ಮೇ 15ರಿಂದ ಕುಪ್ಪೆಪದವು ನೂತನ ಮಸೀದಿ ಉದ್ಘಾಟನೆ, ಧಾರ್ಮಿಕ ಕಾರ್ಯಕ್ರಮ

ಬಜ್ಪೆ: 1958ರಲ್ಲಿ ಸ್ಥಾಪನೆಯಾದ ಕುಪ್ಪೆಪದವು ಬದ್ರಿಯಾ ಜುಮಾ ಮಸೀದಿಯ 1.20ಕೋಟಿ ರೂ. ವೆಚ್ಚದಲ್ಲಿ ನವೀಕರಿಸಲಾದ ನೂತನ ಮಸೀದಿಯ ಉದ್ಘಾಟನೆ ಹಾಗೂ ಮೂರು ದಿನಗಳ ಧಾರ್ಮಿಕ ಕಾರ್ಯಕ್ರಮವು ಮೇ 15ರಿಂದ 17ರ ವರೆಗೆ ಮಸೀದಿಯ ವಠಾರದಲ್ಲಿ ನಡೆಯಲಿದೆ ಎಂದು ಮಸೀದಿಯ ಅಧ್ಯಕ್ಷ ಕೆ. ಮುಹಮದಮ್ ಶರೀಫ್ ಅವರು ಹೇಳಿದ್ದಾರೆ.
ಈ ಸಂಬಂಧ ಮಸೀದಿಯ ವಠಾರದಲ್ಲಿ ಮಂಗಳವಾರ ಕರೆಯಲಾಗಿದ್ದ ಸುದ್ದಿಗೋಷ್ಠಿ ಮತ್ತು ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ ಅವರು, ಮಸೀದಿ 1958ರಲ್ಲಿ ಸ್ಥಾಮನೆಗೊಂಡಿದೆ. ಮಸೀದಿ ನಿರ್ಮಾಣಕ್ಕೆ 80 ಲಕ್ಷ ರೂ. ಮೌಲ್ಯದ ಸಾಗುವಾನಿ ಮರಗಳನ್ನು ಬಳಸಿಕೊಳ್ಳಲಾಗಿದ್ದು, ವಿನ್ಯಾಸಕ್ಕೆ 40 ಲಕ್ಷ ರೂ. ಖರ್ಚು ತಗುಲಿದೆ. ಒಟ್ಟು 1.20 ಕೋಟಿ ರೂ. ವೆಚ್ಚದಲ್ಲಿ ಪುನರ್ ವಿನ್ಯಾಸ ಗೊಳಿಸಲಾಗಿದ್ದು, ಈ ವಿನ್ಯಾಸದ ಮಸೀದಿ ಕರ್ನಾಟಕದಲ್ಲೇ ಪ್ರಥಮ ಎಂದು ಅವರು ನುಡಿದರು.
ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾದ ಇನಾಯತ್ ಅಲಿ ಮಾತನಾಡಿ, ರಾಜಕ್ಯದಲ್ಲೇ ಪ್ರಥಮ ಎಂಬಂತೆ ಪುರ್ ವಿನ್ಯಾಸ ಗೊಳಿಸಲಾಗಿರುವ ಬದ್ರಿಯಾ ಜುಮಾ ಮಸೀದಿಯ ಉದ್ಘಾಟನಾ ಸಮಾರಂಭವು ಮೇ 15ರಿಂದ 17ರ ವರೆಗಿನ ಮೂರು ದಿನಗಳ ಕಾಲ ನಡೆಯಲಿದೆ. ಮಸೀದಿಯ ಉದ್ಘಾಟನಾ ಸಮಾರಂಭಕ್ಕೆ ಸರ್ವಧರ್ಮೀಯರನ್ನು ಆಹ್ವಾನಿಸಲಾಗುತ್ತಿದ್ದು, ಕುಪ್ಪೆಪದವಿನಲ್ಲಿ ಹಬ್ಬದ ರೀತಿಯಲ್ಲಿ ವಿಜ್ರಂಭಿಸಲಾಗುವುದು ಎಂದರು.
ಸಭಾ ಕಾರ್ಯಕ್ರಮದಲ್ಲಿ ವಕ್ಫ್ ಸಚಿವರಾದ ಝಮೀರ್ ಅಹ್ಮದ್ ಖಾನ್, ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್, ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್, ಸಂಸದ ಬ್ರಿಜೇಶ್ ಚೌಟ, ಶಾಸಕ ಭರತ್ ಶೆಟ್ಟಿ ಸಹಿತ ರಾಜಕೀಯ, ಧಾರ್ಮಿಕ, ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದ ಮಸೀದಿಯ ಖತೀಬ್ ಅಬ್ದುಲ್ ಸಲಾಂ ಮದನಿ ಅವರು, ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾದ ಇನಾಯತ್ ಅಲಿ ನೇತೃತ್ವದಲ್ಲಿ ಜಮಾಅತ್ ಅಧ್ಯಕ್ಷರಾದ ಶರೀಫ್ ಕಜೆ ಅಧ್ಯಕ್ಷತೆಯಲ್ಲಿ ಮೂರು ದಿನಗಳ ಕಾರ್ಯಕ್ರಮ ನಡೆಯಲಿದ್ದು, ಮೇ15ರಂದು ಬೆಳಗ್ಗೆ 11ಗಂಟೆಯಿಂದ ಸಂಜೆ 4:30ರವರೆಗೆ ನವೀಕೃತ ಮಸೀದಿಯನ್ನು ಸರ್ವಧರ್ಮೀಯರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಶೈಖುನಾ ಬೊಳ್ಳೂರು ಉಸ್ತಾದ್ ನೇತೃತ್ವದಲ್ಲಿ ಫಜರ್ ನಮಾಝ್ ಬಳಿಕ ಬದ್ರ್ ಮೌಲಿದ್, ದುವಾ ಹಾಗೂ 10:30ಕ್ಕೆ ಧ್ವಜಾರೋಹಣ ನಡೆಯಲಿದೆ. ಶರೀಫ್ ಉಸ್ತಾದ್ ಮತ್ತು ಬಳಗದವರು ಸಂಜೆ 6:30ಕ್ಕೆ ಮಳ್ಹರತುಲ್ ಬದ್ರಿಯಾ ಹಾಗೂ ಏರ್ವಾಡಿ ಮಜ್ಲೀಸ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ನೂರುಸ್ಸಾದಾತ್ ಸಯ್ಯದ್ ಬಾಯಾರ್ ತಂಙಳ್ ದುವಾಗೈಯ್ಯಲಿದ್ದಾರೆ. ಮೇ16ರಂದು ಮಧ್ಯಾಹ್ನ 12ಗಂಟೆಗೆ ನವೀಕೃತ ಮಸೀದಿಯನ್ನು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಉದ್ಘಾಟಿಸಲಿದ್ದು, ಬದ್ರುಸ್ಸಾದಾತ್ ಇಬ್ರಾಹಿಂ ಖಲೀಲುಲ್ ಬುಖಾರಿ ತಂಙಳ್ ಜುಮಾ ನಮಾಝ್ ನಿರ್ವಹಿಸಲಿದ್ದಾರೆ. 17ರಂದು ರಾತ್ರಿ 6ಗಂಟೆಗೆ ಸೌಹಾರ್ದ ಸಂಗಮ ಹಾಗೂ ಸಮಾರೋಪ ಸಮಾರಂಭ ನಡೆಯಲಿದ್ದು, ಸರ್ವ ಧರ್ಮಗಳ ಪ್ರಮುಖ ಧರ್ಮಗುರುಗಳು, ಸಾಮಾಜಿಕ, ರಾಜಕೀಯ ನಾಯಕರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ದ..ಕ. ಯುವ ಕಾಂಗ್ರೆಸ್ ಕಾರ್ಯದರ್ಶಿ ಗಿರೀಶ್ ಆಳ್ವ, ಮುತ್ತೂರು ಗ್ರಾ.ಪಂ. ಮಾಜಿ ಉಪಾಧ್ಯಕ್ಷ ದಯಾನಂದ ಶೆಟ್ಟಿ, ಕುಪ್ಪೆಪದವು ಗ್ರಾ.ಪಂ. ಸದಸ್ಯ ಡಿ.ಪಿ.ಹಮ್ಮಬ್ಬ, ಮಾಜಿ ಉಪಾಧ್ಯಕ್ಷ ಅಬೂಬಕ್ಕರ್ ಕಲ್ಲಾಡಿ, ಪದರಂಗಿ ಮಸೀದಿಯ ಅಧ್ಯಕ್ಷ ಮುಸ್ತಫಾ ಪದರಂಗಿ, ಹಿರಿಯರಾದ ಅಬ್ದುಲ್ ಖಾದರ್, ಸ್ವಾಗತ ಸಮಿತಿ ಅಧ್ಯಕ್ಷ ಹಮೀದ್ ಗುದುರು, ರಝಾಕ್ ಪದವಿನಂಗಡಿ, ಮಸೀದಿಯ ಪ್ರಧಾನ ಕಾರ್ಯದರ್ಶಿ ರಫೀಕ್ ಮೊದಲಾದವರು ಇದ್ದರು.