ರಾಷ್ಟ್ರೀಯ ಜಂತು ಹುಳ ನಿರ್ಮೂಲನಾ ದಿನ
ಪ್ರತೀ ವರ್ಷ ಫೆಬ್ರವರಿ 10ರಂದು ರಾಷ್ಟ್ರೀಯ ಜಂತು ಹುಳ ನಿರ್ಮೂಲನ ದಿನ ಎಂದು ಆಚರಿಸಿ ಜಂತು ಹುಳಗಳಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಭಾರತ ಸರಕಾರದ ಆರೋಗ್ಯ ಮತ್ತು ಕುಟುಂಬಕಲ್ಯಾಣ ಇಲಾಖೆಯ ವತಿಯಿಂದ ಈ ಆಚರಣೆ ತರಲಾಗಿದ್ದು ದೇಶದಲ್ಲಿನ ಪ್ರತಿಯೊಬ್ಬ ಮಗುವೂ ಕೂಡಾ ಜಂತು ಹುಳಗಳ ಕಾಟದಿಂದ ವಿಮುಕ್ತಿಗೊಳಿಸುವ ಮಹದಾಶೆೆಯನ್ನು ಈ ಆಚರಣೆ ಹೊಂದಿದೆ. ಇದೊಂದು ದೇಶದ ಐತಿಹಾಸಿಕ ಕಾರ್ಯಕ್ರಮವಾಗಿದ್ದು ಲಕ್ಷಾಂತರ ಮಕ್ಕಳನ್ನು ಏಕಕಾಲಕ್ಕೆ ಅತ್ಯಂತ ಕಡಿಮೆ ಅವಧಿಯಲ್ಲಿ ತಲುಪುವ ಉದ್ದೇಶ ಹೊಂದಿದೆ.
ವಿಶ್ವದಾದ್ಯಂತ ಪ್ರತಿವರ್ಷ 850 ಮಿಲಿಯನ್ ಮಕ್ಕಳು ಈ ಜಂತುಹುಳದ ಬಾಧೆಗೆ ಒಳಗಾಗುತ್ತಾರೆ. ವಿಶ್ವಸಂಸ್ಥೆಯ ವರದಿಗಳ ಪ್ರಕಾರ 300 ಮಿಲಿಯನ್ ಮಕ್ಕಳು (1ರಿಂದ 14 ವರ್ಷದೊಳಗಿನ) ಈ ಹುಳಗಳ ಬಾಧೆಯಿಂದ ಬಳಲುತ್ತಾರೆ ಎಂದು ತಿಳಿದುಬಂದಿದೆ. ಈ ರಾಷ್ಟ್ರೀಯ ಜಂತುಹುಳ ನಿರ್ಮೂಲನ ದಿನಾಚರಣೆಯ ಧ್ಯೇಯವೇನೆಂದರೆ ಎಲ್ಲಾ ಶಾಲೆಗೆ ಹೋಗುವ ಮತ್ತು ಶಾಲೆಗೆ ಹೋಗದ ಮಕ್ಕಳ (1 ರಿಂದ 19 ವರ್ಷದ ಒಳಗಿನ, ಅಂಗನವಾಡಿ ಮಕ್ಕಳನ್ನೂ ಒಳಗೊಂಡು), ಪರಿಪೂರ್ಣ ಆರೋಗ್ಯ ಹೆಚ್ಚಿಸಲು, ಅಪೌಷ್ಟಿಕತೆ ತಡೆಯಲು ಮತ್ತು ರಕ್ತ ಹೀನತೆಯನ್ನು ತಡೆಯುವ ಸದ್ದುದ್ದೇಶವನ್ನು ಹೊಂದಿದೆ. ಮನುಷ್ಯನ ಕರುಳಿನ ಒಳಭಾಗದಲ್ಲಿ ಜೀವಿಸುವ ಜಂತು ಹುಳಗಳು ನಮ್ಮ ದೇಹದಿಂದಲೇ ರಕ್ತ ಹೀರಿ ಬದುಕುತ್ತವೆ ಮತ್ತು ಪ್ರತೀ ದಿನ ಸಾವಿರಾರು ಮೊಟ್ಟೆಗಳನ್ನು ಉತ್ಪಾದಿಸುತ್ತದೆ. ವ್ಯಕ್ತಿ ಮಲವಿಸರ್ಜನೆ ಮಾಡಿದಾಗ ಈ ಮೊಟ್ಟೆಗಳು ಭೂಮಿಯನ್ನು (ಮಣ್ಣು) ಸೇರುತ್ತದೆ. ಈ ಮೊಟ್ಟೆಗಳು ಮಣ್ಣಿನಲ್ಲಿ ಬೆಳೆದ ತರಕಾರಿಗಳ ಮುಖಾಂತರ, ಪಾದರಕ್ಷೆ ಧರಿಸದೆ ಓಡಾಡಿದಾಗ ಚರ್ಮದ ಮುಖಾಂತರ, ಇಲ್ಲವೇ ಕಲುಷಿತ ನೀರಿನ ಮುಖಾಂತರ ದೇಹದೊಳಗೆ ಸೇರಿ ಅವಾಂತರ ಉಂಟುಮಾಡುತ್ತದೆ.
‘‘ರಕ್ತ ಹೀರುವ ಜೀವ ಹಿಂಡುವ ಜಂತು ಹುಳಗಳು’’
ಪ್ರಾಣ ಹಿಂಡುವ ಜಂತು ಹುಳಗಳ ಸಮಸ್ಯೆ ಇಂದು ನಿನ್ನೆಯದಲ್ಲ. ಮನುಷ್ಯನ ದೇಹದೊಳಗೆ ಸೇರಿಕೊಳ್ಳುವ ಹುಳಗಳು ಮನುಷ್ಯನ ರಕ್ತವನ್ನು ಹೀರಿ, ರಕ್ತಹೀನತೆಯನ್ನುಂಟು ಮಾಡಿ, ಹತ್ತು ಹಲವು ರೋಗಗಳಿಗೆ ರಹದಾರಿ ಮಾಡಿಕೊಡುತ್ತದೆ. ಮುಂದುವರಿದ ರಾಷ್ಟ್ರಗಳಾದ ಅಮೆರಿಕ, ಇಂಗ್ಲೆಂಡ್, ರಶ್ಯ, ಆಸ್ಟ್ರೇಲಿಯ, ಜರ್ಮನಿ, ಯುರೋಪ್‌ಗಳಲ್ಲಿ ಈ ಸಮಸ್ಯೆ ಹೆಚ್ಚು ಕಾಣಸಿಗದಿದ್ದರೂ, ಮುಂದುವರಿಯುತ್ತಿರುವ ಮತ್ತು ಆರ್ಥಿಕವಾಗಿ ಸಾಕಷ್ಟು ಸಭಲವಾಗಿರದ ರಾಷ್ಟ್ರಗಳಲ್ಲಿ ಈ ಜಂತು ಹುಳಗಳು ಜನರನ್ನು ಕಾಡುವ ಪರಿ ಅಷ್ಟಿಷ್ಟಲ್ಲ. ಮೂಲಭೂತ ಸೌಕರ್ಯಗಳ ಕೊರತೆ, ಅಪೌಷ್ಟಿಕತೆ, ಕೊಳಚೆ ಪ್ರದೇಶಗಳು, ಬಡತನ, ಅಜ್ಞಾನ, ಅನಕ್ಷರತೆ, ಸ್ವಚ್ಛತೆಯ ಕೊರತೆ, ಶುದ್ಧ ನೀರು ಮತ್ತು ಸ್ವಚ್ಛವಾದ ಆಹಾರದ ಕೊರತೆ ಇತ್ಯಾದಿಗಳಿಂದಾಗಿ ಜಂತು ಹುಳಗಳ ಕಾಟ ಜಾಸ್ತಿಯಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಕಲುಷಿತ ನೀರಿನ ಮತ್ತು ಆಹಾರದ ಮುಖಾಂತರ ದೇಹವನ್ನು ಪ್ರವೇಶಿಸುವ ಈ ಜಂತು ಹುಳಗಳು, ರಕ್ತಹೀನತೆ, ಅಜೀರ್ಣ, ಅಲರ್ಜಿ ಉಂಟಾಗುವಂತೆ ಮಾಡಿ, ದೇಹದ ಬೆಳೆವಣಿಗೆಯನ್ನು ಕುಂಠಿತಗೊಳಿಸುವಲ್ಲಿ ಬಹುಮುಖ್ಯ ಭೂಮಿಕೆ ವಹಿಸುತ್ತದೆ.
ಏನಿದು ಜಂತು ಹುಳಗಳು?
ನಮ್ಮ ಹೊಟ್ಟೆಯಲ್ಲಿ ಕಂಡುಬರುವ ಹುಳಗಳನ್ನು ಅವುಗಳ ಆಕಾರ, ಆಕೃತಿ ಮತ್ತು ಪ್ರಕೃತಿಗಳಿಗನುಗುಣವಾಗಿ ವಿಭಾಗಿಸಲಾಗುತ್ತದೆ ಮತ್ತು ವಿಧ ವಿಧದ ಹೆಸರುಗಳಿಂದ ಕರೆಯಲಾಗುತ್ತದೆ. ಗುಂಡುಹುಳ (ಪಿನ್ ವರ್ಮ್), ದುಂಡು ಹುಳ (ರೌಂಡ್ ವರ್ಮ್), ಕೊಕ್ಕೆಹುಳ (ಹೂಕ್‌ವರ್ಮ್), ಚಾವಟಿಹುಳ (ವಿಪ್ ವರ್ಮ), ಗಿನಿಯಾ ಹುಳ (ಗಿನಿಯಾ ವರ್ಮ್), ಲಾಡಿ ಹುಳ (ಟೀಪ್ ವರ್ಮ್) ಎಂಬುದಾಗಿ ಹತ್ತು ಹಲವು ಬಗೆಯ ಹೊಟ್ಟೆ ಹುಳಗಳು ನಮ್ಮ ದೇಹದಲ್ಲಿ ಕಾಣಸಿಗುತ್ತದೆ. ದುಂಡು ಹುಳಗಳು ಹೆಚ್ಚಾಗಿ ಹದಿಹರೆಯದ ಶಾಲೆಯ ಮಕ್ಕಳಲ್ಲಿ ಕಂಡು ಬರುತ್ತದೆ. ಗುಂಪು ಗುಂಪಾಗಿ ಹಾಸ್ಟೆಲುಗಳಲ್ಲಿ ಮತ್ತು ಶಿಬಿರಗಳಲ್ಲಿ ಜೀವಿಸುವ ವಿದ್ಯಾರ್ಥಿಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ. ಉಗುರುಗಳನ್ನು ಉದ್ದನೆ ಬೆಳೆಯಲು ಬಿಡದೆ ಸ್ವಚ್ಛವಾಗಿಡುವುದು, ದೇಹದ ಸ್ವಚ್ಛತೆಯನ್ನು ಕಾಯ್ದುಕೊಳ್ಳುವುದು. ಆಹಾರ ಸೇವಿಸುವ ಮೊದಲು ಕೈ ಕಾಲುಗಳನ್ನು ಶುಭ್ರವಾಗಿ ತೊಳೆಯುವುದರಿಂದ ಈ ಹುಳಗಳ ಕಾಟ ಕಡಿಮೆ ಮಾಡಬಹುದು. ಇಲ್ಲವಾದಲ್ಲಿ ನಿರಂತರವಾಗಿ ಈ ಹುಳಗಳ ಮೊಟ್ಟೆಗಳು ನೀರು ಮತ್ತು ಆಹಾರದ ಮುಖಾಂತರ ಕರುಳನ್ನು ಸೇರಿ ನಿರಂತರ ಕಿರುಕುಳ ನೀಡಬಹುದು. ಗಿನಿಯಾ ಹುಳಗಳ ಕಾಟ ಈಗ ಬಹಳ ಕಡಿಮೆಯಾಗಿದ್ದು, ಲಾಡಿಹುಳ ಹೆಚ್ಚಾಗಿ ಮಾಂಸಾಹಾರಿಗಳಲ್ಲಿ ಕಾಣಸಿಗುತ್ತದೆ. ಮೀನು ಮಾಂಸದ ಮುಖಾಂತರ (ಫಿಶ್ ಲಾಡಿಹುಳ), ದನದ ಮಾಂಸದ ಮುಖಾಂತರ (ಬೀಪ್ ಲಾಡಿ ಹುಳ) ಮತ್ತು ಹಂದಿಮಾಂಸದ ಮುಖಾಂತರ (ಪೋರ್ಕ್ ಟೀಪ್ ವರ್ಮ್)
ದೇಹಕ್ಕೆ ಸೇರಿಕೊಳ್ಳಬಹುದು. ಸರಿಯಾಗಿ ಬೇಯಿಸದೇ ಮಾಂಸಾಹಾರ ಮಾಡಿದಲ್ಲಿ ಈ ರೀತಿ ತೊಂದರೆ ಕಾಣಿಸಿಕೊಳ್ಳುತ್ತದೆ. ಚಾವಟಿ ಅಥವಾ ಚಾಟಿ ಹುಳಗಳು (ವಿಪ್ ವರ್ಮ್) ಹೆಚ್ಚಾಗಿ ಕರುಳಿನ ಒಳಭಾಗದ ಪದರವನ್ನು ಗಟ್ಟಿಯಾಗಿ ಕಚ್ಚಿಕೊಂಡು ರಕ್ತ ಹೀರುವುದರಿಂದ ರಕ್ತಹೀನತೆ, ರಕ್ತಸ್ರಾವ ಮತ್ತು ಕರುಳಿನ ಉರಿಯೂತ ಕಾಣಿಸಿಕೊಳ್ಳಬಹುದು. ದುಂಡು ಹುಳಗಳು ಜಗತ್ತಿನ ಸುಮಾರು 25-30 ಶೇಕಡಾ ಮಂದಿಯನ್ನು ಕಾಡುತ್ತದೆ. ಆರಂಭಿಕ ಹಂತದಲ್ಲಿ ಯಾವುದೇ ಲಕ್ಷಣಗಳಿಲ್ಲದಿದ್ದರೂ, ಈ ದುಂಡುಹುಳಗಳ ಸಂಖ್ಯೆ ಕರುಳಲ್ಲಿ ಜಾಸ್ತಿಯಾದಾಗ ಅಜೀರ್ಣ, ಹಸಿವಿಲ್ಲದಿರುವುದು, ಪದೇ ಪದೇ ಹೊಟ್ಟೆನೋವು, ಬೆಳವಣಿಗೆ ಕುಂಠಿತವಾಗುವುದು, ಅಲರ್ಜಿ, ಚರ್ಮದಲ್ಲಿ ತುರಿಕೆ, ದಡಿಕೆ ಕಾಣಿಸಿಕೊಳ್ಳುತ್ತದೆ. ಕೊಕ್ಕೆಹುಳಗಳು ನಮ್ಮ ಭಾರತದಲ್ಲಿ ಅತೀ ಹೆಚ್ಚಾಗಿ ಕಾಣಸಿಗುತ್ತದೆ. ಏನಿಲ್ಲವೆಂದರೂ ಭಾರತವೊಂದರಲ್ಲೇ ಸುಮಾರು 300 ಮಿಲಿಯನ್ ಮಂದಿ (30ಕೋಟಿ ಜನರು) ಈ ಕೊಕ್ಕೆ ಹುಳದ ಬಾಧೆಯಿದ ಬಳಲುತ್ತಿದ್ದಾರೆ ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಕೊಕ್ಕೆ ಹುಳಗಳ ಮರಿಗಳು ಮತ್ತು ಮೊಟ್ಟೆಗಳು ಮಣ್ಣಿನಲ್ಲಿ ಹೇರಳವಾಗಿದ್ದು, ಪಾದದ ಚರ್ಮದ ಮುಖಾಂತರ ಶರೀರವನ್ನು ಪ್ರವೇಶಿಸುತ್ತದೆ. ಕೊಕ್ಕೆ ಹುಳದ ಪೀಡಿತರು ಹೆಚ್ಚಾಗಿ ರಕ್ತಹೀನತೆ (ಅನೀಮಿಯಾ) ಯಿಂದ ಬಳಲುತ್ತಾರೆ.
ಹುಳಗಳು ಹೇಗೆ ದೇಹವನ್ನು ಪ್ರವೇಶಿಸುತ್ತದೆ?
1. ಅಶುದ್ಧವಾದ ನೀರು ಮತ್ತು ಕಲುಷಿತ ಆಹಾರಗಳ ಮುಖಾಂತರ ದೇಹಕ್ಕೆ ಸೇರುತ್ತದೆ.
2. ಬಯಲು ಪ್ರದೇಶಗಳ ಹೊಲಗದ್ದೆಗಳಲ್ಲಿ, ತೋಟ, ಗುಡ್ಡೆಗಳಲ್ಲಿ ಪಾದರಕ್ಷೆ ಇಲ್ಲದೆ ನಡೆದಾಡುವುದರಿಂದ ಕಾಲಿನ ಚರ್ಮದ ಮುಖಾಂತರ ದೇಹವನ್ನು ಪ್ರವೇಶಿಸುತ್ತದೆ.
3. ಬಯಲು ಪ್ರದೇಶಗಳಲ್ಲಿ ಮಲವಿಸರ್ಜನೆ ಮಾಡುವುದರಿಂದ, ಮಲಗಳ ಮುಖಾಂತರ ಇತರರಿಗೆ ಹರಡಬಹುದು.
4. ದನ, ಹಂದಿ ಮಾಂಸಗಳನ್ನು ಸರಿಯಾಗಿ ಸ್ವಚ್ಛಗೊಳಿಸದೇ ಬೇಯಿಸದೆ ಸೇವಿಸುವುದರಿಂದ ದೇಹವನ್ನು ಸೇರಿಕೊಳ್ಳುತ್ತದೆ.
5. ನಮ್ಮ ಸುತ್ತ ಮುತ್ತಲಿನ ಪರಿಸರ ಸ್ವಚ್ಛತೆಯನ್ನು ಕಾಪಾಡಿಕೊಳ್ಳದಿದ್ದಲ್ಲಿ ಕೊಳಚೆ ಪ್ರದೇಶಗಳಿಗೆ ಅನುವು ಮಾಡಿದಲ್ಲಿ, ಈ ಹೊಟ್ಟೆಹುಳಗಳು ವಂಶಾಭಿವೃದ್ಧಿ ಮಾಡಿಕೊಂಡು ಪರೋಕ್ಷ್ಷವಾಗಿ ದೇಹಕ್ಕೆ ಬರಲು ರಹದಾರಿ ಮಾಡಿಕೊಡುತ್ತದೆ.
ಹೊಟ್ಟೆಹುಳಗಳಿಂದ ಆಗುವ ಅಪಾಯಗಳು:
1. ಅಜೀರ್ಣ, ಅಪೌಷ್ಟಿಕತೆ ಮತ್ತು ಹಸಿವಿಲ್ಲದಿರುವುದು : ಹೊಟ್ಟೆಹುಳಗಳು ಮಕ್ಕಳ ಜೀರ್ಣಾಂಗ ವ್ಯವಸ್ಥೆಯನ್ನು ಹಾಳು ಮಾಡುತ್ತದೆ. ಕರುಳಿನ ಒಳ ಪದರಕ್ಕೆ ಅಂಟಿಕೊಂಡು ಪರಾವಲಂಬಿಗಳಂತೆ ಬದುಕಿ ಈ ಜೀವಿಗಳು, ಮಕ್ಕಳು ಸೇವಿಸಿದ ಆಹಾರದ ಸತ್ವಗಳನ್ನು ದೇಹ ಸೇರದಂತೆ ತಡೆದು, ಅಪೌಷ್ಟಿಕತೆಗೆ ದಾರಿ ಮಾಡಿ ಮಕ್ಕಳ ದೈಹಿಕ ಬೆಳವಣಿಗೆಗೆ ತಡೆಯೊಡ್ಡುತ್ತದೆ. ಮಕ್ಕಳ ಹಸಿವನ್ನು ದೂರಮಾಡಿ ಪರೋಕ್ಷವಾಗಿ ಆಹಾರದ ಸೇವನೆ ಪ್ರಮಾಣವನ್ನು ನಿಯಂತ್ರಿಸುತ್ತದೆ. ಸಮತೋಲಿನ ಆಹಾರ ಸೇವಿಸಿದರೂ ಬಳಸಿಕೊಳ್ಳಲು ಸಾಧ್ಯವಾಗದೆ, ಮಕ್ಕಳ ಬೆಳವಣಿಗೆ ಕುಂಠಿತವಾಗಿ, ದೃಷ್ಟಿಗಳ ಅಂಧತ್ವಕ್ಕೆ, ರೋಗ ನಿರೋಧಕ ಶಕ್ತಿಯನ್ನು ಕಡಿಮೆಯಾಗಲೂ ಕಾರಣವಾಗುತ್ತದೆ. ದೇಹದ ತೂಕ ಕಡಿಮೆಯಾಗಿ, ಪ್ರೊಟೀನ್, ವಿಟಮಿನ್ ಮತ್ತು ಪೋಷಕಾಂಶಗಳ ಕೊರತೆಯಿಂದಾಗಿ ದೇಹದ ಆರೋಗ್ಯದ ಮೇಲೆ ವ್ಯತ್ತಿರಕ್ತ ಪರಿಣಾಮ ಬೀರುತ್ತದೆ.
2. ಕೊಕ್ಕೆ ಹುಳಗಳು (ಹೂಕ್‌ವರ್ಮ್) ಕರುಳಿನ ಒಳ ಭಾಗದಿಂದ ರಕ್ತವನ್ನು ಹೀರಿ ತನ್ನ ಹಸಿವನ್ನು ಇಂಗಿಸಿಕೊಳ್ಳುತ್ತದೆ. ಏನಿಲ್ಲವೆಂದರೂ ಪ್ರತೀ ಹುಳಗಳು ದಿನವೊಂದಕ್ಕೆ 0.2 ಮಿಲೀ ಲೀಟರ್ ರಕ್ತವನ್ನು ಹೀರುತ್ತದೆ. ಈ ರೀತಿ ರಕ್ತವನ್ನು ಕಳಕೊಂಡಾಗ ವ್ಯಕ್ತಿ ರಕ್ತಹೀನತೆಗೆ ಒಳಗಾಗಿ ಕ್ಷೀಣವಾಗುತ್ತಾನೆ. ಒಬ್ಬ ವ್ಯಕ್ತಿಯ ದೇಹದಲ್ಲಿ 100ರಿಂದ 150 ಕೊಕ್ಕೆ ಹುಳಗಳಿದ್ದಲ್ಲಿ ದಿನವೊಂದಕ್ಕೆ ಒಂದರಿಂದ 2 ಚಮಚದಷ್ಟು ರಕ್ತ ಕಳಕೊಂಡಲ್ಲಿ, ಒಂದೇ ವರ್ಷಗಳಲ್ಲಿ ವ್ಯಕ್ತಿ ಖಂಡಿತವಾಗಿಯೂ ರಕ್ತ ಹೀನತೆಗೆ ಗುರಿಯಾಗುವ ಸಾಧ್ಯತೆ ಇರುತ್ತದೆ. ಇದರ ಜೊತೆಗೆ ಹಸಿವಿಲ್ಲದಿರುವುದು, ಪೌಷ್ಟಿಕಾಂಶದ ಕೊರತೆ, ಕಬ್ಬಿಣದ ಕೊರತೆ, ಕ್ಯಾಲರಿಗಳ ಕೊರತೆ ಎಲ್ಲಾ ಸೇರಿಕೊಂಡು ಸಮಸ್ಯೆಯನ್ನು ಬಿಗಡಾಯಿಸುತ್ತದೆ.
3. ಅಲರ್ಜಿ, ತುರಿಕೆ, ದಡಿಕೆ, ಚರ್ಮದಲ್ಲಿ ಕೆರೆತ, ಶ್ವಾಸನಾಳದ ಅಲರ್ಜಿ ಇವೆಲ್ಲವೂ ಹೊಟ್ಟೆ ಹುಳದಿಂದ ಕಾಣಸಿಗುವ ಸಾಮಾನ್ಯ ತೊಂದರೆಗಳು. ಈ ರೀತಿಯ ತೊಂದರೆಗಳು ಪದೇ ಪದೇ ಕಾಡುತ್ತಿದ್ದಲ್ಲಿ ಕುಟುಂಬ ವೈದ್ಯರ ಸಲಹೆ ಅತೀ ಅವಶ್ಯಕ.
4. ಆಗಾಗ ಕಾಡುವ ಹೊಟ್ಟೆ ನೋವು, ಪದೇ ಪದೇ ಕಾಣುವ ಸಣ್ಣ ಜ್ವರ, ಮಲ ವಿಸರ್ಜನೆಯ ಸಮಯದಲ್ಲಿ ಗುದದ್ವಾರದ ಬಳಿ ವಿಪರೀತ ತುರಿಕೆ ಇವೆಲ್ಲವೂ ಹೊಟ್ಟೆಯಲ್ಲಿನ ಹುಳಗಳ ಪ್ರಾಥಮಿಕ ಲಕ್ಷಣಗಳು. ಸಕಾಲದಲ್ಲಿ ಸೂಕ್ತ ವೈದ್ಯರ ಸಲಹೆ ಮತ್ತು ಚಿಕಿತ್ಸೆ ಅತೀ ಅವಶ್ಯಕ.