ಚಾರಣವೆಂದರೆ ಮೋಜಿನ ಹೂರಣವಲ್ಲ...
ಅಡವಿಯ ಎಡೆಯಲ್ಲಿ, ಗಿಡಗಳ ನಡುವಲ್ಲಿ, ನೊರೆಗಳ ಪುಟಿಸುತ, ಕುಣಿದಾಡುವ ಹರಿಯುವ ತೊರೆಗಳ ದಾಟಿ, ಮೌನವಾಗಿ ಕಾಡು ಸುತ್ತಿ ಬೆಟ್ಟ ಹತ್ತಿದರೆ ಅಲ್ಲಿ ಶಿಖರದ ಶಿರ ಭಾಗಕ್ಕೆ ನಿಖರವಾಗಿ ಇಡುವ ಪ್ರತೀ ಹೆಜ್ಜೆಗಳೂ ಚಾರಣವೆಂಬ ಸಾರ್ಥಕಕ್ಕೆ ಕಾರಣವಾಗುತ್ತದೆ. ಬೆನ್ನಿಗೊಂದು ಡುಬ್ಬ ಏರಿಸಿ, ಶಿಖರದ ತುದಿಯನ್ನು ಶೋಧಿಸಿ, ಕಾಡು ಕಣಿವೆಯನ್ನು ಏರಿ, ಗಿರಿಯ ಶೃಂಗದಲ್ಲಿ ಗೆಲುವಿನ ಜೈ ಕಾರ ಕೂಗುವವರೆಲ್ಲರೂ ನೈಜ ಚಾರಣಿಗರಾಗುವುದಿಲ್ಲ. ನಗರದ ಸಕಲ ಸುಖದ ಅನುಭವದವರಿಗೆ, ಪಟ್ಟಣದ ಜಂಜಾಟದ ಬದುಕಿನಿಂದ ಸ್ವಲ್ಪ ದೂರವಿದ್ದು ವಿಶ್ರಾಂತಿ ಬೇಕೆನ್ನುವವರಿಗೆ ಚಾರಣ ಒಂದು ಹವ್ಯಾಸವಾಗಿ ಬಿಡುತ್ತದೆ. ಭೌತಿಕ ವೈಭೋಗ ಮಿತಿ ಮೀರುತ್ತಿರುವ ಈ ಕಾಲದಲ್ಲಿ ನಗರದ ಜನರಿಗೆ ಇದ್ದಕ್ಕಿದ್ದಂತೆ ಜ್ಞಾನೋದಯ ವಾದಂತೆ ಅಡವಿ, ಬೆಟ್ಟಗಳ ಕಡೆ ಓಡಿ ಬರುತ್ತಾರೆ. ಆದರೆ ಚಾರಣ ಕೇವಲ ಸಮಯ ಕಳೆಯುವ ಕಾಯಕವಲ್ಲ.
ಸಾಮಾನ್ಯವಾಗಿ ನವೆಂಬರ್, ಡಿಸೆಂಬರ್ ತಿಂಗಳು ಪಶ್ಚಿಮ ಘಟ್ಟದ ಒಡಲು ವರ್ಷ ಋತುವಿನ ಅಪ್ಪುಗೆಯಿಂದ ಸಡಿಲವಾಗುತ್ತಾ ಗಿರಿ, ಕಣಿವೆಗಳು ಹಸಿರು ಚಾದರವನ್ನು ಹೊದ್ದುಕೊಂಡು, ಹಬ್ಬಿದಾ ಮಲೆ ಮಧ್ಯದೊಳಗೆ ಅಬ್ಬಿಗಳ ಘರ್ಜನೆ ಕೇಳಿಸುತ್ತದೆ. ಬೆಟ್ಟಗಳು ಹಸಿರು ಮುಂಡಾಸು ತೊಟ್ಟು ಮೌನವಾಗಿ ಮೇಘರಾಶಿ ಗಿರಿ ಕಣಿವೆಯನ್ನು ಆಲಿಂಗಿಸುವ ದೃಶ್ಯವನ್ನು ನೋಡುತ್ತಿರುತ್ತದೆ.
ಆದರೆ ಈ ವರುಷ ಮಳೆ ಕಡಿಮೆಯಾಗಿ ಪಶ್ಚಿಮ ಘಟ್ಟದ ಗಿರಿ, ಕಣಿವೆಯಲ್ಲಿ ಹುಲ್ಲುಗಾವಲಿನ ಹಸಿರು ಕಡಿಮೆಯಾಗಿ, ಝರಿಯ ಒರತೆಗಳು ಬಡಕಲಾಗಿ, ಮಳೆ ನೀರಿನ ಇಳುವರಿ ಕಡಿಮೆಯಾಗಿ ಇನ್ನು ಕೆಲವೇ ದಿನಗಳಲ್ಲಿ ಕಾಡ್ಗಿಚ್ಚು ಹಬ್ಬುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಚಾರಣವನ್ನು ನಿಷೇಧಿಸುವುದು ಕಡ್ಡಾಯವಾಗಲೇಬೇಕು.
ಚಾರಣವೆಂದರೆ ಮೋಜು, ಮಸ್ತಿಗಳ ಹೂರಣವಲ್ಲ. ಚಾರಣವೆಂದರೆ ನಮ್ಮ ಮತ್ತು ನಿಸರ್ಗದ ನಡುವಿನ ಒಡನಾಟ. ಪ್ರಕೃತಿಯ ಒಡಲನ್ನು ಅರಿಯುವ ಪರಿಪಾಠ. ಪಶ್ಚಿಮ ಘಟ್ಟದ ಸೂಕ್ಷ್ಮ ಜೀವ ಸಂಕುಲಗಳ ಬಗ್ಗೆ ಅರಿವು, ಜ್ಞಾನ, ಕಾಳಜಿಗಳ ಮೂಟೆ.
ಕೇವಲ ಸಮಯ ಕಳೆಯುವುದಕ್ಕೆ, ಮೋಜು ಮಜಾ ಮಾಡಲು ಬರುವವರಿಗಲ್ಲ ಬೆಟ್ಟ, ಗುಡ್ಡಗಳಿರುವುದು. ಪಶ್ಚಿಮ ಘಟ್ಟದ ದಟ್ಟ ಅಡವಿ ಇರುವುದು ಅಲ್ಲಿನ ವನ್ಯಜೀವಿಗಳ ನೆಮ್ಮದಿಗೆ. ಅಡವಿಯ ನಡುವೆ ಟೆಂಟ್ ಹಾಕಿ ರಾತ್ರಿ ಕಿರುಚಿಕೊಂಡು ಅಲ್ಲಿನ ಜೀವ ವೈವಿಧ್ಯಗಳಿಗೆ ಭಂಗ ತರುವವರಿಗಲ್ಲ.
ನಗರದ ಸುಖ ಸೂತ್ರಗಳನ್ನು ಕಾಡಿನಲ್ಲಿ ಅನುಭವಿಸುತ್ತೇವೆ ಎನ್ನುವವರಿಗಲ್ಲ. ಡೀಜೆ ಎಂದು ಕುಣಿದು ಕಿರುಚುವವರಿಗೆ, ಗಂಡುಗಲಿಗಳೆಂದು ಬಂದು ‘ಗುಂಡುಗಲಿ’ ಗಳಾಗಿ ಆ ಗುಂಡು ಬಾಟಲಿಗಳನ್ನು ಕಾಡಿನಲ್ಲಿ ಎಸೆದು ಹೋಗುವವರಿಗಲ್ಲ, ತಾವು ತಂದು ತಿಂದ ವಸ್ತುಗಳ ಪ್ಲಾಸ್ಟಿಕ್, ನೀರಿನ ಬಾಟಲಿಗಳನ್ನು ಸಿಕ್ಕ ಸಿಕ್ಕಲ್ಲಿ ಎಸೆದು ಹೋಗುವ ವಿಕೃತ ಚಾರಣಿಗರಿಗೆ ಬೆಟ್ಟ ಗುಡ್ಡಗಳು ಇರುವುದಲ್ಲ.
ಪಶ್ಚಿಮ ಘಟ್ಟದ ಅಡವಿಯ ಒಳಗೆ ಕಡವೆಯ ಕಾಲಿಗೆ ಬಿಯರ್ ಬಾಟಲಿಯ ಗ್ಲಾಸ್ ತುಂಡು ಚುಚ್ಚಿ ರಕ್ತ ಸುರಿಯುತ್ತಿದ್ದುದು, ಸತ್ತಿರುವ ಜಿಂಕೆಯ ಹೊಟ್ಟೆಯೊಳಗೆ 6 ಕೆಜಿ ಪ್ಲಾಸ್ಟಿಕ್, ತುಂಡಾದ ಚಪ್ಪಲಿ, ಕಬ್ಬಿಣ ತುಂಡು ಕಂಡದ್ದು, ಆನೆಯ ಕಾಲಿಗೆ ಗ್ಲಾಸ್ ತುಂಡು ಚುಚ್ಚಿ ಕಾಲಿನ ಹುಣ್ಣು ಗ್ಯಾಂಗ್ರೀನ್ ಆಗಿ ಆನೆ ಸತ್ತಿರುವುದು, ಸಿಂಗಳೀಕ ಚಕ್ಕುಲಿ ಸಮೇತ ಪ್ಲಾಸ್ಟಿಕ್ ನುಂಗಿ ಸತ್ತಿರುವುದು, ಕಾಡುಕೋಣ ಪ್ಲಾಸ್ಟಿಕ್ ಬಾಟಲಿ ನುಂಗಿ ಸತ್ತಿರುವುದು...ಇಂತಹ ಅದೆಷ್ಟೋ ಸನ್ನಿವೇಶಗಳು ಆದದ್ದು ಕಾಡಿಗೆ ಬರುವ ವಿಕೃತ ಚಾರಣಿಗರಿಂದ.
ನೂರರಲ್ಲಿ ಕೇವಲ ಹತ್ತು ಜನರು ಮಾತ್ರ ಪ್ರಕೃತಿಯ ಮೇಲೆ ಒಲವಿನಿಂದ ಚಾರಣ ಬರುವವರು ಉಳಿದ 90 ಜನರು ಮೋಜು, ಗೌಜಿಗೆ ಬರುವವರು.
ಚಾರಣಿಗರಿಂದ ಕಾಡ್ಗಿಚ್ಚು ಸೃಷ್ಟಿಯಾದದ್ದು ಕೂಡಾ ಇದೆ. ರಾತ್ರಿ ಕಾಡಿನ ನಡುವೆ ಅಡುಗೆ ಅಥವಾ ಕ್ಯಾಂಪ್ ಫೈರ್ ಮಾಡಿ ಬೆಳಗ್ಗೆ ಎಷ್ಟೇ ಆ ಅಡುಗೆ ಬೆಂಕಿಗೆ ನೀರು ಹಾಕಿದರೂ ಬೂದಿಯ ಒಳಗೆ ಇರುವ ಬೆಂಕಿ ಕಿಡಿ ಇವರು ಹೋದ ನಂತರ ಗಾಳಿಗೆ ತರಗೆಲೆಗೆ ಹಾರಿ ಕಾಡ್ಗಿಚ್ಚು ಆದದ್ದೂ ಇದೆ. ಚಾರಣದ ಸಂದರ್ಭದಲ್ಲಿ ಸಿಗರೇಟು ಎಳೆಯುವವರೂ ಅಪಾಯಕಾರಿ.
ಪಶ್ಚಿಮ ಘಟ್ಟದ ಹುಲ್ಲುಗಾವಲು ಪ್ರದೇಶ ತುಂಬಾ ಸೂಕ್ಷ್ಮ ವಾಗಿದ್ದು ಮಳೆಗಾಲದ ಮಳೆ ನೀರು ಇದೇ ಹುಲ್ಲುಗಾವಲಿನ ಮಣ್ಣಿನ ಪದರದ ಒಳಗಿನ ಜಲನಾಡಿಗಳಲ್ಲಿ ಶೋಲಾ ಅಡವಿಗೆ ಹರಿಯುತ್ತಿರುತ್ತದೆ. ಈ ಹುಲ್ಲುಗಾವಲಿನ ಮೇಲೆ ಸಾವಿರಾರು ಚಾರಣಿಗರು ತಮ್ಮ ಇಷ್ಟ ಬಂದಲ್ಲಿ ಕುಣಿದಾಡುವುದು ಕೂಡಾ ಜಲ ನಾಡಿಗಳಿಗೆ ಸಮಸ್ಯೆ ಆಗುತ್ತದೆ. ಜಲ ಪಾತಗಳಿಗೆ ಬಂದು ಜಲ ಕ್ರೀಡೆ ಮಾತ್ರ ಓಕೆ ಆದರೆ ಆ ನೀರಿನಲ್ಲಿ ಪ್ಲಾಸ್ಟಿಕ್, ಕಸ, ತ್ಯಾಜ್ಯಗಳನ್ನು ಎಸೆದು ಹೋಗುವುದರಿಂದ ಆ ಜಲಪಾತವೇ ನದಿಗಳ ನಾಡಿಗಳಾಗಿದ್ದು ನದಿಯಲ್ಲಿ ತ್ಯಾಜ್ಯ ಹೆಚ್ಚಾಗುವುದು.
ಬರುವ ಚಾರಣಿಗರು ತಮ್ಮ ಸಾಮಾಜಿಕ ಜಾಲ ತಾಣದಲ್ಲಿ ಬೆಟ್ಟ, ಕಾಡಿನ ಬಗ್ಗೆ, ಅಲ್ಲಿನ ರೂಟ್‌ಮ್ಯಾಪ್ ಬರೆದು, ಆ ಸ್ಥಳಕ್ಕೆ ಹೋಗುವ ಹೋಮ್‌ಸ್ಟೇಗಳ ಆತಿಥ್ಯವನ್ನು ವೈಭವೀಕರಿಸಿ ವಿಪರೀತ ಬರೆದು ಅದೆಷ್ಟೋ ವಿಕೃತ ಚಾರಣಿಗರಿಗೆ ಮತ್ತಷ್ಟು ಆಹ್ವಾನ ನೀಡುತ್ತಾರೆ. ಅರಣ್ಯ ಇಲಾಖೆ ಎಷ್ಟೇ ಕಟ್ಟು ಪಾಡು, ರೀತಿ ನೀತಿ ನಿಯಮಗಳನ್ನು ಮಾಡಿದರೂ ಕಾಡೆಂದರೆ ತಮ್ಮ ಮೋಜು ಮರ್ಜಿಗೆ ಇರುವಂತಹವು, ಅಲ್ಲಿ ನಮ್ಮ ತ್ಯಾಜ್ಯಗಳನ್ನು ಎಸೆದೇ ಹೋಗುವೆವು ಎಂದು ಹರಕೆ ಹೊತ್ತು ಬರುವವರನ್ನು ನಿಯಂತ್ರಿಸಲು ಅಸಾಧ್ಯ. ನದಿ ಮೂಲಗಳಂತಹ ಸೂಕ್ಷ್ಮ ಪ್ರದೇಶಗಳಿಗೆ ಮಾನವ ಸಂಚಾರವೇ ನಿಷಿದ್ಧ, ಅಲ್ಲಿ ಒಂದು ಸಣ್ಣ ಪ್ಲಾಸ್ಟಿಕ್ ತುಂಡು ಎಸೆದರೂ ನದಿ ಮೂಲದ ಜೀವಂತಿಕೆಗೆ ಧಕ್ಕೆ ಆಗುವುದಿದೆ. ರಜೆ ಸಿಕ್ಕಿದರೆ ಸಾಕು ಏನೋ ಹರಕೆ ಹೊತ್ತವರಂತೆ ಸಾವಿರಾರು ಜನರು ಪಶ್ಚಿಮ ಘಟ್ಟದ ಸೂಕ್ಷ್ಮ ಜೈವಿಕ ತಾಣಗಳಿಗೆ ಬಂದು ಅಲ್ಲಿನ ಜೀವ ಸಂಕುಲಗಳಿಗೆ ಹಾನಿ ಮಾಡುವ ವಿಕೃತ ಚಾರಣವನ್ನು ನಿಷೇಧಿಸಲೇಬೇಕು. ಸಂರಕ್ಷಿತ ಅರಣ್ಯ ಪ್ರದೇಶ, ರಾಷ್ಟ್ರೀಯ ಉದ್ಯಾನವನದ ಸೂಕ್ಷ್ಮ ಅರಣ್ಯ ಪ್ರದೇಶಗಳು ಈಗಾಗಲೇ ಅಸಂಬದ್ಧ ಯೋಜನೆಗಳಿಂದ ಸಾಕಷ್ಟು ಹಾನಿಯಾಗಿವೆ. ಇಂತಹ ಸೂಕ್ಷ್ಮ ತಾಣಗಳನ್ನು ಸಂರಕ್ಷಣೆ ಮಾಡಿದರೆ ಮಾತ್ರ ನಾಡು ನೆಮ್ಮದಿಯಾಗಿ ಉಳಿದೀತು. ಪಶ್ಚಿಮ ಘಟ್ಟ ನಮ್ಮ, ನಿಮ್ಮೆಲ್ಲರದ್ದು, ಇದನ್ನು ರಕ್ಷಣೆ ಮಾಡುವ ಜವಾಬ್ದಾರಿ ಕೂಡಾ ನಮ್ಮ, ನಿಮ್ಮೆಲ್ಲರದ್ದು.