ಮಂಗಳೂರು ಹಜ್ ಭವನಕ್ಕೆ 8 ಕೋ.ರೂ. ಮೌಲ್ಯದ ಜಮೀನು ದಾನ ಮಾಡಿದ ಇನಾಯತ್ ಅಲಿ

ಸುರತ್ಕಲ್, ಎ.10: ‘ಮಂಗಳೂರು ಹಜ್ ಭವನ’ ನಿರ್ಮಾಣಕ್ಕಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಸುಮಾರು 8 ಕೋಟಿ ರೂ. ಮೌಲ್ಯದ 1.80 ಎಕರೆ ಭೂಮಿ ದಾನ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಹಜ್ ಭವನ ನಿರ್ಮಾಣಕ್ಕಾಗಿ ಸರಕಾರ 10 ಕೋಟಿ ರೂ. ಬಿಡುಗಡೆ ಮಾಡಿ ಕಾಯ್ದಿರಿಸಿತ್ತು. ಆದರೆ ಸೂಕ್ತ ನಿವೇಶನ ಸಿಗದಿದ್ದ ಕಾರಣ ಹಜ್ ಭವನ ನಿರ್ಮಾಣ ಕಾರ್ಯ ನನೆಗುದಿಗೆ ಬಿದ್ದಿತ್ತು. ಈ ಹಿನ್ನೆಲೆಯಲ್ಲಿ ಇನಾಯತ್ ಅಲಿ ಹಾಗೂ ಅವರ ಕುಟುಂಬ ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಸುಮಾರು 1.80 ಎಕರೆ ಜಾಗವನ್ನು ಹಜ್ ಸಮಿತಿಗೆ ಹಸ್ತಾಂತರ ಮಾಡುವ ಮೂಲಕ ಮಾದರಿಯಾಗಿದ್ದಾರೆ.
ಹಜ್ ಭವನ ನಿರ್ಮಾಣಕ್ಕಾಗಿ ಇನಾಯತ್ ಅಲಿ ಕುಟುಂಬ ತಿಂಗಳ ಹಿಂದೆಯೇ ಹಜ್ ಸಮಿತಿಯನ್ನು ಸಮೀಪಿಸಿ ನಿವೇಶನದ ದಾಖಲೆ ಪತ್ರಗಳನ್ನು ಪರಿಶೀಲಿಸಿತ್ತು. ಆ ಬಳಿಕ ಕರ್ನಾಟಕ ರಾಜ್ಯ ಹಜ್ ಕಮಿಟಿಯ ಅಧ್ಯಕ್ಷ ಝುಲ್ಫಿಕರ್ ಅಹ್ಮದ್ ಟಿಪ್ಪುಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಹರ್ಷ ವ್ಯಕ್ತಪಡಿಸಿದ್ದಲ್ಲದೆ, ಇನಾಯತ್ ಅಲಿ ಕುಟುಂಬಕ್ಕೆ ಧನ್ಯವಾದಗಳನ್ನೂ ಅರ್ಪಿಸಿದ್ದರು.
ಬುಧವಾರ ಯೆನೆಪೊಯ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಯೆನೆಪೊಯ ಅಬ್ದುಲ್ಲಾ ಕುಂಞಿಯವರ ನಿವಾಸದಲ್ಲಿ ನಡೆದ ಸರಳ ಸಮಾರಂಭದಲ್ಲಿ ಇನಾಯತ್ ಅಲಿ ಕುಟುಂಬ ಮತ್ತು ರಾಜ್ಯ ಹಜ್ ಕಮಿಟಿಯ ಮುಖಂಡರು, ಅಧಿಕಾರಿಗಳು ಹಾಗೂ ಧಾರ್ಮಿಕ ಧರ್ಮಗುರುಗಳ ಸಮ್ಮುಖದಲ್ಲಿ ಹಜ್ ಭವನಕ್ಕಾಗಿ ದಾನರೂಪದಲ್ಲಿ ನೀಡುತ್ತಿರುವ ಜಾಗದ ದಾಖಲೆ ಪತ್ರಗಳಿಗೆ ಸಹಿ ಹಾಕಿ ಹಸ್ತಾಂತರಿಸಿದರು.
ಈ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಹಜ್ ಸಮಿತಿಯ ಅಧ್ಯಕ್ಷ ಝುಲ್ಫಿಕರ್ ಅಹ್ಮದ್ ಟಿಪ್ಪು, ರಾಜ್ಯ ಹಜ್ ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಸರ್ಫರಾಝ್ ಖಾನ್, ಯೆನೆಪೊಯ ವಿವಿ ಕುಲಪತಿ ಡಾ.ಯೆನೆಪೊಯ ಅಬ್ದುಲ್ಲಾ ಕುಂಞಿ, ರಾಜ್ಯ ಅಲೈಡ್ ಆಂಡ್ ಹೆಲ್ತ್ ಕೇರ್ ಕೌನ್ಸಿಲ್ ಅಧ್ಯಕ್ಷ ಡಾ.ಯು.ಟಿ. ಇಫ್ತಿಕಾರ್ ಫರೀದ್, ಉದ್ಯಮಿಗಳಾದ ರಿಯಾಝ್ ಬಾವ, ಎಸ್‌ಎಂ.ರಶೀದ್ ಹಾಜಿ, ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ.ಬಾವ, ಅಹ್ಮದ್ ಬಾವ, ಬಿ.ಎಸ್.ಬಶೀರ್, ರಾಜ್ಯ ಹಜ್ ಸಮಿತಿಯ ಸದಸ್ಯ ಸೈಯದ್ ಮುಜಾಹಿದ್, ನ್ಯಾಯವಾದಿ ಅಬ್ದುಲ್ ಅಝೀಝ್, ದ.ಕ. ವಕ್ಫ್ ಜಿಲ್ಲಾ ಸಲಹಾ ಸಮಿತಿಯ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ದ.ಕ. ಜಿಲ್ಲಾ ಹಜ್ ಕಮಿಟಿಯ ಸದಸ್ಯರಾದ ಸೈಯದ್ ಅಶ್ರಫ್ ತಂಙಳ್, ಇನಾಯತ್ ಅಲಿಯವರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

ಎ.24ರಂದು ಹಜ್ ಭವನಕ್ಕೆ ಶಂಕುಸ್ಥಾಪನೆ
ಮಂಗಳೂರು ಹಜ್ ಭವನ ನಿರ್ಮಾಣಕ್ಕಾಗಿ ಸರಕಾರ 10 ಕೋಟಿ ರೂ. ಬಿಡುಗಡೆ ಮಾಡಿ ಕಾಯ್ದಿರಿಸಿತ್ತು. ಆದರೆ ಸೂಕ್ತ ನಿವೇಶನ ದೊರೆತಿರದ ಕಾರಣವಾಗಿ ಹಜ್ ಭವನ ಕನಸಾಗಿ ಮಾತ್ರ ಉಳಿದಿತ್ತು. ಆದರೆ, ಬುಧವಾರ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಮತ್ತು ಅವರ ಕುಟುಂಬ 1.80 ಎಕರೆ ನಿವೇಶನವನ್ನು ಹಜ್ ಭವನ ನಿರ್ಮಾಣಕ್ಕಾಗಿ ದಾನರೂಪದಲ್ಲಿ ಹಜ್ ಕಮಿಟಿಗೆ ಹಸ್ತಾಂತರಿಸಿದೆ.
ಈ ಹಿನ್ನೆಲೆಯಲ್ಲಿ ಎ.24ರಂದು ಕರಾವಳಿಗರ ಬಹುದಿನಗಳ ಕನಸಾಗಿರುವ ಹಜ್ ಭವನಕ್ಕೆ ಶಂಕು ಸ್ಥಾಪನೆ ನೆರವವೇರಿಸಲಾಗುವುದು ಎಂದು ಕರ್ನಾಟಕ ರಾಜ್ಯ ಹಜ್ ಸಮಿತಿಯ ಅಧ್ಯಕ್ಷ ಝುಲ್ಫಿಕರ್ ಅಹ್ಮದ್ ಟಿಪ್ಪು ಮಾಹಿತಿ ನೀಡಿದ್ದಾರೆ.
ಮಂಗಳೂರು ಹಜ್ ಭವನದಲ್ಲಿ ಏನೇನಿರಲಿದೆ ?
ನೂತನ ಮಂಗಳೂರು ಹಜ್ ಭವನ ಎರಡು ಅಂತಸ್ತುಗಳಲ್ಲಿ ನಿರ್ಮಾಣವಾಗಲಿದ್ದು, ಒಂದೇ ಬಾರಿಗೆ ಸುಮಾರು 200-250 ಮಂದಿ ಹಜ್ ಯಾತ್ರಾರ್ಥಿಗಳು ತಂಗಬಹುದಾಗಿದೆ. ಸುಮಾರು 20 ಕೋ.ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಬಹುನಿರೀಕ್ಷಿತ ಹಜ್ ಭವನವು 2026ರ ಜನವರಿಯ ವೇಳೆಗೆ ಲೋಕಾರ್ಪಣೆಗೊಳ್ಳುವ ಸಾಧ್ಯತೆ ಇದೆ ಎಂದು ಹಜ್ ಕಮಿಟಿಯ ಮೂಲಗಳು ಮಾಹಿತಿ ನೀಡಿವೆ.
"ಮುಂದಿನ ವರ್ಷದ ಒಳಗಾಗಿ ಮಂಗಳೂರು ಹಜ್ ಭವನವನ್ನು ನಿರ್ಮಿಸಿ ಲೋಕಾರ್ಪಣೆಗೊಳಿಸುವ ಉದ್ದೇಶ ಇದೆ. ಈ ಹಜ್ ಭವನ ನಿರ್ಮಾಣದಿಂದ ದ.ಕ. ಜಿಲ್ಲೆಯ ಜೊತೆಗೆ ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ಕೊಡಗು ಜಿಲ್ಲೆಯ ಹಜ್ ಯಾತ್ರಿಗಳಿಗೆ ಇದು ಸಹಕಾರಿಯಾಗಲಿದೆ. ರಾಜ್ಯ ಸರಕಾರದ ಅನುದಾನ ಮತ್ತು ಸಮುದಾಯದ ದಾನಿಗಳ ನೆರವಿನಿಂದ ಈ ಭವನ ನಿರ್ಮಾಣಗೊಳ್ಳಲಿದೆ".
- ಝುಲ್ಫಿಕರ್ ಅಹ್ಮದ್ ಟಿಪ್ಪು, ಅಧ್ಯಕ್ಷರು, ಕರ್ನಾಟಕ ರಾಜ್ಯ ಹಜ್ ಸಮಿತಿ
