ಆಗಸ್ಟ್ ನಲ್ಲಿ ಅಜಿತ್ ಪವಾರ್ ಮಹಾರಾಷ್ಟ್ರ ಮುಖ್ಯಮಂತ್ರಿ?: ದೇವೇಂದ್ರ ಫಡ್ನವಿಸ್ ಪ್ರತಿಕ್ರಿಯಿಸಿದ್ದು ಹೀಗೆ...
ಮುಂಬೈ: ಆಗಸ್ಟ್ ನಲ್ಲಿ ಏಕನಾಥ್ ಶಿಂಧೆ ಬದಲಿಗೆ ಅಜಿತ್ ಪವಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸಲಾಗುವುದು ಎಂಬ ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚವಾಣ್ ಅವರ ಹೇಳಿಕೆಯನ್ನು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಹಾಗೂ ಬಿಜೆಪಿಯ ಹಿರಿಯ ನಾಯಕ ದೇವೇಂದ್ರ ಫಡ್ನವಿಸ್ ಸೋಮವಾರ ತಳ್ಳಿಹಾಕಿದ್ದಾರೆ.
ಅಜಿತ್ ಪವಾರ್ ಅವರು ಮುಖ್ಯಮಂತ್ರಿಯಾಗುವುದಿಲ್ಲ ಎಂಬ ಅಂಶವನ್ನು ಚೆನ್ನಾಗಿ ತಿಳಿದಿದ್ದಾರೆ ಹಾಗೂ ಜುಲೈ 2 ರ ಮೊದಲು ನಡೆದ ಸಭೆಗಳಲ್ಲಿ ಈ ವಿಚಾರವನ್ನು ಅವರಿಗೆ ತಿಳಿಸಲಾಗಿದೆ ಎಂದು ಫಡ್ನವಿಸ್ ಸ್ಪಷ್ಟಪಡಿಸಿದರು.
ರಾಜ್ಯ ಸರಕಾರದ ಭಾಗವಾಗಿರುವ ಹಿರಿಯ ಎನ್ ಸಿಪಿ ನಾಯಕ ಅಜಿತ್ ಪವಾರ್ ಅವರನ್ನು ಆಗಸ್ಟ್ 10 ರ ಸುಮಾರಿಗೆ ಮುಖ್ಯಮಂತ್ರಿಯಾಗಿ ನೇಮಿಸಲಾಗುವುದು ಎಂಬ ಚವಾಣ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಫಡ್ನವಿಸ್, ಆ ದಿನಾಂಕದೊಳಗೆ ಸಚಿವ ಸಂಪುಟವನ್ನು ವಿಸ್ತರಿಸಬಹುದು, ಬೇರೇನೂ ಇಲ್ಲ ಎಂದು ಹೇಳಿದರು.
ವಿಧಾನ ಭವನದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಫಡ್ನವಿಸ್, "ಮಹಾಯುತಿ' (ಮಹಾ ಮೈತ್ರಿ) ಯಲ್ಲಿ ಏಕೈಕ ದೊಡ್ಡ ಪಕ್ಷದ ನಾಯಕನಾಗಿ, ಅಜಿತ್ ಪವಾರ್ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗುವುದಿಲ್ಲ ಎಂದು ನಾನು ನಿಮಗೆ ಅಧಿಕೃತವಾಗಿ ಹೇಳುತ್ತಿದ್ದೇನೆ. 'ಮಹಾಯುತಿ'ಯ ಸಭೆಗಳು ನಡೆದಾಗ (ಜುಲೈ 2 ರಂದು ಸರಕಾರದಲ್ಲಿ ಎನ್ ಸಿಪಿ ಬಣ ಸೇರ್ಪಡೆಗೊಳ್ಳುವ ಮೊದಲು), ಅಜಿತ್ ಪವಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗುವುದಿಲ್ಲ ಎಂಬ ಸ್ಪಷ್ಟ ಚಿತ್ರಣವನ್ನು ನೀಡಲಾಯಿತು’’ ಎಂದು ಹೇಳಿದರು.
ಏಕನಾಥ್ ಶಿಂಧೆ ಮುಖ್ಯಮಂತ್ರಿಯಾಗಿ ಉಳಿಯುತ್ತಾರೆ ಹಾಗೂ ಯಾವುದೇ ಬದಲಾವಣೆ ಇಲ್ಲ ಎಂದು ಒತ್ತಿ ಹೇಳಿದ ಫಡ್ನವಿಸ್, ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ಅಜಿತ್ ಪವಾರ್ ಅವರಿಗೆ ಸ್ಪಷ್ಟ ಚಿತ್ರಣವನ್ನು ನೀಡಲಾಗಿದೆ ಹಾಗೂ ಅದನ್ನು ಅವರು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಪೃಥ್ವಿರಾಜ್ ಚವಾಣ್ ವದಂತಿಗಳನ್ನು ಹಬ್ಬಿಸುತ್ತಿದ್ದಾರೆಂದು ದೂರಿದ ಫಡ್ನವಿಸ್,"ಮಹಾಮೈತ್ರಿಯ ಕುರಿತು ಅವರು ಜನರಲ್ಲಿ ಗೊಂದಲ ಮೂಡಿಸುವುದನ್ನು ನಿಲ್ಲಿಸಬೇಕು. ನಾಯಕರು ಯಾರೂ ಗೊಂದಲಕ್ಕೀಡಾಗಿಲ್ಲ ಆದರೆ ಪಕ್ಷದ ಕಾರ್ಯಕರ್ತರು ಗೊಂದಲಕ್ಕೀಡಾಗಿದ್ದಾರೆ. ಪೃಥ್ವಿರಾಜ್ ಚವ್ಹಾಣ್ ನಂತಹವರು ವದಂತಿ ಹಬ್ಬಿಸುತ್ತಿದ್ದಾರೆ.ಆಗಸ್ಟ್ 10ರೊಳಗೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂದ ಅವರು, ಸಿಎಂ ಈ ಕುರಿತು ಹೇಳಿಕೆ ಕೊಡಲಿದ್ದಾರೆ'' ಎಂದರು.