“ನಿಮ್ಮದು ಈಗ ಬೇರೆ ರಾಜಕೀಯ ಪಕ್ಷ": ಶರದ್ ಪವಾರ್ ಹೆಸರು, ಚಿತ್ರಗಳನ್ನು ಬಳಸುತ್ತಿರುವ ಅಜಿತ್ ಪವಾರ್ ಬಣಕ್ಕೆ ಸುಪ್ರೀಂ ಕೋರ್ಟ್ ತರಾಟೆ
ಅಜಿತ್ ಪವಾರ್, ಶರದ್ ಪವಾರ್ | Photo: PTI
ಹೊಸದಿಲ್ಲಿ: ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ) ಸ್ಥಾಪಕ ಶರದ್ ಪವಾರ್ ಅವರ ಚಿತ್ರ ಮತ್ತು ಹೆಸರನ್ನು ಪ್ರಚಾರ ವೇಳೆ ಬಳಸುತ್ತಿರುವುದಕ್ಕೆ ಎನ್ಸಿಪಿ ಯ ಅಜಿತ್ ಪವಾರ್ ಬಣವನ್ನು ಸುಪ್ರೀಂ ಕೋರ್ಟ್ ಇಂದು ತರಾಟೆಗೆ ತೆಗೆದುಕೊಂಡಿದೆ.
ಎನ್ಸಿಪಿಯು ಎರಡು ಬಣಗಳಾಗಿ ಬೇರ್ಪಟ್ಟ ಹೊರತಾಗಿಯೂ ಶರದ್ ಪವಾರ್ ಅವರ ಚಿತ್ರಗಳ ಬಳಕೆಯ ಕಾರಣವೇನು ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಕೆ ವಿ ವಿಶ್ವನಾಥನ್ ಅವರ ಪೀಠ ಪ್ರಶ್ನಿಸಿದೆ.
“ನಿಮ್ಮದು ಈಗ ಬೇರೆ ರಾಜಕೀಯ ಪಕ್ಷ. ನೀವು ಅವರ ಜೊತೆಗಿರದೇ ಇರಲು ನಿರ್ಧರಿಸಿದ್ದೀರಿ. ಹಾಗಿರುವಾಗ ಅವರ ಚಿತ್ರ ಏಕೆ ಬಳಸುತ್ತೀರಿ… ನಿಮ್ಮದೇ ಸ್ವಂತ ಗುರುತನ್ನು ಹೊಂದಿ,” ಎಂದು ಪೀಠ ಅಜಿತ್ ಪವಾರ್ ಬಣಕ್ಕೆ ಹೇಳಿದೆ.
“ಶರದ್ ಪವಾರ್ ಅವರ ಹೆಸರು, ಚಿತ್ರಗಳನ್ನು ಬಳಸಲಾಗುವುದಿಲ್ಲ ಎಂಬ ಕುರಿತು ಲಿಖಿತ ಹೇಳಿಕೆ ಬೇಕು,” ಎಂದು ಹೇಳಿದ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಮಾರ್ಚ್ 19ಕ್ಕೆ ನಿಗದಿಪಡಿಸಿದೆ.
ಅಜಿತ್ ಪವಾರ್ ಬಣವು ಶರದ್ ಪವಾರ್ ಅವರ ಹೆಸರು ಮತ್ತು ಚಿತ್ರಗಳನ್ನು ಬಳಸಿ ಮತದಾರರನ್ನು ಸೆಳೆಯಲು ಯತ್ನಿಸುತ್ತಿದೆ ಎಂದು ಎನ್ಸಿಪಿ ಯ ಶರದ್ ಪವಾರ್ ಬಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ನ್ಯಾಯಾಲಯ ಮೇಲಿನಂತೆ ಹೇಳಿದೆ.