ಅಮೆರಿಕದ ಇಂಗು ತಿಂದ ಮಂಗಗಳು !

PC: PTI
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಬಿಜೆಪಿ ಮತ್ತು ಭಾರತದ ಕೆಲವು ಮಾಧ್ಯಮಗಳು ಅಮೆರಿಕದ ಇಂಗು ತಿಂದ ಮಂಗಗಳಂತಾಗಿವೆ. ‘‘ಭಾರತದಲ್ಲಿ ಮತದಾನ ಉತ್ತೇಜನಕ್ಕೆ ಅಮೆರಿಕವು 21 ಮಿಲಿಯನ್ ಡಾಲರ್ ಅನುದಾನ ನೀಡಿದೆ. ಇದನ್ನು ನಾವು ರದ್ದುಗೊಳಿಸುತ್ತಿದ್ದೇವೆ’’ ಎಂದು ಇತ್ತೀಚೆಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದರು. ಹೀಗೆ ನಿಜವೇ?’’ ಎಂದು ಕೇಂದ್ರ ಸರಕಾರವನ್ನು ಪ್ರಶ್ನಿಸಬೇಕಾಗಿತ್ತು. ಅಮೆರಿಕದಿಂದ ಈ ಹಣ ಬಂದಿರುವುದು ಹೌದೆ? ಇದನ್ನು ಅಮೆರಿಕ ತನ್ನ ಖಜಾನೆಯಿಂದ ಅಧಿಕೃತವಾಗಿ ಭಾರತ ಸರಕಾರಕ್ಕೆ ನೀಡಿದೆಯೆ? ಅಥವಾ ಕಿಕ್ಬ್ಯಾಕ್ ರೂಪದಲ್ಲಿ ಯಾವುದಾದರೂ ಸರಕಾರೇತರ ಸಂಘಟನೆಗಳಿಗೆ ಸಂದಾಯ ಮಾಡಿದೆಯೆ? ಎನ್ನುವ ಪ್ರಶ್ನೆಗಳಿಗೆ ಉತ್ತರಿಸಬೇಕಾದದ್ದು ಕಳೆದ ಒಂದು ದಶಕದಿಂದ ಈ ದೇಶದ ಚುಕ್ಕಾಣಿ ಹಿಡಿದಿರುವ ಪ್ರಧಾನಿ ಮೋದಿ ನೇತೃತ್ವದ ಸರಕಾರ. ಈ ದೇಶದಲ್ಲಿ ಮಾನವಹಕ್ಕುಗಳಿಗಾಗಿ, ಪರಿಸರದ ಉಳಿವಿಗಾಗಿ ಹೋರಾಡುತ್ತಾ ಬಂದಿರುವ ಹತ್ತು ಹಲವು ಸರಕಾರೇತರ ಸಂಘಟನೆಗಳಿಗೆ ಬರುತ್ತಿರುವ ದೇಣಿಗೆಯನ್ನು, ನಿಧಿಯನ್ನು ಬೇರೆ ಬೇರೆ ನೆಪಗಳನ್ನು ಮುಂದೊಡ್ಡಿ ತಡೆಯುವಲ್ಲಿ ಸಂಪೂರ್ಣ ಯಶಸ್ವಿಯಾಗಿರುವ ಕೇಂದ್ರ ಸರಕಾರ, ಅಮೆರಿಕವು ಭಾರತಕ್ಕೆ ಚುನಾವಣೆಯ ಉತ್ತೇಜನದ ಹೆಸರಿನಲ್ಲಿ ಕಳುಹಿಸುತ್ತಿದ್ದ ದೇಣಿಗೆಯ ಬಗ್ಗೆ ಯಾಕೆ ಕುರುಡಾಗಿತ್ತು? ಇದು ಸರಕಾರದ ಅರಿವಿಗೇ ಬಂದಿರಲಿಲ್ಲವೇ? ಮೊದಲಾದ ಪ್ರಶ್ನೆಗಳಿಗೆ ಉತ್ತರಿಸಿ ಭಾರತದ ಜನರ ಆತಂಕಗಳನ್ನು ನಿವಾರಿಸುವ ಬದಲು, ಕೇಂದ್ರ ಸರಕಾರ ಈ ಹಣಕ್ಕೆ ಸಂಬಂಧಿಸಿ ವಿರೋಧ ಪಕ್ಷವನ್ನೇ ಹೊಣೆಗಾರ ಮಾಡಿತು. ಪ್ರಧಾನಿ ಮೋದಿಯನ್ನು ಅಧಿಕಾರಕ್ಕೇರದಂತೆ ತಡೆಯಲು ಕಾಂಗ್ರೆಸ್ ಪಕ್ಷ ಈ ಹಣವನ್ನು ಅಮೆರಿಕದಿಂದ ಪಡೆದಿದೆ ಎಂದು ಕೇಂದ್ರ ಸರಕಾರವೇ ಆರೋಪಿಸಿದ್ದಲ್ಲದೆ, ಪತ್ರಿಕೆಗಳು ಇದಕ್ಕೆ ಬಣ್ಣ ತುಂಬಿ ಮುಖ ಪುಟದಲ್ಲಿ ಪ್ರಕಟಿಸಿದವು. ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿಯಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಸೋನಿಯಾಗಾಂಧಿ ಮತ್ತು ಸಿಐಎ ನಡುವೆ ಸಂಬಂಧವಿದೆ ಎಂದು ಆರೋಪಿಸಿದರು. ಒಟ್ಟಿನಲ್ಲಿ ಭಾರತಕ್ಕೆ ಹಣ ಸಂದಾಯವಾಗುತ್ತಿದೆ ಎಂದು ಟ್ರಂಪ್ ಹೇಳಿದಾಕ್ಷಣ, ಅದರ ಸತ್ಯಾಸತ್ಯತೆಯನ್ನು ಪರೀಕ್ಷಿಸದೇ, ಭಾರತ ಸರಕಾರವೇ ಅದನ್ನು ಒಪ್ಪಿಕೊಂಡಿತು. ಮಾತ್ರವಲ್ಲ, ಅದನ್ನು ತನ್ನ ರಾಜಕೀಯಕ್ಕೆ ಬಳಸಲು ಯತ್ನಿಸಿತು.
ಆದರೆ ಒಂದೆರಡು ಮಾಧ್ಯಮಗಳು ಸತ್ಯಾಸತ್ಯತೆಯ ತನಿಖೆಗೆ ಇಳಿದಾಗ, ಭಾರತಕ್ಕೆ ಅಂತಹ ಹಣ ಬಂದಿರುವ ಬಗ್ಗೆ ಯಾವುದೇ ದಾಖಲೆಗಳಿಲ್ಲ ಎನ್ನುವುದು ಗೊತ್ತಾಯಿತು. ‘‘2022ರಲ್ಲಿ ಅಮೆರಿಕ 180 ಕೋಟಿ ರೂಪಾಯಿ ನಿಧಿಯನ್ನು ಕೊಟ್ಟಿದ್ದು ಭಾರತಕ್ಕೆ ಅಲ್ಲ, ಬಾಂಗ್ಲಾದೇಶಕ್ಕೆ. ಇದನ್ನು ಭಾರತಕ್ಕೆ ನೀಡಲಾಗಿದೆ ಎಂದು ಟ್ರಂಪ್ ತಪ್ಪಾಗಿ ವ್ಯಾಖ್ಯಾನಿಸಿದ್ದಾರೆ’’ ಎಂದು ತನ್ನ ಸತ್ಯಶೋಧನಾ ವರದಿಯಲ್ಲಿ ಬಹಿರಂಗಪಡಿಸಿದರೂ, ಬಿಜೆಪಿ ಮತ್ತು ಭಾರತದ ಕೆಲವು ಮಾಧ್ಯಮಗಳು ‘ಪ್ರಧಾನಿ ಮೋದಿಯನ್ನು ಸೋಲಿಸುವುದಕ್ಕಾಗಿ ಬೈಡನ್ನಿಂದ ಕಿಕ್ ಬ್ಯಾಕ್’ ಎನ್ನುವ ಆರೋಪದಿಂದ ಒಂದಿಂಚೂ ಹಿಂದೆ ಸರಿಯಲಿಲ್ಲ. ತನ್ನ ಗಮನಕ್ಕೆ ತಾರದೆ ಅಮೆರಿಕ ಅಷ್ಟೊಂದು ದುಡ್ಡನ್ನು ಭಾರತಕ್ಕೆ ಸುರಿದಿದೆ ಎನ್ನುವುದು ಮೋದಿ ಸರಕಾರದ ವೈಫಲ್ಯವಾಗಿದೆ. ತನ್ನದೇ ಸರಕಾರದ ವೈಫಲ್ಯವನ್ನು ಮುಚ್ಚಿಟ್ಟು ‘‘ಇದು ಆತಂಕಕಾರಿ ವಿಚಾರ. ಸರಕಾರದ ಏಜೆನ್ಸಿಗಳು ಇದರ ಕುರಿತಂತೆ ತನಿಖೆ ನಡೆಸಲಿವೆ’’ ಎಂದು ವಿದೇಶಾಂಗ ವಕ್ತಾರ ರಣಧೀರ್ ಜೈಸ್ವಾಲ್ ಮಾಧ್ಯಮಗಳಿಗೆ ತಿಳಿಸಿದರು. ಆದರೆ ಬಿಜೆಪಿ ಮತ್ತು ಮಾಧ್ಯಮಗಳ ದುರದೃಷ್ಟಕ್ಕೆ ಅಮೆರಿಕದ ಅಧ್ಯಕ್ಷ ಟ್ರಂಪ್, ಇದೀಗ ಈ ದುಡ್ಡು ಯಾರ ಕೈಗೆ ಹೋಗಿದೆ ಎನ್ನುವುದನ್ನು ಕೂಡ ಬಹಿರಂಗಪಡಿಸಿದ್ದಾರೆ. ‘‘ಬಾಂಗ್ಲಾಕ್ಕೆ ಮಾತ್ರವಲ್ಲ, ಭಾರತದಲ್ಲಿ ಮತದಾನ ಉತ್ತೇಜನಕ್ಕಾಗಿ ಅಮೆರಿಕ ಹಣ ನೀಡಿದೆ. 21 ಮಿಲಿಯನ್ ಡಾಲರ್ ಹಣ ನನ್ನ ಗೆಳೆಯ ಮೋದಿಗೆ ಹೋಗುತ್ತಿದೆ’’ ಎಂದು ಟ್ರಂಪ್ ಮತ್ತೊಂದು ಬಾಂಬ್ ಹಾಕಿದ್ದಾರೆ. ಇದೀಗ ಈ 21 ಮಿಲಿಯನ್ ಡಾಲರ್ನ್ನು ನುಂಗುವುದೋ, ಉಗುಳುವುದೋ ತಿಳಿಯದೇ ಕೇಂದ್ರ ಸರಕಾರ ಮತ್ತು ಭಾರತದ ಮಾಧ್ಯಮಗಳು ಇಂಗು ತಿಂದ ಮಂಗಗಳಂತೆ ಆಗಿವೆ.
ಟ್ರಂಪ್ ಮೊದಲ ಬಾರಿ ಹೇಳಿಕೆ ನೀಡಿದಾಗ ಅದನ್ನು ಕೇಂದ್ರ ಸರಕಾರ ನಿರಾಕರಿಸಬೇಕಾಗಿತ್ತು. ಆದರೆ ಅದನ್ನು ಒಪ್ಪಿಕೊಂಡದ್ದು ಮಾತ್ರವಲ್ಲ, ಆ ಹಣ ಮೋದಿಯ ವಿರುದ್ಧ ಬಳಕೆಯಾಗಿದೆ ಎಂದು ಅದರಿಂದ ರಾಜಕೀಯ ಲಾಭ ಪಡೆಯಲು ಮುಂದಾಯಿತು. ಇದೀಗ ಪ್ರಧಾನಿ ಮೋದಿಯವರ ಗೆಳೆಯನಾಗಿರುವ ಟ್ರಂಪ್ ಸಾಹೇಬರೇ ಹಣವನ್ನು ಯಾರಿಗೆ ಕೊಡಲಾಗಿದೆ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಭಾರತ ಸರಕಾರಕ್ಕಾಗಲಿ, ಚುನಾವಣಾ ಆಯೋಗಕ್ಕಾಗಲಿ ಈ ಹಣದ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಆದರೆ ಟ್ರಂಪ್ ಪ್ರಕಾರ ಹಣ ಅವರ ಗೆಳೆಯ ಮೋದಿಗೆ ಹೋಗಿದೆ. ಹಾಗಾದರೆ ಪ್ರಧಾನಿ ಮೋದಿಯವರು ಇಷ್ಟು ಪ್ರಮಾಣದ ಹಣವನ್ನು ಯಾವುದಕ್ಕಾಗಿ ಬಳಸಿದರು? ಈ ಪ್ರಶ್ನೆಗೆ ಬಿಜೆಪಿ ಮತ್ತು ಕೇಂದ್ರ ಸರಕಾರ ಉತ್ತರಿಸಬೇಕು. ಟ್ರಂಪ್ ಮತ್ತು ಮೋದಿಯ ನಡುವೆ ಸ್ನೇಹ ಎಲ್ಲ ಔಪಚಾರಿಕ ಗಡಿಗಳನ್ನು ಮೀರಿದ್ದಾಗಿದೆ. ಯಾಕೆಂದರೆ, ಕೊರೋನ ಕಾಲದಲ್ಲಿ ಎಲ್ಲ ನಿರ್ಬಂಧಗಳನ್ನು ಗಾಳಿಗೆ ತೂರಿ, ದೇಶದ ಜನತೆಯ ಆರೋಗ್ಯವನ್ನೇ ಬಲಿಕೊಟ್ಟು ಟ್ರಂಪ್ಗಾಗಿ ಗುಜರಾತ್ನಲ್ಲಿ ‘ನಮಸ್ತೆ ಟ್ರಂಪ್’ ಸಮಾವೇಶವನ್ನು ಮೋದಿಯವರು ಹಮ್ಮಿಕೊಂಡಿದ್ದರು. ಈ ಹಿಂದಿನ ಚುನಾವಣೆಯ ಸಂದರ್ಭದಲ್ಲಿ ಅಮೆರಿಕಕ್ಕೆ ತೆರಳಿ, ತನ್ನ ಪ್ರಧಾನಿ ಹುದ್ದೆಯ ಘನತೆಯನ್ನು ಬಲಿಕೊಟ್ಟು ಅಲ್ಲಿನ ಅನಿವಾಸಿ ಭಾರತೀಯರ ಮುಂದೆ ‘ಅಬ್ ಕಿ ಬಾರ್ ಟ್ರಂಪ್ ಸರಕಾರ್’ ಎಂದು ಘೋಷಣೆ ಕೂಗಿ ಭಾರತವನ್ನು ಮುಜುಗರಕ್ಕೆ ಸಿಲುಕಿಸಿದ್ದರು. ಇವುಗಳಿಗೂ ಅಮೆರಿಕದಿಂದ ಪ್ರಧಾನಿ ಮೋದಿಗೆ ಸಂದಾಯವಾಗಿರುವ ಅನಧಿಕೃತ ದೇಣಿಗೆಗೂ ಸಂಬಂಧವಿದೆಯೇ ಎಂದು ಜನರು ಪ್ರಶ್ನಿಸುವಂತಾಗಿದೆ. ಭಾರತಕ್ಕೆ ಅಮೆರಿಕದಿಂದ ಹಣ ಹೋಗಿರುವುದು ನಿಜ ಎಂದು ಟ್ರಂಪ್ ಮತ್ತೆ ಮತ್ತೆ ಉಚ್ಚರಿಸುತ್ತಿರುವುದು, ಭಾರತದ ಪಾಲಿಗೆ ಮುಜುಗರ ತರುವ ವಿಷಯವಾಗಿದೆ. ಇದನ್ನು ಭಾರತ ಸರಕಾರ ಗಂಭೀರವಾಗಿ ತೆಗೆದುಕೊಳ್ಳಲೇಬೇಕು. ಒಂದು ದೇಶದ ಅಧ್ಯಕ್ಷರಾಗಿ ಟ್ರಂಪ್ ಅವರು ಭಾರತದ ಪ್ರಧಾನಿಗೆ ಹಣ ಹೋಗಿದೆ ಎಂದು ಹೇಳಿದ ಬಳಿಕವೂ ಕೇಂದ್ರ ಸರಕಾರ ಯಾಕೆ ಮೌನವಾಗಿದೆ? ಪ್ರಧಾನಿ ಮೋದಿಯವರು ಈ ಬಗ್ಗೆ ಯಾಕೆ ಪ್ರತಿಕ್ರಿಯೆ ನೀಡುತ್ತಿಲ್ಲ?
‘ಅವರಿಗೆ ಅಷ್ಟು ಕೊಟ್ಟಿದ್ದೇನೆ, ಇವರಿಗೆ ಇಷ್ಟು ಕೊಟ್ಟಿದ್ದೇನೆ...ಎಲ್ಲ ಅನುದಾನಗಳನ್ನು ನಿಲ್ಲಿಸುತ್ತೇನೆ’ ಎಂದೆಲ್ಲ ಪುಂಗಿ ಬಿಡುತ್ತಿರುವ ಅಮೆರಿಕ ಒಂದನ್ನು ತಿಳಿದುಕೊಳ್ಳಬೇಕಾಗಿದೆ. ಅಮೆರಿಕ ವಿಶ್ವದ ಅಭಿವೃದ್ಧಿ ಶೀಲ ದೇಶಗಳಿಗೆ ಕೊಟ್ಟಿದ್ದಕ್ಕಿಂತ ಅಲ್ಲಿಂದ ದೋಚಿದ್ದೇ ಹೆಚ್ಚು. ಭಾರತದ ಉಪಖಂಡದಲ್ಲಿ ಯುದ್ಧ ಸನ್ನಿವೇಶವನ್ನು ಬಿತ್ತಿ ಭಾರತ, ಪಾಕಿಸ್ತಾನ ಎರಡಕ್ಕೂ ತನ್ನ ಶಸ್ತ್ರಾಸ್ತ್ರಗಳನ್ನು ಮಾರಿ ಅಮೆರಿಕ ದೋಚಿದ ದುಡ್ಡಿಗೆ ಹೋಲಿಸಿದರೆ, ಟ್ರಂಪ್ ಹೇಳುತ್ತಿರುವ 21 ಮಿಲಿಯನ್ ಡಾಲರ್ ಏನೇನು ಅಲ್ಲ. ಈ ಜಗತ್ತಿಗೆ ತಾನು ಮಾಡಿದ ನಾಶ, ನಷ್ಟಗಳನ್ನು ಮುಚ್ಚಿ ಹಾಕಲು ಅಮೆರಿಕ ವಿಶ್ವಸಂಸ್ಥೆಗೆ ಬೇರೆ ಬೇರೆ ರೂಪದಲ್ಲಿ ದೇಣಿಗೆಗಳನ್ನು ನೀಡಿದೆ. ಮಧ್ಯ ಪ್ರಾಚ್ಯದಲ್ಲಿ ಅಮೆರಿಕ ಮಾಡುತ್ತಿರುವ ದಾಂಧಲೆಗಳನ್ನು, ಲೂಟಿಗಳನ್ನು ನೋಡಿಯೂ ವಿಶ್ವಸಂಸ್ಥೆ ಕಣ್ಣು ಮುಚ್ಚಿ ಯಾಕೆ ಕುಳಿತಿದೆ ಎನ್ನುವುದು ಗುಟ್ಟಿನ ವಿಷಯವೇನೂ ಇಲ್ಲ. ಇಂದು ‘ಆ ದೇಣಿಗೆಯನ್ನು ನಿಲ್ಲಿಸುತ್ತೇನೆ...ಈ ದೇಣಿಗೆಯನ್ನು ನಿಲ್ಲಿಸುತ್ತೇನೆ’ ಎಂದು ಬೆದರಿಕೆಯ ದನಿಯಲ್ಲಿ ಅಮೆರಿಕ ಯಾಕೆ ಮಾತನಾಡುತ್ತಿದೆ ಎನ್ನುವುದು ಕೂಡ ಸ್ಪಷ್ಟವಿದೆ. ಭಾರತದಂತಹ ಅಭಿವೃದ್ಧಿಶೀಲ ದೇಶಗಳು ಇಂದು ಅಮೆರಿಕವನ್ನಷ್ಟೇ ನೆಚಿ ್ಚಕೊಂಡಿಲ್ಲ. ಅಮೆರಿಕ ಹೇಳಿದ್ದಕ್ಕೆಲ್ಲ ಹೆಬ್ಬೆಟ್ಟು ಒತ್ತಲು ಅವುಗಳು ಸಿದ್ಧವಿಲ್ಲ. ತನ್ನ ಹಿತಾಸಕ್ತಿಗೆ ಪೂರಕವಾಗಿ ಅಮೆರಿಕದ ವಿರೋಧಿ ದೇಶಗಳ ಜೊತೆಗೂ ಸಂಬಂಧವನ್ನು ವಿಸ್ತರಿಸಿಕೊಳ್ಳುತ್ತಿವೆ. ಇಂಧನ, ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿ ಅಮೆರಿಕ ಮಾತ್ರವಲ್ಲದೆ ರಶ್ಯ, ಇರಾನ್ನಂತಹ ದೇಶಗಳೊಂದಿಗೆ ಸ್ನೇಹ ಬೆಳೆಸಲು ಭಾರತ ಯತ್ನಿಸುತ್ತಿದೆ. ಅಮೆರಿಕದ ಡಾಲರ್ಗೆ ಪರ್ಯಾಯವಾಗಿ ಬೇರೆ ಕರೆನ್ಸಿಗಳ ಬಗ್ಗೆ ಆಸಕ್ತಿಯನ್ನು ತೋರ್ಪಡಿಸುತ್ತಿದೆ. ಹಾಗೆಯೇ ಅಮೆರಿಕದ ಯಾವ ಒತ್ತಡಗಳಿಗೂ ಮಣಿಯದೆ ಉತ್ಪನ್ನಗಳಿಗೆ ಸುಂಕ ವಿಧಿಸುತ್ತಿರುವುದು ಕೂಡ ಅಮೆರಿಕದ ತಾಳ್ಮೆಯನ್ನು ಕೆಡಿಸಿದೆ. ಇದರಿಂದ ಹತಾಶೆಗೊಂಡು ಭಾರತದ ಕುರಿತಂತೆ ಏನೇನೋ ಬಡಬಡಿಸುತ್ತಿದೆ. ಅಮೆರಿಕ ಯಾವುದೇ ಯೋಜನೆಗಳಿಗೆ ಅಧಿಕೃತವಾಗಿ ದೇಣಿಗೆಗಳನ್ನು ನೀಡುತ್ತಿದ್ದರೂ ಅದು ಆ ದೇಶದ ಆರ್ಥಿಕ ನೀತಿಗಳಿಗೆ ಪೂರಕವಾಗಿಯೇ ಇದೆಯೇ ಹೊರತು ಭಾರತದ ಮೇಲಿನ ಅನುಕಂಪದಿಂದ ಅಲ್ಲ. ಆದುದರಿಂದ, ಅಮೆರಿಕದ ಭಿಕ್ಷೆಯಿಂದ ಭಾರತ ಬದುಕುತ್ತಿಲ್ಲ ಎನ್ನುವುದನ್ನು ಟ್ರಂಪ್ಗೆ ಸ್ಪಷ್ಟಪಡಿಸುವುದು ಭಾರತ ಸರಕಾರದ ಕರ್ತವ್ಯವಾಗಿದೆ. ಭಾರತದ ಪ್ರಧಾನಿಯ ಬಗ್ಗೆ ಅಮೆರಿಕದಂತಹ ಒಂದು ಪ್ರಬಲ ದೇಶ ಅತ್ಯಂತ ಹಗುರವಾಗಿ ಮಾತನಾಡುತ್ತಿರುವಾಗ, ಒಬ್ಬ ದುರ್ಬಲ ಸರಕಾರವಷ್ಟೇ ಅದನ್ನು ಮೌನವಾಗಿ ಸಹಿಸಿಕೊಳ್ಳಬಹುದು. ಈ ದೇಶವನ್ನು ನೆಹರೂ, ಇಂದಿರಾಗಾಂಧಿ, ಅಟಲ್ ಬಿಹಾರಿ ವಾಜಪೇಯಿಯಂತಹ ನಾಯಕರು ಆಳುತ್ತಿದ್ದಾಗ ಭಾರತದ ಬಗ್ಗೆ ಇಷ್ಟು ಕೇವಲವಾಗಿ ಯಾರೂ ಮಾತನಾಡಿರಲಿಲ್ಲ. ಇಂತಹ ಮಾತುಗಳು ಭಾರತಕ್ಕೆ ಹೊಸತು. ಭಾರತ ಇದನ್ನು ಬಲವಾಗಿ ಖಂಡಿಸಬೇಕು ಮತ್ತು ಅಮೆರಿಕದ ಆರೋಪ ಎಷ್ಟು ನಿಜ, ಎಷ್ಟು ಸುಳ್ಳು ಎನ್ನುವುದನ್ನು ಕೇಂದ್ರ ಸರಕಾರ ಭಾರತದ ಜನತೆಗೆ ಸ್ಪಷ್ಟಪಡಿಸಬೇಕು.