ಮಂಗಳೂರು: ಎ.19-20ರಂದು ʼಬ್ಯಾರೀಸ್ ಫೆಸ್ಟಿವಲ್-2025ʼ; ಸಕಲ ಸಿದ್ಧತೆ

ಸುಹೈಲ್ ಅಹ್ಮದ್ - ಜಿ.ಎ.ಬಾವ
ಮಂಗಳೂರು, ಎ.17: ಕರ್ನಾಟಕ ಬ್ಯಾರೀಸ್ ಸೋಶಿಯಲ್ ಆ್ಯಂಡ್ ಕಲ್ಚರಲ್ ಫೋರಂ ವತಿಯಿಂದ ಎ.19, 20ರಂದು ನಗರದ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯುವ ʼಬ್ಯಾರೀಸ್ ಫೆಸ್ಟಿವಲ್- 2025ʼಗೆ ಸಕಲ ಸಿದ್ಧತೆ ನಡೆದಿದೆ ಎಂದು ಫೆಸ್ಟಿವಲ್ ಸಮಿತಿಯ ಅಧ್ಯಕ್ಷ, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಜಿ.ಎ.ಬಾವ ಮತ್ತು ಬ್ಯಾರೀಸ್ ಫೆಸ್ಟಿವಲ್‌ನ ಪ್ರಾಯೋಜಕರಲ್ಲಿ ಓರ್ವರಾದ ಬೆಂಗಳೂರಿನ ಪ್ರೆಸಿಡೆನ್ಸಿ ಫೌಂಡೇಶನ್‌ನ ಉಪಾಧ್ಯಕ್ಷ ಸುಹೈಲ್ ಅಹ್ಮದ್ ತಿಳಿಸಿದ್ದಾರೆ.
ʼವಾರ್ತಾಭಾರತಿʼ ಜೊತೆ ಮಾತನಾಡಿದ ಜಿ.ಎ.ಬಾವ ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಮತ್ತು ರಾಜ್ಯ ಅಲೈಡ್ ಆ್ಯಂಡ್ ಹೆಲ್ತ್ ಕೇರ್ ಕೌನ್ಸಿಲ್‌ನ ಅಧ್ಯಕ್ಷ ಯು.ಟಿ. ಇಫ್ತಿಕಾರ್ ಅವರ ಮಾರ್ಗದರ್ಶನ ಮತ್ತು ವಿವಿಧ ಉದ್ಯಮ ಸಂಸ್ಥೆಗಳ ಸಹಕಾರದಲ್ಲಿ ಫೆಸ್ಟಿವಲ್ ನಡೆಯಲಿದೆ. ಫೆಸ್ಟಿವಲ್ ಅಂದ ತಕ್ಷಣ ಕೇವಲ ಸಾಂಸ್ಕೃತಿಕ ಕಾರ್ಯಕ್ರಮ ಎಂದು ಭಾವಿಸುವ ಅಗತ್ಯವಿಲ್ಲ. ಬ್ಯಾರಿ ಸಂಸ್ಕೃತಿಯ ಪ್ರದರ್ಶನದ ಜೊತೆಗೆ ಬಿಸಿನೆಸ್ ಮೀಟ್, ಜಾಬ್ ಮೇಳ, ಎಜುಕೇಶನ್ ಮೇಳವೂ ಇದೆ ಎಂದರು.
ಈ ಫೆಸ್ಟಿವಲ್ ಮಂಗಳೂರಿಗೆ ಮಾತ್ರ ಸೀಮಿತಗೊಳಿಸಲಾಗಿದೆ ಎಂಬ ಮಾತು ಇದೀಗ ಕೇಳಿ ಬರುತ್ತಿದೆ. ಪ್ರಜಾಪ್ರಭುತ್ವದಲ್ಲಿ ಟೀಕೆ- ಟಿಪ್ಪಣಿಗಳು ಸಹಜ. ತಪ್ಪುಗಳನ್ನು ಸರಿಪಡಿಸಿಕೊಂಡು ಹೋಗಲು ನಾವು ಬದ್ಧವಾಗಿದೆ. ಮುಂದಿನ ವರ್ಷಗಳಲ್ಲಿ ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಮೂಡುಬಿದಿರೆ, ಸುಳ್ಯ, ಉಳ್ಳಾಲ, ಮುಲ್ಕಿ, ಕಡಬ ತಾಲೂಕು ಕೇಂದ್ರಗಳಲ್ಲೂ ಕೂಡ ಜಿಲ್ಲಾ ಮಟ್ಟದ ಫೆಸ್ಟಿವಲ್ ಮಾಡುವ ಯೋಜನೆ ರೂಪಿಸಲಿದ್ದೇವೆ ಎಂದು ಜಿ.ಎ. ಬಾವ ಸ್ಪಷ್ಟಪಡಿಸಿದರು.
ದುಬೈ, ಬೆಂಗಳೂರಿನಲ್ಲೂ ಬ್ಯಾರಿ ಮೇಳ ನಡೆದಿದೆ. ಆದರೆ ಅದರ ಫಲಿತಾಂಶ ಏನು ಎಂಬುದು ಸಮುದಾಯ ನಿರೀಕ್ಷಿಸುತ್ತಿರುವುದು ಸುಳ್ಳಲ್ಲ. ಈ ನಿಟ್ಟಿನಲ್ಲೂ ನಾವು ಕಾರ್ಯಪ್ರವೃತ್ತರಾಗಲಿದ್ದೇವೆ. ಬ್ಯಾರೀಸ್ ಫೆಸ್ಟಿವಲ್‌ನಿಂದ ಸಮುದಾಯಕ್ಕೆ ಏನೇನು ಪ್ರಯೋಜನ ಆಗಿದೆ ಎಂಬುದರ ಬಗ್ಗೆಯೂ ಮಾಹಿತಿಯನ್ನೂ ನೀಡಲು ನಾವು ಬದ್ಧರಾಗಿದ್ದೇವೆ ಎಂದ ಜಿ.ಎ.ಬಾವ, ದೂರದಲ್ಲಿ ನಿಂತು ಫೆಸ್ಟಿವಲ್ ಬಗ್ಗೆ ಆರೋಪ ಮಾಡುವ ಬದಲು ಫೆಸ್ಟಿವಲ್‌ನಲ್ಲಿ ಸ್ವತಃ ಭಾಗಿಯಾಗಬೇಕು. ಲೋಪದೋಷಗಳನ್ನು ಮುಕ್ತವಾಗಿ ಹೇಳಬೇಕು. ಅದರಿಂದ ನಮ್ಮ ತಪ್ಪುಗಳನ್ನು ಸರಿಪಡಿಸಲು ಸಾಧ್ಯವಿದೆ. ಸಮಾಜದಲ್ಲಿ ಶಾಂತಿ-ಸೌಹಾರ್ದ ಮೂಡಿಸುವುದು, ಎಲ್ಲರೊಂದಿಗೆ ಅನ್ಯೋನ್ಯವಾಗಿ ಬಾಳುವಂತಹ ವಾತಾವರಣ ರೂಪುಗೊಳಿಸುವುದು ಕೂಡ ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.
ಕೋವಿಡ್ ಕಾಲದಲ್ಲಿ ಸ್ಥಾಪಿಸಲ್ಪಟ್ಟ ಕಮ್ಯುನಿಟಿ ಸೆಂಟರ್ ಇಂದು ಬ್ಯಾರಿಗಳ ಆಶಾಕಿರಣವಾಗಿ ಮಾರ್ಪಟ್ಟಿದೆ. ಸಾವಿರಾರು ಮಂದಿ ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಯಾವುದೇ ಯೋಜನೆಯ ಪ್ರತಿಫಲ ಕ್ಷಣಾರ್ಧದಲ್ಲಿ ಸಿಗದು. ಅದಕ್ಕೆ ಸತತ ಪರಿಶ್ರಮದ ಅಗತ್ಯವಿದೆ. ತಾಳ್ಮೆಯ ಶ್ರಮಕ್ಕೆ ಬೆಲೆ ಇದ್ದೇ ಇದೆ. ಈವತ್ತು ಕಮ್ಯುನಿಟಿ ಸೆಂಟರ್ ಬ್ಯಾರಿ ಸಮುದಾಯದಲ್ಲಿ ಹೊಸ ಪರಿವರ್ತನೆ ಸೃಷ್ಟಿಸಿದೆ. ಬದಲಾವಣೆಗೆ ನಾಂದಿ ಹಾಡಿದೆ ಎಂದು ಜಿ.ಎ.ಬಾವಾ ಅಭಿಪ್ರಾಯಪಟ್ಟರು.
ಬೆಂಗಳೂರಿನ ಪ್ರೆಸಿಡೆನ್ಸಿ ಫೌಂಡೇಶನ್‌ನ ಉಪಾಧ್ಯಕ್ಷ ಸುಹೈಲ್ ಅಹ್ಮದ್ ಮಾತನಾಡಿ ಮೀಫ್ ಸಂಘಟನೆಯ ಸಹಕಾರದಿಂದ ನಮಗೆ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಸೀಟು ಕೊಡಲು ಸಾಧ್ಯವಾ ಯಿತು. ಕೇವಲ ಶಿಕ್ಷಣ ನೀಡಿದರೆ ಸಾಲದು. ಪ್ರತಿಯೊಂದು ಮನೆಯ ಒಬ್ಬರಿಗಾದರೂ ಉದ್ಯೋಗ ದೊರಕಿಸಿಕೊಡಬೇಕು ಎಂಬುದು ನನ್ನ ತಂದೆ ಮತ್ತು ತಾಯಿಯ ಆಶಯವಾಗಿದೆ. ಅದರಂತೆ ನಾವು ಬೆಂಗಳೂರಿನಲ್ಲಿ ದೇಶ, ವಿದೇಶದ ನೂರಾರು ಕಂಪೆನಿಗಳ ಸಹಕಾರದಿಂದ ಉದ್ಯೋಗ ಮೇಳವನ್ನು ಯಶಸ್ವಿಯಾಗಿ ನಡೆಸಿದ್ದೇವೆ. ಅದನ್ನು ಇದೀಗ ಮಂಗಳೂರಿಗೆ ವಿಸ್ತರಿಸಿದ್ದೇವೆ ಎಂದರು.
ಈಗಾಗಲೆ ಸುಮಾರು 3 ಸಾವಿರ ಮಂದಿ ಉದ್ಯೋಗ ಮೇಳಕ್ಕೆ ಹೆಸರು ನೋಂದಾಯಿಸಿದ್ದಾರೆ. ಹಲವು ಪ್ರತಿಷ್ಠಿತ ಕಂಪೆನಿಗಳು ಭಾಗವಹಿಸಲಿವೆ. ಇದು ಕೇವಲ ಒಂದು ಅಥವಾ ಎರಡು ದಿನಕ್ಕೆ ಸೀಮಿತವಾದ ಉದ್ಯೋಗ ಮೇಳವಲ್ಲ. ಅರ್ಜಿ ಸಲ್ಲಿಸಿದ ಪ್ರತಿಯೊಬ್ಬರ ಡಾಟಾ ಸಂಗ್ರಹಿಸಲಿದ್ದೇವೆ ಮತ್ತು ಬಳಿಕವೂ ಅವರಿಗೆ ಉದ್ಯೋಗದ ಬಗ್ಗೆ ಅಪ್‌ಡೇಟ್ ನೀಡಲಿದ್ದೇವೆ. ಉದ್ಯೋಗ ಆಕಾಂಕ್ಷಿಗಳ ಜೊತೆಗೆ ನಿರಂತರ ಸಂಪರ್ಕ ಸಾಧಿಸಲಿದ್ದೇವೆ. ಎಲ್ಲರೂ ಪಾಲ್ಗೊಂಡರೆ ಇದಕ್ಕೆ ಖಂಡಿತಾ ಯಶಸ್ಸು ಸಿಗಲಿದೆ ಎಂದು ಸುಹೈಲ್ ಅಹ್ಮದ್ ವಿಶ್ವಾಸ ವ್ಯಕ್ತಪಡಿಸಿದರು.