ನೀವು ಬೆಂಕಿಯೊಂದಿಗೆ ಆಟವಾಡುತ್ತಿದ್ದೀರಿ: ಪಂಜಾಬ್, ತಮಿಳುನಾಡು ರಾಜ್ಯಪಾಲರನ್ನು ತರಾಟೆಗೆತ್ತಿಕೊಂಡ ಸುಪ್ರೀಂ ಕೋರ್ಟ್
ಹೊಸದಿಲ್ಲಿ: ವಿಧಾನಸಭೆಯಲ್ಲಿ ಅಂಗೀಕಾರಗೊಂಡ ಮಸೂದೆಗಳ ಮೇಲೆ ಕ್ರಮಗಳನ್ನು ತೆಗೆದುಕೊಳ್ಳಲು ವಿಳಂಬಿಸುತ್ತಿದ್ದಾರೆ ಎಂದು ಪಂಜಾಬ್ ಮತ್ತು ತಮಿಳುನಾಡು ರಾಜ್ಯ ಸರಕಾರಗಳು ಆರೋಪಿಸಿರುವ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಅವೆರಡೂ ರಾಜ್ಯಗಳ ರಾಜ್ಯಪಾಲರನ್ನು ತೀವ್ರ ತರಾಟೆಗೆತ್ತಿಕೊಂಡಿದೆ. ಚುನಾಯಿತ ವಿಧಾನಸಭೆಗಳು ಅಂಗೀಕರಿಸಿರುವ ಮಸೂದೆಗಳನ್ನು ವಿಳಂಬಿಸದಂತೆ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠವು ಉಭಯ ರಾಜ್ಯಪಾಲರನ್ನು ಆಗ್ರಹಿಸಿತು.
ಚುನಾಯಿತ ವಿಧಾನಸಭೆಯು ಅಂಗೀಕರಿಸಿದ ಮಸೂದೆಗಳನ್ನು ದಾರಿ ತಪ್ಪಿಸಬೇಡಿ, ಇದು ಅತ್ಯಂತ ಕಳವಳಕಾರಿ ವಿಷಯವಾಗಿದೆ ಎಂದು ನ್ಯಾ. ಚಂದ್ರಚೂಡ್ ಹೇಳಿದರು.
‘ನೀವು ಬೆಂಕಿಯೊಂದಿಗೆ ಆಟವಾಡುತ್ತಿದ್ದೀರಿ. ರಾಜ್ಯಪಾಲರು ಇದನ್ನು ಹೇಗೆ ಮಾಡಬಲ್ಲರು? ಪಂಜಾಬ್‌ನಲ್ಲಿ ನಡೆಯುತ್ತಿರುವುದು ನಮಗೆ ಅಸಮಾಧಾನವನ್ನುಂಟು ಮಾಡಿದೆ. ನಾವು ಸಂಸದೀಯ ಪ್ರಜಾಪ್ರಭುತ್ವವಾಗಿ ಮುಂದುವರಿಯುತ್ತೇವೆಯೇ’ ಎಂದು ಪ್ರಶ್ನಿಸಿದ ಪೀಠವು, ಭಾರತವು ಸ್ಥಾಪಿತ ರೀತಿರಿವಾಜುಗಳ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದೆ ಮತ್ತು ಅವುಗಳನ್ನು ಅನುಸರಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿತು.
ರಾಜ್ಯ ವಿಧಾನಸಭೆಯು ಅಂಗೀಕರಿಸಿರುವ ಮಸೂದೆಗಳಿಗೆ ಒಪ್ಪಿಗೆ ನೀಡಲು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ ಅವರು ವಿಳಂಬಿಸುತ್ತಿದ್ದಾರೆ ಎಂದು ಆರೋಪಿಸಿ ಪಂಜಾಬ್ ಸರಕಾರವು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದೆ.
ಇಂತಹ ‘ಅಸಾಂವಿಧಾನಿಕ ನಿಷ್ಕ್ರಿಯತೆ ’ಯು ಇಡೀ ಆಡಳಿತವನ್ನು ಸ್ಥಗಿತಗೊಳಿಸಿದೆ ಎಂದು ಅದು ತನ್ನ ಅರ್ಜಿಯಲ್ಲಿ ಹೇಳಿದೆ.
ಹಣಕಾಸು ನಿರ್ವಹಣೆ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಏಳು ಮಸೂದೆಗಳನ್ನು ರಾಜ್ಯಪಾಲರು ಬಾಕಿಯುಳಿಸಿಕೊಂಡಿದ್ದಾರೆ. ಈ ಮಸೂದೆಗಳನ್ನು ಜುಲೈನಲ್ಲಿ ರಾಜ್ಯಪಾಲರ ಒಪ್ಪಿಗೆಗಾಗಿ ಸಲ್ಲಿಸಲಾಗಿತ್ತು ಮತ್ತು ಅವರ ನಿಷ್ಕ್ರಿಯತೆಯು ಆಡಳಿತದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಿದೆ ಎಂದು ಪಂಜಾಬ ಸರಕಾರದ ಪರ ವಕೀಲ ಅಭಿಷೇಕ ಸಿಂಘ್ವಿ ವಾದಿಸಿದರು. ಪಂಜಾಬ ರಾಜ್ಯಪಾಲರು ಮತ್ತು ಮುಖ್ಯಮಂತ್ರಿ ಭಗವಂತ ಮಾನ್ ನೇತೃತ್ವದ ಆಪ್ ಸರಕಾರದ ನಡುವೆ ದೀರ್ಘಕಾಲದಿಂದಲೂ ಹಗ್ಗಜಗ್ಗಾಟ ನಡೆಯುತ್ತಿದೆ.
ರಾಜ್ಯಪಾಲರು ತನ್ನ ಒಪ್ಪಿಗೆಗಾಗಿ ಸಲ್ಲಿಸಿದ ಮಸೂದೆಗಳನ್ನು ಉದ್ದೇಶಪೂರ್ವಕವಾಗಿ ವಿಳಂಬಿಸುವ ಮೂಲಕ ಜನರ ಇಚ್ಛೆಯನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದ್ದ ತಮಿಳುನಾಡು ಸರಕಾರವು,ಸರ್ವೋಚ್ಚ ನ್ಯಾಯಾಲಯದ ಮಧ್ಯಪ್ರವೇಶಕ್ಕೆ ಆಗ್ರಹಿಸಿತ್ತು. ಕಳೆದ ಕೆಲವು ತಿಂಗಳುಗಳಿಂದಲೂ ಡಿಎಂಕೆ ಸರಕಾರ ಮತ್ತು ರಾಜ್ಯಪಾಲ ಆರ್.ಎನ್.ರವಿ ಅವರ ನಡುವೆ ಜಟಾಪಟಿ ನಡೆಯುತ್ತಿದೆ