ಪ್ರತಿ ಟನ್‌ಗೆ 150 ರೂ. ಬಾಡಿಗೆ ಏರಿಕೆ ಭರವಸೆ: ಮುಷ್ಕರ ಹಿಂತೆಗೆದ ಟ್ರಕ್ ಓನರ್ಸ್ ಅಸೋಸಿಯೇಶನ್
ಮಂಗಳೂರು, ಸೆ.29:ಕಲ್ಲಿದ್ದಲು ಬಾಡಿಗೆ ದರ ಹೆಚ್ಚಿಸಬೇಕೆಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಲಾರಿ ಯೂನಿಯನ್ ನಡೆಸುತ್ತಿದ್ದ ಮುಷ್ಕರವನ್ನು ಹಿಂತೆಗೆದುಕೊಳ್ಳಲಾಗಿದೆ.
ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಯ ಕಚೇರಿಯಲ್ಲಿ ಲಾರಿ ಯೂನಿಯನ್ ಹಾಗೂ ಟ್ರಾನ್ಸ್‌ಪೋರ್ಟರ್ಸ್ ಮಧ್ಯೆ ಶುಕ್ರವಾರ ಏರ್ಪಟ್ಟ ಸಂಧಾನ ಸಭೆಯಲ್ಲಿ ಈ ನಿರ್ದಾರ ಕೈಗೊಳ್ಳಲಾಯಿತು.
ಈ ಸಂದರ್ಭ ಮಾತನಾಡಿದ ದ.ಕ. ಟ್ರಕ್ ಓನರ್ಸ್ ಅಸೋಸಿಯೇಶನ್ (ರಿ)ನ ಅಧ್ಯಕ್ಷ ಸುಶಾಂತ್ ಶೆಟ್ಟಿ ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ದರ ಏರಿಕೆಯ ಬಗ್ಗೆ ಬೇಡಿಕೆಗಳಿದ್ದರೂ ಲಾರಿ ಮಾಲಕರಿಗೆ ನ್ಯಾಯ ದೊರಕಿರಲಿಲ್ಲ. ಮುಷ್ಕರ ಘೋಷಿಸುವ ಸಂದರ್ಭ ತಲಾ 100 ರೂ. ಹೆಚ್ಚಿಸುವ ಭರವಸೆಯನ್ನು ಟ್ರಾನ್ಸ್‌ಪೋರ್ಟರ್ಸ್ ನೀಡಿದ್ದರು. ಶುಕ್ರವಾರ ಬೆಳಗ್ಗೆ ಡಿಸಿ ಸಮ್ಮುಖ ನಡೆದ ಸಂಧಾನ ಸಭೆಯಲ್ಲಿ 150 ರೂ. ಏರಿಸಲು ಸೂಚಿಸಿದ್ದಾರೆ. ಅದರಂತೆ 3 ದಿನದೊಳಗೆ ಬಾಡಿಗೆ ಏರಿಸುವ ಭರವಸೆ ಸಿಕ್ಕಿದೆ. ಹಾಗಾಗಿ ಮುಷ್ಕರ ಕೈ ಬಿಟ್ಟಿದ್ದೇವೆ ಎಂದರು.
ಕೊಪ್ಪಳ ಭಾಗಕ್ಕೆ ಪ್ರತಿ ಟನ್‌ಗೆ ಕನಿಷ್ಠ ಸಾಗಾಟ ಬಾಡಿಗೆಯು 1,050 ರೂ. ಹಾಗೂ ಬಳ್ಳಾರಿ ಕಡೆಗೆ 1,100 ರೂ. ಆಗಿದ್ದು, ಈ ಬಾಡಿಗೆಗೆ ಇದೀಗ ತಲಾ 150 ರೂ. ಏರಿಸಲಾಗುತ್ತದೆ. ಇದರಿಂದ ಲಾರಿ ಮಾಲಕರಿಗೆ ನ್ಯಾಯ ದೊರಕಿಸಿದಂತಾಗುತ್ತದೆ ಎಂದರು.
ಸಭೆಯಲ್ಲಿ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್, ಜಿಲ್ಲಾ ಎಸ್ಪಿ ಋಷ್ಯಂತ್ ಮತ್ತಿತರರು ಪಾಲ್ಗೊಂಡಿದ್ದರು.