ಎ. 20ರಂದು ನವೀನ್ ಸೂರಿಂಜೆಯವರ ‘ಸತ್ಯೊಲು- ಶ್ರಮಿಕರ ಜನಪದ ಐತಿಹ್ಯ’ ಕೃತಿ ಬಿಡುಗಡೆ

ಮಂಗಳೂರು, ಎ.16: ಅಹರ್ನಿಸಿ ಪ್ರಕಾಶನ ಪ್ರಕಟಿಸಿರುವ, ಪತ್ರಕರ್ತ ನವೀನ್ ಸೂರಿಂಜೆಯವರ ‘ಸತ್ಯೊಲು- ಶ್ರಮಿಕರ ಜನಪದ ಐತಿಹ್ಯ’ ಪುಸ್ತಕ ಬಿಡುಗಡೆ ಎ. 20ರಂದು ನಗರದ ಸಹೋದಯ ಸಭಾಂಗಣದಲ್ಲಿ ನಡೆಯಲಿದೆ.
ಸಂಜೆ 3ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಕೃತಿ ಬಿಡುಗಡೆಗೊಳಿಸಲಿದ್ದು, ಪುಸ್ತಕದ ಕುರಿತು ಜನಪದ ಸಂಶೋಧಕ ಡಾ. ಗಣನಾಥ ಎಕ್ಕಾರು ಮಾತನಾಡಲಿದ್ದಾರೆ.
ಅಧ್ಯಕ್ಷತೆಯನ್ನು ಡಿಎಸ್‌ಎಸ್ (ಪ್ರೊ.ಕೃಷ್ಣಪ್ಪ ಬಣ) ಜಿಲ್ಲಾ ಸಂಚಾಲಕ ಕೃಷ್ಣಾನಂದ ಡಿ. ವಹಿಸಲಿದ್ದಾರೆ. ಬಹುಜನ ಚಿಂತಕಿ ಅತ್ರಾಡಿ ಅಮೃತ ಶೆಟ್ಟಿ ದಿಕ್ಸೂಚಿ ಮಾತುಗಳನ್ನಾಡಲಿದ್ದು, ಅಹರ್ನಿಶಿ ಪ್ರಕಾಶನದ ಅಕ್ಷತಾ ಹುಂಚದಕಟ್ಟೆ ಉಪಸ್ಥಿತರಿರುವರು. ಪತ್ರಕರ್ತ ಇರ್ಷಾದ್ ಉಪ್ಪಿನಂಗಡಿ ಪ್ರಾಸ್ತಾವಿಕ ನುಡಿಗಳನ್ನಾಡುವರು.
ಕರ್ನಾಟಕದ ಕರಾವಳಿಯಲ್ಲಿ ಆರಾಧಿಸಲ್ಪಡುವ ದೈವಗಳನ್ನು ‘ಸತ್ಯೊಲು’ ಎಂದು ಕರೆಯುತ್ತಾರೆ. ತುಳುನಾಡಿನ ಪಾಡ್ದನ, ಬೀರ, ಐತಿಹ್ಯ, ಇತಿಹಾಸವನ್ನು ಅಧ್ಯಯನ ಮಾಡಿದರೆ ಸತ್ಯೊಲು ಎನ್ನುವುದು ದೈವ- ದೇವರು ಅಲ್ಲ. ಅವರೆಲ್ಲರೂ ಶೋಷಣೆ, ಅಸಮಾನತೆಯ ವಿರುದ್ಧ ಹೋರಾಡಿದ ನಮ್ಮ ಶ್ರಮಿಕ ಪೂರ್ವಿಕರು ಎಂದು ಅರಿವಾಗುತ್ತದೆ. ಹಾಗಾಗಿಯೇ ಹಲವು ವರ್ಷಗಳ ಕ್ಷೇತ್ರ ಕಾರ್ಯ, ಪಾಡ್ದನ, ಬೀರ, ಸಂಶೋಧನಾ ಕೃತಿಗಳ ಅಧ್ಯಯನದ ಮೂಲಕ ಸತ್ಯೊಲು ಶ್ರಮಿಕರ ಜನಪದ ಐತಿಹ್ಯ ಪುಸ್ತಕವನ್ನು ಸಿದ್ಧಗೊಳಿಸಲಾಗಿದ್ದು, ಅಹರ್ನಿಶಿ ಪ್ರಕಾಶನ ಪ್ರಕಟಿಸುತ್ತಿದೆ. ಧರ್ಮ ಧರ್ಮಗಳ ನಡುವಿನ ದ್ವೇಷದ ಗೋಡೆಗಳನ್ನು ಕೆಡವಲು ಯತ್ನಿಸುವ, ಹತ್ತು ತಾಯ ಮಕ್ಕಳನ್ನು ಒಂದೇ ಮಡಿಲಲ್ಲಿ ಹಾಕಿ ಪೊರವ ಶಕ್ತಿಗಳ ಬಗೆಗಿನ ಪುಸ್ತಕ ಬಿಡುಗಡೆ ಸಮಾರಂಭ ಇದಾಗಿರುತ್ತದೆ ಎಂದು ನವೀನ್ ಸೂರಿಂಜೆಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.