ಎ.18: ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ಅಡ್ಯಾರ್ ಕಣ್ಣೂರು ಪ್ರತಿಭಟನಾ ಸಮಾವೇಶಕ್ಕೆ ಸಿದ್ಧತೆ ಪೂರ್ಣ

Update: 2025-04-16 20:17 IST
ಎ.18: ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ಅಡ್ಯಾರ್ ಕಣ್ಣೂರು ಪ್ರತಿಭಟನಾ ಸಮಾವೇಶಕ್ಕೆ ಸಿದ್ಧತೆ ಪೂರ್ಣ
  • whatsapp icon

ಮಂಗಳೂರು: ಕೇಂದ್ರ ಸರಕಾರದ ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ಕರ್ನಾಟಕ ಉಲಮಾ ಒಕ್ಕೂಟದ ನೇತೃತ್ವದಲ್ಲಿ ಅಡ್ಯಾರ್ ಕಣ್ಣೂರಿನ ಶಾ ಗಾರ್ಡನ್‌ನಲ್ಲಿ ಎ.18ರಂದು ನಡೆಯಲಿರುವ ಪ್ರತಿಭಟನಾ ಸಮಾವೇಶದ ಸಿದ್ಧತೆ ಬಹುತೇಕ ಪೂರ್ಣಗೊಂಡಿವೆ.

ದ.ಕ. ಮತ್ತು ಉಡುಪಿ ಜಿಲ್ಲಾ ಖಾಝಿಗಳ ನೇತೃತ್ವದಲ್ಲಿ ನಡೆಯುವ ಪ್ರತಿಭಟನಾ ಸಮಾವೇಶಕ್ಕೆ ಸಂಬಂಧಿಸಿದಂತೆ ಉಲಮಾ- ಉಮರಾಗಳು ಈಗಾಗಲೆ ಪೂರ್ವಬಾವಿ ಸಿದ್ಧತೆ ನಡೆಸಿದ್ದಾರೆ. ದ.ಕ. ಜಿಲ್ಲೆಯಲ್ಲದೆ ಉಡುಪಿ, ಕೊಡಗು, ಚಿಕ್ಕಮಗಳೂರು ಜಿಲ್ಲೆಯ ಜನರು ಈ ಸಮಾವೇಶದಲ್ಲಿ ಭಾಗಿಯಾಗ ಲಿದ್ದು, ಸುಮಾರು ಎರಡು ಸಾವಿರ ಸ್ವಯಂ ಸೇವಕರು ಕಾರ್ಯನಿರ್ವಹಿಸಲಿದ್ದಾರೆ. ಅಪರಾಹ್ನ 3 ಗಂಟೆಗೆ ಕಣ್ಣೂರು ದರ್ಗಾ ಝಿಯಾರತ್ ನಡೆಯಲಿದೆ. ಸಂಜೆ 4ಕ್ಕೆ ಸಭಾ ಕಾರ್ಯಕ್ರಮ ಆರಂಭಗೊಳ್ಳಲಿದ್ದು, 6:30ಕ್ಕೆ ಕಾರ್ಯಕ್ರಮ ಮುಗಿಯಲಿದೆ ಎಂದು ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಬುಧವಾರ ಶಾ ಗಾರ್ಡನ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈಗಾಗಲೆ ಕೇಂದ್ರದ ವಕ್ಫ್ ತಿದ್ದುಪಡಿ ಮಸೂದೆಯ ಮೂರು ಸೆಕ್ಷನ್‌ಗಳಿಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ ಎಂದ ನಾಸಿರ್ ಲಕ್ಕಿಸ್ಟಾರ್, ವಕ್ಫ್ ತಿದ್ದುಪಡಿ ವಿರುದ್ಧದ ಹೋರಾಟಕ್ಕೆ ಉಲಮಾಗಳು ನಾಯಕತ್ವ ನೀಡಿರುವುದು ಮುಸ್ಲಿಂ ಸಮುದಾಯಕ್ಕೆ ಬಲ ತುಂಬಿದಂತಾಗಿದೆ. ಈ ಕಾರ್ಯಕ್ರಮದಲ್ಲಿ ಅಧಿಕ ಸಂಖ್ಯೆಯಲ್ಲಿ ಭಾಗಿಯಾಗುವುದು ನಮ್ಮ ಕರ್ತವ್ಯ ಎಂದು ಭಾವಿಸಿದ್ದಾರೆ. ಈಗಾಗಲೆ ನಾನಾ ಕಡೆ ಬೃಹತ್ ಮಟ್ಟದ ಪ್ರಚಾರ ನಡೆದಿದೆ. ಉದ್ಯಮಿಗಳು ಕೂಡ ಉದ್ಯಮ ಸ್ಥಗಿತಗೊಳಿಸಿ ಭಾಗವಹಿಸಲಿದ್ದಾರೆ. ಪೊಲೀಸ್ ಇಲಾಖೆಯು ಸ್ಥಳ ಪರಿಶೀಲನೆ ನಡೆಸಿದೆ. ಮುಖಂಡರ ಜೊತೆ ಎರಡು ಸುತ್ತಿನ ಸಭೆ ನಡೆಸಿ ದ್ದಾರೆ. ಬೈಕ್ ರ್ಯಾಲಿ, ಯಾವುದೇ ಸಂಘಟನೆಯ ಅಥವಾ ಹಸಿರು ಬಾವುಟ, ಘೋಷಣೆಗಳಿಗೆ ನಿಷೇಧವಿದೆ. ಪ್ರಚೋದನಕಾರಿ ಭಾಷಣಗಳಿಗೆ ಅವಕಾಶವೂ ಇಲ್ಲ ಎಂದು ಹೇಳಿದರು.

ಡಾ.ಎಂ.ಎಸ್.ಎಂ. ಝೈನಿ ಕಾಮಿಲ್ ಮಾತನಾಡಿ ಸ್ಥಳೀಯರು, ಪೊಲೀಸ್ ಇಲಾಖೆ, ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಸಹಕಾರದಲ್ಲಿ ಸಿದ್ಧತೆ ಬಹುತೇಕ ಪೂರ್ಣಗೊಂಡಿದೆ. ಹಾಗಾಗಿ ಶುಕ್ರವಾರ ಅಪರಾಹ್ನ ಮೂರು ಗಂಟೆಗೆ ಜನರು ಶಾ ಗಾರ್ಡನ್ ತಲುಪಬೇಕು. ಭಾರತದ ರಾಷ್ಟ್ರಧ್ವಜ ಕಟ್ಟಿಕೊಂಡು ಬರುವ ವಾಹನಗಳಿಗೆ ಪ್ರವೇಶವಿದ್ದು, ಬಸ್ಸುಗಳಲ್ಲಿ ಬರುವವರಿಗೆ ಸಮಾವೇಶಕ್ಕೆ ಬರಲು ಪಂಪ್‌ವೆಲ್ ಮತ್ತು ಬಿ.ಸಿ.ರೋಡ್‌ನಿಂದ ವಾಹನದ ವ್ಯವಸ್ಥೆ ಮಾಡಲಾಗಿದೆ. ವಿಶಾಲ ಪಾರ್ಕಿಂಗ್, ಎರಡು ಬಾರಿ ನಮಾಝ್‌ಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಕಣ್ಣೂರು ಮಸೀದಿಯ ಪದಾಧಿಕಾರಿಗಳು, ಜಮಾಅತರು ಈ ವ್ಯವಸ್ಥೆಯನ್ನು ನೋಡಿಕೊಂಡಿದ್ದಾರೆ ಎಂದರು.

ವಕ್ಫ್ ಕಾಯ್ದೆ ತಿದ್ದುಪಡಿಯ ವಿರುದ್ಧ ಹೋರಾಟ ಕೇವಲ ಮುಸಲ್ಮಾರದ್ದು ಮಾತ್ರವಲ್ಲ, ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಆದರೆ ವಕ್ಫ್ ಬಗ್ಗೆ ಜನರಲ್ಲಿ ತಪ್ಪುಭಾವನೆ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಅದನ್ನು ಹೋಗಲಾಡಿಸಲು ಪ್ರಯತ್ನಿಸಲಾಗುತ್ತದೆ ಎಂದು ಯು.ಕೆ. ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಉಲಮಾ ಒಕ್ಕೂಟ ಪದಾಧಿಕಾರಿಗಳಾದ ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ, ಖಾಸಿಂ ದಾರಿಮಿ ಕಿನ್ಯ, ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ, ಮೆಹಬೂಬ್ ಸಖಾಫಿ ಕಿನ್ಯ, ಅಶ್ರಫ್ ಕಿನಾರ ಮತ್ತಿತರರು ಉಪಸ್ಥಿತರಿದ್ದರು.






 


 


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News