ಅಮೆರಿಕ: ವಿಶ್ವದಲ್ಲೇ ಮೊದಲ ಬಾರಿಗೆ ಇಡೀ ಕಣ್ಣು ಕಸಿ
ಸಾಂದರ್ಭಿಕ ಚಿತ್ರ Photo: freepik
ವಾಷಿಂಗ್ಟನ್: ತಜ್ಞ ಶಸ್ತ್ರಚಿಕಿತ್ಸಕರ ತಂಡ ಇಡೀ ಕಣ್ಣನ್ನು ಕಸಿ ಮಾಡಿದ ವೈದ್ಯಕೀಯ ವಿಸ್ಮಯ ನ್ಯೂಯಾರ್ಕ್ ನಿಂದ ವರದಿಯಾಗಿದೆ. ಇದನ್ನು ಅತಿದೊಡ್ಡ ವೈದ್ಯಕೀಯ ಸಾಧನೆ ಎಂದು ಬಣ್ಣಿಸಲಾಗಿದ್ದು, ಕಣ್ಣು ಕಸಿ ಮಾಡಿಸಿಕೊಂಡ ವ್ಯಕ್ತಿ ವಾಸ್ತವವಾಗಿ ತನ್ನ ದೃಷ್ಟಿಯನ್ನು ಪಡೆದುಕೊಂಡಿದ್ದಾರೆಯೇ ಎನ್ನುವುದು ಇನ್ನೂ ದೃಢಪಟ್ಟಿಲ್ಲ.
ಈ ಅಚ್ಚರಿಯ ಶಸ್ತ್ರಚಿಕಿತ್ಸೆಯಲ್ಲಿ ದಾನಿಯ ಮುಖದ ಒಂದು ಭಾಗವನ್ನು ಮತ್ತು ಎಡಕಣ್ಣನ್ನು ಕಿತ್ತು ದಾನ ಪಡೆಯುವ ವ್ಯಕ್ತಿಗೆ ಕಸಿ ಮಾಡಲಾಗುತ್ತದೆ. 2021ರ ಜೂನ್ ನಲ್ಲಿ ವಿದ್ಯುತ್ ಪ್ರವಹಿಸುತ್ತಿದ್ದ ತಂತಿಗೆ ಮುಖ ತಗುಲಿ 7200 ವೋಲ್ಟ್ ಎಲೆಕ್ಟ್ರಿಕ್ ಶಾಕ್ ನಿಂದ ತೀವ್ರ ಗಾಯಗೊಂಡು ಉಳಿದಿದ್ದ 46 ವರ್ಷದ ವ್ಯಕ್ತಿಗೆ ಈ ಅಪರೂಪದ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ.
ಅರೋನ್ ಜೋನ್ಸ್ (46) ಎಂಬ ವ್ಯಕ್ತಿಗೆ ತೀವ್ರ ಗಾಯಗಳಾಗಿದ್ದು, ಆತನ ಎಡಗಣ್ಣು, ಎಡಗೈ ಮತ್ತು ತೋಳು, ಇಡೀ ಮೂಗು ಮತ್ತು ತುಟಿಗಳು, ಮುಂಭಾಗದ ಹಲ್ಲು, ಗಲ್ಲದ ಎಡಭಾಗದ ಎಲುಬಿನ ವರೆಗೂ ಹಾನಿಯಾಗಿತ್ತು. ಈ ವ್ಯಕ್ತಿಯನ್ನು ಮುಖ ಪುನರ್ನಿರ್ಮಾಣ ಶಸ್ತ್ರಚಿಕಿತ್ಸೆಗೆ ಹೆಸರಾದ ಎನ್ ವೈಯು ಲಂಗೋನ್ ಹೆಲ್ತ್ ಗೆ ದಾಖಲಿಸಲಾಗಿತ್ತು. ಇಲ್ಲಿ ಮೇ 27ರಂದು ಈ ಪ್ರಕ್ರಿಯೆ ನೆರವೇರಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಇಡಿಯ ಕಣ್ಣನ್ನು ಕಸಿ ಮಾಡುವುದು ವೈದ್ಯಕೀಯ ವಿಜ್ಞಾನದ ವಿಸ್ಮಯ ಎನಿಸಿಕೊಂಡಿದ್ದು, ಸಂಶೋಧಕರು ಇಲಿಯ ಮೇಲಿನ ಪ್ರಯೋಗದಲ್ಲಿ ಯಶಸ್ಸು ಕಂಡಿದ್ದರು. ಇಂಥ ಶಸ್ತ್ರಚಿಕಿತ್ಸೆಯಿಂದ ಇಲಿಗೆ ಭಾಗಶಃ ದೃಷ್ಟಿ ಬಂದಿದ್ದರೂ, ಜೀವಂತ ವ್ಯಕ್ತಿಗೆ ಇಂಥ ಕಸಿ ನೆರವೇರಿಸಿರುವುದು ಇದೇ ಮೊದಲು.
ಮೊದಲ ಯಶಸ್ವಿ ಇಡೀ ಕಣ್ಣಿನ ಕಸಿ ಶಸ್ತ್ರಚಿಕಿತ್ಸೆಯನ್ನು ನೆರೆವೇರಿಸುವ ಮೂಲಕ ಅದ್ಭುತ ಸಾಧನೆ ಮಾಡಲು ಸಾಧ್ಯವಾಗಿದೆ" ಎಂದು 21 ಗಂಟೆ ಕಾಲದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸಿದ ಎಡ್ವೆರ್ಡೊ ರೋಡ್ರಿಗ್ಸ್ ಹೇಳಿದ್ದಾರೆ.