ಎ.18-20: ಕರಾವಳಿ ಉತ್ಸವ ಮೈದಾನದಲ್ಲಿ ʼಬ್ಯಾರಿ ಸೌಹಾರ್ದ ಉತ್ಸವ’

ಮಂಗಳೂರು, ಎ.11: ಕರ್ನಾಟಕ ಬ್ಯಾರೀಸ್ ಸೋಶಿಯಲ್ ಆ್ಯಂಡ್ ಕಲ್ಚರಲ್ ಫಾರಂ ಆಯೋಜಿಸುವ ʼಸೌಹಾರ್ದ ಬ್ಯಾರಿ ಉತ್ಸವ -2025’ ಸಂಘಟನಾ ಸಮಿತಿಯ ವತಿಯಿಂದ ನಗರದ ಕರಾವಳಿ ಉತ್ಸವ ಮೈದಾನದಲ್ಲಿ ʼಬ್ಯಾರಿ ಸೌಹಾರ್ದ ಉತ್ಸವ’ವು ಎ.18, 19, 20ರಂದು ನಡೆಯಲಿದೆ ಎಂದು ನಿವೃತ್ತ ಡಿಸಿಪಿ, ಫಾರಂ ಅಧ್ಯಕ್ಷ ಜಿ.ಎ. ಬಾವ ಹೇಳಿದ್ದಾರೆ.
ನಗರದ ಖಾಸಗಿ ಹೊಟೇಲ್‌ನಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಉತ್ಸವದಲ್ಲಿ ಬ್ಯಾರಿ ಜನಾಂಗದ ವೈಶಿಷ್ಟ್ಯತೆ, ಸಂಸ್ಕೃತಿ, ಸೌಹಾರ್ದತೆ, ಕೊಡುಗೆಗಳು, ಸಾಧನೆಗಳು, ಪರಂಪರೆಗಳನ್ನು ಪ್ರತಿಬಿಂಬಿಸುವ ಜೊತೆಗೆ ಯುವ ಜನಾಂಗಕ್ಕೆ ದಿಕ್ಸೂಚಿಯಾಗುವ ಹಾಗೂ ಬಹುಭಾಷಾ ಸಂಸ್ಕೃತಿಗಳನ್ನು ಪ್ರಸ್ತುತಪಡಿಸುವ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಎ.18ರ ಸಂಜೆ 4ಕ್ಕೆ ಉತ್ಸವಕ್ಕೆ ಚಾಲನೆ ನೀಡಲಾಗುವುದು. ಎ.20ರಂದು ಸಂಜೆ 7ಕ್ಕೆ ಸಮಾರೋಪಗೊಳ್ಳಲಿದೆ. ಈ ಮೂರು ದಿನಗಳಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಆಹಾರ ಮೇಳ ನಡೆಯಲಿದೆ ಎಂದರು.
ಎ.19ರಂದು ಬೆಳಗ್ಗೆ 10ಕ್ಕೆ ಕೌಶಲಾಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ರಾಜ್ಯದ ಪ್ರಮುಖ ವಿಶ್ವವಿದ್ಯಾನಿಲಯದ ನೇತೃತ್ವದಲ್ಲಿ ಉದ್ಯೋಗ ಮೇಳ ನಡೆಯಲಿದೆ. ಕರಾವಳಿ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಒಂದೇ ಕಡೆ ದೇಶ, ವಿದೇಶದ 100ಕ್ಕಿಂತ ಹೆಚ್ಚು ಪ್ರಖ್ಯಾತ ಕಂಪೆನಿಗಳು ಭಾಗವಹಿಸಲಿದೆ. ಕರಾವಳಿಯ ಉದ್ಯೋಗ ಆಕಾಂಕ್ಷಿಗಳು ಇದರ ಸದುಪಯೋಗ ಪಡೆಯಬಹುದು. ಇದು ಕೇವಲ ಒಂದು ದಿನಕ್ಕೆ ಸೀಮಿತಗೊಳ್ಳದೆ ಇಲ್ಲಿ ದಾಖಲು ಮಾಡಿದ ಉದ್ಯೋಗ ಆಕಾಂಕ್ಷಿ ಅಭ್ಯರ್ಥಿಗಳನ್ನು ನಾವು ನಿರಂತರ ಸಂಪರ್ಕದಲ್ಲಿ ಇರಿಸಿ ಅವರಿಗೆ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡಲು ಅನುಕೂಲ ಆಗುವಂತೆ ಜಾಬ್ ಪ್ಲೇಸ್‌ಮೆಂಟ್ ಕಚೇರಿ ತೆರೆದಿದ್ದೇವೆ. ಅಲ್ಲಿ ನುರಿತ ಟ್ರೈನರ್‌ಗಳು ಜಾಬ್ ಇಂಟರ್ವ್ಯೆ ತರಬೇತಿ ಮತ್ತು ಕೌಶಲ ನೀಡಿ ಮುಂದೆಯೂ ಅವರಿಗೆ ಉದ್ಯೋಗ ಸಿಗುವಂತೆ ಮಾಡಲು ಅನುಕೂಲ ಮಾಡಿ ಕೊಡಲಿದೆ. ಈ ಸೇವೆ ನಿರಂತರ ಮತ್ತು ಸಂಪೂರ್ಣ ಉಚಿತವಾಗಿ ನಡೆಯಲಿದೆ. ಈಗಾಗಲೇ ದುಬೈನಲ್ಲಿ ಬ್ಯಾರಿ ಮೇಳ ನಡೆಸಿದ ಆಯೋಜಕರು ಅಲ್ಲಿನ ನೂರಾರು ಕಂಪೆನಿಗಳ ನೆಟ್‌ವರ್ಕ್ ಮಾಡಿ ದ್ದಾರೆ. ಈ ಮೇಳದಲ್ಲಿ ನೋಂದಣಿ ಆಗುವ ಅಭ್ಯರ್ಥಿಗಳಿಗೆ ಉದ್ಯೋಗ ಅವಕಾಶಕ್ಕೆ ಸಹಾಯ ಮಾಡಲಿದ್ದಾರೆ ಎಂದರು.
ಎ.20ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಶೈಕ್ಷಣಿಕ ಮೇಳ ನಡೆಯಲಿದೆ. ಈಗಾಗಲೇ ಕರಾವಳಿ ಯಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಬಹಳಷ್ಟು ಸಾಧನೆ ಮಾಡಿದ ಪುತ್ತೂರು ಕಮ್ಯೂನಿಟಿ ಸೆಂಟರ್‌ನ 100ಕ್ಕಿಂತ ಹೆಚ್ಚು ಅನುಭವಿ ಕೌನ್ಸಿಲರ್‌ಗಳು, ಸದಸ್ಯರು ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ಮಾಡಲಿದ್ದಾರೆ. ಇದರಲ್ಲಿ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ, ಕಾಲೇಜು ಮತ್ತು ಜಾಗತಿಕ ಉದ್ಯೋಗ ಬೇಡಿಕೆ ಇರುವ ಕೋರ್ಸ್‌ಗಳ ಮಾಹಿತಿ, ಸ್ಪರ್ಧಾತ್ಮಕ ಪರೀಕ್ಷೆಯ ಮಾರ್ಗದರ್ಶನ ಮತ್ತು ಕೌನ್ಸಿಲಿಂಗ್‌ಗಳ ದಾಖಲೆ ಹಾಗೂ ನೋಂದಣಿ ಬಗ್ಗೆ ಮಾಹಿತಿ ನೀಡಲಿದ್ದೇವೆ. ಸರಕಾರಿ ಮತ್ತು ಖಾಸಗಿ ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿ ನೀಡಲಾಗುವುದು. ವಿಶೇಷವಾಗಿ ಶೇ.85ಕ್ಕಿಂದ ಹೆಚ್ಚು ಅಂಕ ಪಡೆದು ದ್ವಿತೀಯ ಪಿಯುಸಿ ಪರೀಕ್ಷೆ ಪಾಸಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಗುವುದು ಎಂದರು.
ಅಂದು ಪೂ.11ಕ್ಕೆ ಉದ್ಯಮ ಮೇಳ ನಡೆಯಲಿದೆ. ಇದರಲ್ಲಿ ಸಣ್ಣ ಹಾಗೂ ದೊಡ್ಡ ಉದ್ಯಮಗಳಿಗೆ ಉದ್ಯಮದ ಪ್ರಗತಿಯ ಹಾದಿಯಲ್ಲಿ ನಿರ್ವಹಿಸಬೇಕಾದ ಕ್ರಮ, ನೀತಿ ಮತ್ತು ತಂತ್ರಗಾರಿಕೆ ಬಗ್ಗೆ, ಹೂಡಿಕೆ, ಬೇಡಿಕೆ ಮತ್ತು ಹೊಸ ಆಲೋಚನೆಯ ವಾತಾವರಣ ನಿರ್ಮಿಸಲಾಗುವುದು. ಅಲ್ಲದೆ ಅಂದು ಉಚಿತ ವೈದ್ಯಕೀಯ ಮತ್ತು ತಪಾಸಣಾ ಹಾಗೂ ರಕ್ತದಾನ ಶಿಬಿರವನ್ನೂ ಆಯೋಜಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಬ್ಯಾರೀಸ್ ಸೋಶಿಯಲ್ ಆ್ಯಂಡ್ ಕಲ್ಚರಲ್ ಫಾರಂನ ಸಂಸ್ಥಾಪಕ ಇಕ್ಬಾಲ್ ಪರ್ಲಿಯಾ, ಪ್ರೆಸಿಡೆನ್ಸಿ ವಿವಿಯ ಉಪಕುಲಪತಿ ಸುಹೈಲ್, ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಪ್ರದೀಪ್ ಡಿಸೋಜ, ಉದ್ಯೋಗ ಮೇಳದ ಉಸ್ತುವಾರಿ ಅರುಣ್, ಕೆಪಿಸಿಸಿ ವಕ್ತಾರೆ ಯು.ಟಿ. ಫರ್ಝನಾ ಅಶ್ರಫ್, ಮೀಫ್ ಅಧ್ಯಕ್ಷ ಮೂಸಬ್ಬ ಬ್ಯಾರಿ, ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷೆ ಕೆ.ಕೆ. ಶಾಹುಲ್ ಹಮೀದ್, ಸಂಘಟಕ ಶರೀಫ್ ಅಬ್ಬಾಸ್ ವಳಾಲು ಉಪಸ್ಥಿತರಿದ್ದರು.