ಪಿಂಕ್ ಬಾಲ್ ಟೆಸ್ಟ್ನಲ್ಲಿ ಹೀನಾಯ ಸೋಲು: ಭಾರತದ ಡಬ್ಲ್ಯುಟಿಸಿ ಫೈನಲ್ ಕನಸು ಭಗ್ನ?
PC: x.com/ImTanujSingh
ಅಡಿಲೇಡ್: ಬಾರ್ಡರ್-ಗಾವಸ್ಕರ್ ಸರಣಿಯ ಎರಡನೇ ಟೆಸ್ಟ್ ಪಂದ್ಯದಲ್ಲಿ ಅತಿಥೇಯ ಆಸ್ಟ್ರೇಲಿಯಾ ವಿರುದ್ಧ ಹೀನಾಯ ಸೋಲು ಅನುಭವಿಸುವ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ತಲುಪುವ ಭಾರತದ ಕನಸು ಬಹುತೇಕ ಭಗ್ನಗೊಂಡಿದೆ.
ಅಸ್ಟ್ರೇಲಿಯಾ ಈ ಪಂದ್ಯದಲ್ಲಿ 10 ವಿಕೆಟ್ಗಳ ಭರ್ಜರಿ ಜಯ ಸಾಧಿಸುವ ಮೂಲಕ, ಡಬ್ಲ್ಯುಟಿಸಿ ಅಂಕ ಪಟ್ಟಿಯಲ್ಲಿ ಭಾರತ ಮೂರನೇಸ್ಥಾನಕ್ಕೆ ಕುಸಿದಿದೆ. ಆದರೂ ಅರ್ಹತೆ ಪಡೆಯಲು ರೋಹಿತ್ ಶರ್ಮಾ ಪಡೆಗೆ ಕ್ಷೀಣ ಅವಕಾಶಗಳಿವೆ. ಭಾರತ ಡಬ್ಲ್ಯುಟಿಸಿ ಫೈನಲ್ ತಲುಪಬೇಕಾದರೆ ಸರಣಿಯಲ್ಲಿ ಮುಂದೆ ಯಾವುದೇ ಪಂದ್ಯಗಳನ್ನು ಸೋಲಬಾರದು. ಉಳಿದ ಮೂರು ಪಂದ್ಯಗಳ ಪೈಕಿ ಮೂರನ್ನೂ ಗೆದ್ದರೆ ಮಾತ್ರ ಭಾರತದ ಫೈನಲ್ ಸ್ಥಾನ ಖಚಿತವಾಗುತ್ತದೆ.
ಆದರೆ ಎರಡು ಪಂದ್ಯ ಗೆದ್ದು ಒಂದನ್ನು ಡ್ರಾ ಮಾಡಿಕೊಂಡರೆ ಕೂಡಾ ಭಾರತಕ್ಕೆ ಫೈನಲ್ ತಲುಪುವ ಅವಕಾಶವಿದೆ. ಈ ಕನಸು ನನಸಾಗಬೇಕಾದರೆ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಗೆಲುವು ಸಾಧಿಸಬೇಕು. ಭಾರತ ಈ ಸರಣಿಯಲ್ಲಿ ಇನ್ನೊಂದು ಪಂದ್ಯವನ್ನು ಸೋತಲ್ಲಿ, ಆಗ ಭಾರತದ ಭವಿಷ್ಯ, ದ.ಆಫ್ರಿಕಾ ಮತ್ತು ಶ್ರೀಲಂಕಾ ಸರಣಿ ಹಾಗೂ ಆಸ್ಟ್ರೇಲಿಯಾ- ಶ್ರೀಲಂಕಾ ಸರಣಿಯ ಫಲಿತಾಂಶದ ಮೇಲೆ ನಿರ್ಧರಿತವಾಗುತ್ತದೆ.
ಭಾರತ- ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ ಸರಣಿ ಇದೀಗ 1-1 ಸಮಬಲದಲ್ಲಿದ್ದು, ಮೂರನೇ ದಿನಕ್ಕೇ ಎರಡನೇ ಟೆಸ್ಟ್ ಪಂದ್ಯ ಮುಗಿದ ಹಿನ್ನೆಲೆಯಲ್ಲಿ ಭಾರತ ತಂಡ ಹೋಟೆಲ್ ಕೊಠಡಿಯಲ್ಲಿ ವಿರಮಿಸದೇ ಮೂರನೇ ಪಂದ್ಯದಲ್ಲಿ ಪುಟಿದೇಳುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಖ್ಯಾತ ಕ್ರಿಕೆಟಿಗ ಸುನೀಲ್ ಗಾವಸ್ಕರ್ ಸಲಹೆ ಮಾಡಿದ್ದಾರೆ.