ಉಪ್ಪಿನಂಗಡಿ| 2 ತಿಂಗಳಿಂದ ಆ್ಯಂಬುಲೆನ್ಸ್ ಸೌಲಭ್ಯ ಮರೀಚಿಕೆಯಾಗಿದೆ: ಸ್ಥಳೀಯರ ಆರೋಪ

Update: 2025-04-23 23:28 IST
ಉಪ್ಪಿನಂಗಡಿ| 2 ತಿಂಗಳಿಂದ ಆ್ಯಂಬುಲೆನ್ಸ್ ಸೌಲಭ್ಯ ಮರೀಚಿಕೆಯಾಗಿದೆ: ಸ್ಥಳೀಯರ ಆರೋಪ
  • whatsapp icon

ಉಪ್ಪಿನಂಗಡಿ: ಬಡ ರೋಗಿಗಳ ಪಾಲಿಗೆ ವರದಾನವಾಗಿದ್ದ, ಜನತೆಯ ಆರೋಗ್ಯ ಸಮಸ್ಯೆಗೆ ತುರ್ತು ಸ್ಪಂದನೆ ನೀಡುವ ಸಲುವಾಗಿ ಜಾರಿಯಲ್ಲಿರುವ ಉಚಿತ ಸೇವೆ ನೀಡುವ 108 ಆ್ಯಂಬುಲೆನ್ಸ್ ಸೌಲಭ್ಯ ಉಪ್ಪಿನಂಗಡಿಯಲ್ಲಿ ಸುಮಾರು 2 ತಿಂಗಳಿಂದ ಮರೀಚಿಕೆಯಾಗಿದ್ದು, ದುರಸ್ತಿಗೆಂದು ಗ್ಯಾರೇಜಿಗೆ ಸೇರಿದ್ದ ಈ ಆರೋಗ್ಯ ಕವಚವು ಇನ್ನೂ ರಿಪೇರಿಯಾಗಿ ಬಾರದಿರುವುದರಿಂದ ಆರೋಗ್ಯ ಸಂಬಂಧಿ ಸೇವೆಗಾಗಿ ಜನತೆ ಇದೀಗ ದುಬಾರಿ ಖಾಸಗಿ ಆ್ಯಂಬುಲೆನ್ಸ್‌ ಗಳನ್ನು ಬಳಸಬೇಕಾಗಿದೆ ಎಂಬ ದೂರುಗಳು ಕೇಳಿ ಬರುತ್ತಿವೆ.

ರಾಷ್ಟ್ರೀಯ ಹೆದ್ದಾರಿಯನ್ನು ಹೊಂದಿರುವ ಹಾಗೂ ನಾಲ್ಕು ತಾಲೂಕುಗಳ ಗಡಿ ಗ್ರಾಮಗಳನ್ನು ಹೊಂದಿ ರುವ ಉಪ್ಪಿನಂಗಡಿಯ ಪರಿಸರದಲ್ಲಿ ಸಂಭವಿಸಬಹುದಾದ ಅಪಘಾತಗಳ ಸಮಯದಲ್ಲಾಗಲಿ, ಇನ್ನಿತರ ಆರೋಗ್ಯ ಸಂಬಂಧಿ ಸಮಸ್ಯೆಗಳ ಸಮಯದಲ್ಲಾಗಲಿ 108 ಆ್ಯಂಬುಲೆನ್ಸ್ ಸೇವೆ ಜನತೆಗೆ ಉಪಯುಕ್ತ ವಾಗಿ ಲಭಿಸುತ್ತಿತ್ತು. ಘಟನಾ ಸ್ಥಳದಿಂದ ಆಸ್ಪತ್ರೆ ತಲುಪುವ ವರೆಗಿನ ಸೂಕ್ಷ್ಮ ಸಮಯದಲ್ಲಿ ಆ್ಯಂಬುಲೆನ್ಸ್‌ ನಲ್ಲಿಯೇ ತಜ್ಞ ಸಿಬ್ಬಂದಿಗಳಿಂದ ತುರ್ತು ಪ್ರಾಥಮಿಕ ಚಿಕಿತ್ಸೆ ಒದಗಿಸಲಾಗುವ ಕಾರಣಕ್ಕೆ ಈ ಸೇವೆ ಅಕ್ಷರಷಃ ಆರೋಗ್ಯ ರಕ್ಷಕವಾಗಿಯೇ ಕಾರ್ಯನಿರ್ವಹಿಸುತ್ತಿತ್ತು. ಇದರ ಪರಿಣಾಮ ಬಹಳಷ್ಟು ಜೀವರಕ್ಷಣೆಯ ಕಾರ್ಯ, ಹೆರಿಗೆಗಳೂ ನಡೆದಿವೆ.

ಆದರೆ ಕಳೆದ 2 ತಿಂಗಳಿಂದ ದುರಸ್ತಿಯ ಕಾರಣಕ್ಕೆ ಹೋದ ಆ್ಯಂಬುಲೆನ್ಸ್ ಹಿಂದಿರುಗಿ ಬಾರದ ಕಾರಣ ದಿಂದ 108 ಆ್ಯಂಬುಲೆನ್ಸ್ ಸೇವೆಗೆ ಲಭಿಸುತ್ತಿಲ್ಲ. ಇದರಿಂದಾಗಿ ಸ್ಥಳೀಯ ಖಾಸಗಿ ಆ್ಯಂಬುಲೆನ್ಸ್‌ ಗಳನ್ನು ಹಣ ತೆತ್ತು ಅವಲಂಭಿಸಬೇಕಾಗಿ ಬಂದಿದೆ. ಆದರೆ ಇದರಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡುವ ತಜ್ಞರಿಲ್ಲದ ಕಾರಣ ಇದು ರೋಗಿಯನ್ನು ಸಾಗಿಸಲು ಮಾತ್ರ ಬಳಕೆಯಾಗುತ್ತಿದೆ. ಮಾತ್ರವಲ್ಲದೆ ಇದು ಬಡ ರೋಗಿ ಗಳ ಪಾಲಿಗೆ ದುಬಾರಿಯೆನಿಸಿದೆ.

ದುರಸ್ತಿಯಾಗಲು ಇನ್ನೂ 20 ದಿನಗಳು ಬೇಕಾಗಬಹುದು: ಜಿಲ್ಲಾ ವ್ಯವಸ್ಥಾಪಕ

ಈ ಬಗ್ಗೆ ಪ್ರತಿಕ್ರಿಯಿಸಿರುವ ಆರೋಗ್ಯ ಕವಚ ವಿಭಾಗದ ಜಿಲ್ಲಾ ವ್ಯವಸ್ಥಾಪಕ ಗುರುರಾಜ್ ನಾಯಕ್, ಎಂಜಿನ್ ಸಮಸ್ಯೆಯ ಕಾರಣಕ್ಕೆ ತಿಂಗಳ ಹಿಂದೆ ರಿಪೇರಿಗೆಂದು ಹೋಗಿರುವ 108 ವಾಹನವು ಮತ್ತೆ ಸೇವೆಗೆ ಲಭಿಸಿಲ್ಲ ಎನ್ನುವುದು ವಿಚಾರಿಸಿದಾಗ ದೃಢಪಟ್ಟಿದೆ. ಎಂಜಿನ್ ಸಮಸ್ಯೆಯನ್ನು ಬಗೆಹರಿಸಲು ಇನ್ನೂ 20 ದಿನಗಳು ಬೇಕಾಗಬಹುದೆಂದು ತಿಳಿಸಿದ್ದಾರೆ. ಈ ಕಾರಣಕ್ಕೆ ಉಪ್ಪಿನಂಗಡಿಯಲ್ಲಿ ಮುಂದಿನ 20 ದಿನಗಳ ಬಳಿಕ ಆರೋಗ್ಯ ಕವಚ ಸೇವೆಯನ್ನು ಪುನರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ.

ಸೇವೆ ನಿರಾಕರಿಸಿರುವುದು ಸರಿಯಲ್ಲ: ಪ್ರಭು

ಸುಮಾರು 2 ತಿಂಗಳಿಂದ ಆರೋಗ್ಯ ಕವಚ ಸೇವೆ ಲಭ್ಯವಿಲ್ಲದಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬರತೊಡಗಿತ್ತು. ಈ ಬಗ್ಗೆ ವಿಚಾರಿಸಿದಾಗ ದೂರಿನಲ್ಲಿ ಸತ್ಯಾಂಶ ಕಂಡು ಬಂದಿದೆ. ವಾಹನವೊಂದರ ಎಂಜಿನ್ ದುರಸ್ತಿಗೆ ತಿಂಗಳಾನುಗಟ್ಟಲೆ ಸಮಯವನ್ನು ಪಡೆಯುವುದು ಇವತ್ತಿನ ದಿನದಲ್ಲಿ ವ್ಯವಸ್ಥೆಗೆ ಶೋಭೆಯಲ್ಲ. ಬಡ ಜನತೆಗೆ ಅನುಕೂಲವಾಗುವ ಸಲುವಾಗಿ ಉಚಿತ ಸೌಲಭ್ಯವನ್ನು ಕಲ್ಪಿಸಿದಾಗ ರಿಪೇರಿ ಕಾರಣವನ್ನು ಮುಂದೊಡ್ಡಿ ಸೇವೆ ನಿರಾಕರಿಸುವುದು ಸರಿಯಲ್ಲ. ವ್ಯವಸ್ಥೆಯ ಬಗ್ಗೆ ವಿಶ್ವಾಸಾರ್ಹತೆಯನ್ನು ಉಳಿಸುವ ಸಲುವಾಗಿ ಆದ್ಯತೆಯ ಮೇರೆಗೆ ತ್ವರಿತ ರಿಪೇರಿ ಮಾಡಿ ಆ್ಯಂಬುಲೆನ್ಸ್ ವಾಹನವನ್ನು ಸೇವೆಗೆ ಒದಗಿಸಬೇಕು. ಇಲ್ಲವಾದರೆ ಬದಲಿ ಆ್ಯಂಬುಲೆನ್ಸ್‌ ನ ವ್ಯವಸ್ಥೆ ಕಲ್ಪಿಸಬೇಕೆಂದು ಉಪ್ಪಿನಂಗಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು ಒತ್ತಾಯಿಸಿದ್ದಾರೆ.

ಉಚಿತ ಸೇವೆಯನ್ನು ಕಿತ್ತುಕೊಳ್ಳುವ ಹುನ್ನಾರ : ರಾಮಚಂದ್ರ ಮಣಿಯಾಣಿ

ಜನರ ಪ್ರಾಣ ಮತ್ತು ಆರೋಗ್ಯ ರಕ್ಷಣೆಗೆ ಪೂರಕವಾಗಿ ಸರಕಾರ ತಂದಿರುವ ಉಚಿತ 108 ಆ್ಯಂಬುಲೆನ್ಸ್ ಸೇವೆಯನ್ನು ರಿಪೇರಿ ಕಾರಣಕ್ಕೆ ಸ್ಥಗಿತಗೊಳಿಸಿರುವುದು ಸರಕಾರದ ವೈಫಲ್ಯತೆಗೆ ಸಾಕ್ಷಿ. ಖಾಸಗಿಯವರ ವಾಹನ ಕೆಟ್ಟರೆ ಒಂದೇ ದಿನದಲ್ಲಿ ದುರಸ್ತಿಯಾಗುವ ಈ ದಿನದಲ್ಲಿ ಸರಕಾರದ ವಾಹನ ಕೆಟ್ಟರೆ ತಿಂಗಳು ಗಟ್ಟಲೆ ಸಮಯ ಯಾಕೆ ಬೇಕೆನ್ನುವುದು ಅರ್ಥವಾಗದ ವಿಚಾರ . ಆರೋಗ್ಯ ಕವಚ ಇಲ್ಲದೇ ಇದ್ದಲ್ಲಿ ಜನತೆ ಅನಿವಾರ್ಯವಾಗಿ ಖಾಸಗಿ ಅಂಬುಲೆನ್ಸ್ ಅನ್ನು ಹಣ ತೆತ್ತು ಬಳಸಬೇಕಾಗುವುದರಿಂದ ಇದೊಂದು ಜನತೆ ಯನ್ನು ಸುಲಿಯುವ ಕಾರ್ಯತಂತ್ರದ ಹುನ್ನಾರವಾಗಿದೆ . ವಾಹನ ದುರಸ್ತಿಯಾಗದಿದ್ದರೆ, ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸರಕಾರ ಮುಂದಾಗಬೇಕು ಎಂದು ಉದ್ಯಮಿ ರಾಮಚಂದ್ರ ಮಣಿಯಾಣಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News