ಸುರತ್ಕಲ್‌| ಎ.18ರಿಂದ ಸಹಸ್ರ ಕುಂಭ ಬ್ರಹ್ಮಕಲಶಾಭಿಷೇಕ, ಜಾತ್ರಾಮಹೋತ್ಸವ

Update: 2025-04-10 21:18 IST
ಸುರತ್ಕಲ್‌| ಎ.18ರಿಂದ ಸಹಸ್ರ ಕುಂಭ ಬ್ರಹ್ಮಕಲಶಾಭಿಷೇಕ, ಜಾತ್ರಾಮಹೋತ್ಸವ
  • whatsapp icon

ಸುರತ್ಕಲ್‌ : 1988ರಲ್ಲಿ ನಿರ್ಮಾಣಗೊಂಡ ಶ್ರೀ ಕ್ಷೇತ್ರ ಗಣೇಶಪುರ ಮಹಾಗಣಪತಿ ದೇವಸ್ಥಾನದಲ್ಲಿ ಎ.18 ರಿಂದ 26ರ ವರೆಗೆ ಸಹಸ್ರ ಕುಂಭ ಬ್ರಹ್ಮಕಲಶಾಭಿಷೇಕ, ಜಾತ್ರಾಮಹೋತ್ಸವ, ನೂತನ ಬ್ರಹ್ಮರಥ ಸಮರ್ಪಣೆ ಬ್ರಹ್ಮರಥೋತ್ಸವ, ಭಜನಾ ಸಂಭ್ರಮೋತ್ಸವ, ನಾಗಮಂಡಲೋತ್ಸವ, ಜಾರಂದಾಯ ದೈವದ ನೇಮೋತ್ಸವವು ಜರುಗಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಧರ್ಮೇಂದ್ರ ಗಣೇಶಪುರ ಹೇಳಿದ್ದಾರೆ.

ಗುರುವಾರ ದೇವಳದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಧಾರ್ಮಿಕ ಕಾರ್ಯಕ್ರಮಗಳ ಪೂರ್ವಭಾವಿಯಾಗಿ ಎ.18ರಂದು ಹಸಿರು ಹೊರೆಕಾಣಿಕೆ ವಾಹನ ಜಾಥಾ ಮೆರವಣಿಗೆ ನಡೆಯಲಿದೆ. ಇಡ್ಯಾ ಶ್ರೀ ಮಹಾಲಿಂಗೇಶ್ವ ದೇವಸ್ಥಾನದ ವಠಾರದಿಂದ ಸಂಜೆ 3:30ಕ್ಕೆ ಆರಂಭಗೊಳ್ಳಲಿರುವ ಹಸಿರು ಹೊರೆಕಾಣಿಕೆ ಮೆರವಣಿಗೆಗೆ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಳದ ಅನುವಂಶಿಕ ಮೊಕ್ತೇಸರರಾದ ವೇ.ಮೂ. ಐ. ರಮಾನಂದ ಅವರು ಚಾಲನೆ ನೀಡಲಿದ್ದಾರೆ. ಇಡ್ಯಾದಿಂದ ಚೊಕ್ಕಬೆಟ್ಟು ಮಾರ್ಗವಾಗಿ ಕೃಷ್ಣಾಪುರ 5ನೇ ಬ್ಲಾಕ್‌ ಯುವಕ ಮಂಡಳಕ್ಕೆ ತಲುಪಿ ಬಳಿಕ 4:30ಕ್ಕೆ ಅಲ್ಲಿಂದ ಭವ್ಯ ಶೋಭಾಯಾತ್ರೆಯ ಮೂಲಕ ಹೊರೆಕಾಣಿಕೆ ಶ್ರೀ ಕ್ಷೇತ್ರ ಗಣೇಶಪುರ ಮಹಾಗಣಪತಿ ದೇವಸ್ಥಾನಕ್ಕೆ ತಲುಪಲಿದೆ ಎಂದು ಮಾಹಿತಿ ನೀಡಿದರು.

ಎ.19ರಂದು ಜಾತ್ರಾ ಧ್ವಜಾರೋಹಣ ನಡೆಯಲಿದ್ದು, ಎ.21ರಂದು ಶ್ರೀದೇವರಿಗೆ ಸಹಸ್ರ ಕುಂಭ ಬ್ರಹ್ಮಕಲಾಭಿಷೇಕ ನಡೆಯಲಿದೆ. ಎ.22ರಂದು ದೇವಳಕ್ಕೆ ನೂತನ ಬ್ರಹ್ಮ ರಥ ಸಮರ್ಪಿಸಲಾಗುವುದು ಬಳಿಕ ಬ್ರಹ್ಮ ರಥೋತ್ಸವ ನಡೆಯಲಿದೆ. ಎ.24ರಂದು ಭಜನಾ ಸಂಬ್ರಮೋತ್ಸವ ನಡೆಯಲಿದ್ದು, ಎ.25ರಂದು ನಾಗಮಂಡಲೋತ್ಸವ ಮತ್ತು ಎ.26ರಂದು ಜಾರಂದಾಯ ದೈವದ ನೇಮೋತ್ಸವ ನಡೆಯಲಿದೆ. ಅಲ್ಲದೆ, ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಧರ್ಮೇಂದ್ರ ಗಣೇಶಪುರ, ಕಾರ್ಯ ನಿರ್ವಹಣಾಧಿ ಕಾರಿ ನವೀನ್ ಕುಮಾರ್, ವ್ಯವಸ್ಥಾಪನಾ ಸಮಿತಿ ಸದಸ್ಯರು, ಬ್ರಹ್ಮ ಕಲಶೋತ್ಸವ ಸಮಿತಿ ಮತ್ತು ನಾಗಮಂಡಲ ಸಮಿತಿಯ ಪದಾಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News