ಉತ್ತರ ಪ್ರದೇಶ | ಬಿಜೆಪಿ ಧ್ವಜ ಹಾಕಿದ್ದ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದು ಯುವಕನನ್ನು ಗುಂಡಿಕ್ಕಿ ಹತ್ಯೆ!

ಸಾಂದರ್ಭಿಕ ಚಿತ್ರ
ಪ್ರಯಾಗ್ರಾಜ್ : ಉತ್ತರ ಪ್ರದೇಶದ ಕರ್ನಲ್ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವಕನೋರ್ವನನ್ನು ಬಿಜೆಪಿ ಧ್ವಜವಿದ್ದ ಕಪ್ಪು ಬಣ್ಣದ ಸ್ಕಾರ್ಪಿಯೋದಲ್ಲಿ ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ.
ನವಾಬ್ಗಂಜ್ ನಿವಾಸಿ ಶಶಾಂಕ್ ಸಿಂಗ್ ಯಾದವ್(25) ಹತ್ಯೆಯಾದ ಯುವಕ.
ಶಶಾಂಕ್ ಸಿಂಗ್, ತೇಲಿಯಾರ್ಗಂಜ್ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಶಶಾಂಕ್ ಅವರಿಗೆ ಕ್ಷುಲ್ಲಕ ವಿಚಾರಕ್ಕೆ ಸ್ಕಾರ್ಪಿಯೋದಲ್ಲಿ ತೆರಳುತ್ತಿದ್ದ ದುಷ್ಕರ್ಮಿಗಳೊಂದಿಗೆ ಮಾತಿನ ಚಕಮಕಿ ನಡೆದಿದೆ. ಇದಲ್ಲದೆ ಅವರ ನಡುವೆ ಹಳೆಯ ದ್ವೇಷವಿತ್ತು ಎಂದು ಕೂಡ ಹೇಳಲಾಗಿದೆ. ಇದೇ ವಿಚಾರಕ್ಕೆ ಶಶಾಂಕ್ ಸಿಂಗ್ ಬೈಕ್ನಲ್ಲಿ ತೆರಳುತ್ತಿದ್ದಾಗ ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳು ಆತನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ತಕ್ಷಣ ಶಶಾಂಕ್ನನ್ನು ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಕರ್ನಲ್ಗಂಜ್ ಎಸಿಪಿ ರಾಜೀವ್ ಕುಮಾರ್ ಯಾದವ್ ಪ್ರತಿಕ್ರಿಯಿಸಿ, ಕಪ್ಪು ಬಣ್ಣದ ಸ್ಕಾರ್ಪಿಯೋದಲ್ಲಿ ಬಂದ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ. ಘಟನೆ ನಡೆದ ಸ್ಥಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗುತ್ತಿದೆ. ಆರೋಪಿಗಳ ಪತ್ತೆಗೆ ಎರಡು ತಂಡಗಳನ್ನು ರಚಿಸಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.