಷ್ಟದಿಂದ ಮುಕ್ತಗೊಳಿಸುತ್ತದೆ. ಅತ್ಯಧಿಕ ಪ್ರಮಾಣದಲ್ಲಿ ಮತ ಹಾಕುವಂತೆ ಮತದಾರರಿಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಕರೆ ನೀಡಿದ್ದಾರೆ. ಲೋಕಸಭಾ ಚುನಾವಣೆಯ 5ನೇ ಹಂತದ ಮತದಾನ ಇಂದು ನಡೆಯುತ್ತಿದ್ದು, ರಾಜಕೀಯ ನಾಯಕರು, ಸ್ಟಾರ್ ನಟ, ನಟಿಯರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ‘ನಿಮ್ಮ ಒಂದು ಮತದಿಂದ ಪ್ರತಿ ಬಡಕುಟುಂಬದ ಮಹಿಳೆಯ ಬ್ಯಾಂಕ್ ಖಾತೆಗೆ ವಾರ್ಷಿಕವಾಗಿ 1 ಲಕ್ಷ ರೂ ಜಮೆ ಆಗಲಿದೆ. ಪ್ರತಿಯೊಬ್ಬ ನಾಗರಿಕ ಉಚಿತ ಚಿಕಿತ್ಸೆ ಪಡೆಯಲಿದ್ದಾನೆ. ಯುವಕರು ಸರ್ಕಾರಿ ಹುದ್ದೆ ಪಡೆಯಲಿದ್ದಾರೆ. ಎಸ್ಸಿ, ಎಸ್ಟಿ,ಒಬಿಸಿ ಜನರಿಗೆ ಸ್ಥಾನಮಾನ ಸಿಗಲಿದೆ. ನಿಮ್ಮ ಒಂದು ಮತ ದೇಶದ ಪ್ರಜಾಪ್ರಭುತ್ವ, ಸಂವಿಧಾನವನ್ನು ರಕ್ಷಿಸಲಿದೆ’ ಎಂದು ಹೇಳಿದ್ದಾರೆ.
ಬಿಹಾರದ ಐದು, ಜಮ್ಮುಕಾಶ್ಮೀರದ ಒಂದು, ಜಾರ್ಖಂಡ್ನ ಮೂರು ಹಾಗೂ ಲಡಾಕ್ನ ಒಂದು, ಮಹಾರಾಷ್ಟ್ರದ 13 ಹಾಗೂ ಒಡಿಶಾದ ಐದು, ಉತ್ತರಪ್ರದೇಶದ 14 ಹಾಗೂ ಪಶ್ಚಿಮಬಂಗಾಳದ ಏಳು ಲೋಕಸಭಾ ಕ್ಷೇತ್ರಗಳಿಗೆ ಸೋಮವಾರ ಮತದಾನ ನಡೆಯುತ್ತಿದೆ. 49 ಕ್ಷೇತ್ರಗಳಲ್ಲಿ ಒಟ್ಟು 695 ಅಭ್ಯರ್ಥಿಗಳು ಕಣದಲ್ಲಿದ್ದು, ಮಹಾರಾಷ್ಟ್ರದಲ್ಲಿ ಗರಿಷ್ಠ 264 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ (ರಾಯ್ಬರೇಲಿ), ಕಿಶೋರಿ ಲಾಲ್ ಶರ್ಮಾ (ಆಮೇಠಿ), ಬಿಜೆಪಿಯ ಸ್ಮೃತಿ ಇರಾನಿ (ಆಮೇಥಿ), ಪಿಯೂಶ್ ಗೋಯಲ್ (ಮುಂಬೈ ಉತ್ತರ), ರಾಜನಾಥ ಸಿಂಗ್ (ಲಕ್ನೋ) ಹಾಗ ಚಿರಾಗ್ ಪಾಸ್ವಾನ್ (ಹಾಜಿಪುರ), ಐದನೇ ಹಂತದ ಚುನಾವಣೆಯಲ್ಲಿ ಕಣದಲ್ಲಿರುವ ಪ್ರಮುಖ ಸ್ಪರ್ಧಿಗಳಾಗಿದ್ದಾರೆ. ಜಾರ್ಖಂಡ್ ನ ಗಾಂಡೆ ಹಾಗೂ ಉತ್ತರಪ್ರದೇಶದ ಲಕ್ನೋ ಪೂರ್ವ ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ಆರಂಭವಾಗಿದೆ.