ಮಹಾರಾಷ್ಟ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವ ತಂತ್ರಗಾರಿಕೆಯ ಸಭೆಯಲ್ಲಿ ಅದಾನಿ ಭಾಗಿ?
ಪುಷ್ಠಿ ನೀಡುವ ಹೇಳಿಕೆ ನೀಡಿದ ಎನ್ ಸಿಪಿಯ ನಾಯಕ ಅಜಿತ್ ಪವಾರ್
ಪ್ರಿಯಾಂಕಾ ಚತುರ್ವೇದಿ ಮತ್ತು ಪವನ್ ಖೇರಾ Photo:PTI
ಮುಂಬೈ : ಬಿಜೆಪಿ ಮತ್ತು ಅದಾನಿ ನಡುವೆ ನಿಕಟ ಸಂಬಂಧವಿದೆಯೆಂದು ಪ್ರತಿಪಕ್ಷಗಳು ಹಲವು ಬಾರಿ ಆರೋಪಿಸಿದ್ದವು. ಇದೀಗ ಅದಕ್ಕೆ ಪುಷ್ಠಿ ನೀಡುವ ಹೇಳಿಕೆಯನ್ನು ಬಿಜೆಪಿ ಮೈತ್ರಿ ಪಕ್ಷ ಎನ್ ಸಿ ಪಿ ಯ ನಾಯಕ ಅಜಿತ್ ಪವಾರ್ ಹೇಳಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.
ಮಹಾರಾಷ್ಟ್ರದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಉದ್ಯಮಿಯೊಬ್ಬರು ಏಕೆ ಇಷ್ಟು ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ ಎಂದು ಶಿವಸೇನೆ (ಉದ್ಧವ್ ಬಣ) ನಾಯಕಿ ಪ್ರಿಯಾಂಕಾ ಚತುರ್ವೇದಿ ಪ್ರಶ್ನಿಸಿದ್ದು, ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚಿಸುವಲ್ಲಿ ಗೌತಮ್ ಅದಾನಿ ಅವರ ಪಾಲ್ಗೊಳ್ಳುವಿಕೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರಿಯಾಂಕಾ ಚತುರ್ವೇದಿ, ಗೌತಮ್ ಅದಾನಿ ಮಹಾರಾಷ್ಟ್ರದಲ್ಲಿ ಬಿಜೆಪಿಯನ್ನು ಹೇಗೆ ಅಧಿಕಾರಕ್ಕೆ ತರಬೇಕೆಂದು ನಿರ್ಧರಿಸಲು ಸಭೆಗಳಲ್ಲಿ ಕುಳಿತುಕೊಂಡಿದ್ದಾರೆ. ಅವರು ಬಿಜೆಪಿಯ ಅಧಿಕೃತ ಸಂಧಾನಕಾರರೇ? ಮೈತ್ರಿಗಳನ್ನು ಸರಿಪಡಿಸುವ ಜವಾಬ್ದಾರಿಯನ್ನು ಅವರಿಗೆ ನೀಡಲಾಗಿದೆಯೇ? ಮಹಾರಾಷ್ಟ್ರದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಉದ್ಯಮಿಯೊಬ್ಬರು ಏಕೆ ಇಷ್ಟು ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ? ಎಂದು ಪ್ರಿಯಾಂಕ ಚತುರ್ವೇದಿ ಪ್ರಶ್ನಿಸಿದ್ದಾರೆ.
ಇದನ್ನು ಕಾಂಗ್ರೆಸ್ ನಾಯಕ ಪವನ್ ಖೇರಾ ಕೂಡ ಎಕ್ಸ್ ನಲ್ಲಿ ಪ್ರಶ್ನಿಸಿದ್ದು, ಮೋದಿ ಮತ್ತು ಅದಾನಿ ನಡುವಿನ ಈ ಸಂಬಂಧದ ಬಗ್ಗೆ ಹೆಚ್ಚೇನು ಇಲ್ಲ ಎಂದು ನೀವು ಭಾವಿಸಿದಾಗ ನಿರ್ಲಜ್ಜತೆಯ ಹೊಸ ಉದಾಹರಣೆ ಹೊರಬರುತ್ತದೆ. ಸರ್ಕಾರವನ್ನು ಪದಚ್ಯುತಗೊಳಿಸುವ ಮಾತುಕತೆಗಳ ಭಾಗವಾಗಲು ಉದ್ಯಮಿಯೋರ್ವರಿಗೆ ಹೇಗೆ ಅನುಮತಿಸಲಾಗಿದೆ ಎಂದು ಪ್ರಶ್ನಿಸಿದ್ದಾರೆ.
newslaundry ನೀಡಿರುವ ಸಂದರ್ಶನವೊಂದರಲ್ಲಿ ಎನ್ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಅದಾನಿ ಇದ್ದ ಸಭೆಗಳಲ್ಲಿ ಭಾಗವಹಿಸಿದ್ದಾಗಿ ಹೇಳಿಕೊಂಡಿದ್ದಾರೆ. 2019ರ ವಿಧಾನಸಭಾ ಚುನಾವಣೆ ನಂತರ ಬಿಜೆಪಿಯೊಂದಿಗೆ ಸರ್ಕಾರ ರಚಿಸಲು ಬಿಜೆಪಿ ಮತ್ತು ಶರದ್ ಪವಾರ್ ನಡುವೆ ಸಭೆ ನಡೆದಿತ್ತು. ಆ ಸಭೆಯಲ್ಲಿ ಅಮಿತ್ ಶಾ, ದೇವೇಂದ್ರ ಫಡ್ನವೀಸ್, ಶರದ್ ಪವಾರ್, ಅಜಿತ್ ಪವಾರ್ ಇದ್ದರು ಇದಲ್ಲದೆ ಗೌತಮ್ ಅದಾನಿ ಕೂಡ ಇದ್ದರು ಎಂದು ಅಜಿತ್ ಪವಾರ್ ಹೇಳಿದ್ದಾರೆ. ಬಿಜೆಪಿಯ ರಹಸ್ಯ ಸಭೆಯಲ್ಲಿ ಗೌತಮ್ ಅದಾನಿ ಇದ್ದರು ಎಂಬ ರಹಸ್ಯವನ್ನು ಎನ್ ಡಿಎ ಮೈತ್ರಿ ನಾಯಕ ಅಜಿತ್ ಪವಾರ್ ಬಿಚ್ಚಿಟ್ಟಿದ್ದು, ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.