ಎ.24ರಿಂದ ಉಳ್ಳಾಲ ಉರೂಸ್: ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ

Update: 2025-04-23 19:09 IST
ಎ.24ರಿಂದ ಉಳ್ಳಾಲ ಉರೂಸ್: ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ
  • whatsapp icon

ಮಂಗಳೂರು, ಎ.23: ಉಳ್ಳಾಲ ಖುತ್‌ಬುಝ್ಝಮಾನ್ ಹಝ್ರತ್ ಅಸ್ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ (ಖ.ಸಿ) ತಂಙಳ್‌ರವರ 432ನೇ ವಾರ್ಷಿಕ ಹಾಗೂ 22ನೇ ಪಂಚವಾರ್ಷಿಕ ಉರೂಸ್ ಎ.24 ರಿಂದ ಮೇ 18ರ ತನಕ ನಡೆಯಲಿದೆ.

ಉರೂಸ್ ಕಾರ್ಯಕ್ರಮದಲ್ಲಿ ಹೊರ ರಾಜ್ಯ ಮತ್ತು ಇತರೆ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಲಿರುವುದರಿಂದ ಉಳ್ಳಾಲ ಸಂಪರ್ಕಿಸುವ ಪಂಪುವೆಲ್ -ಉಳ್ಳಾಲ ನೇತ್ರಾವತಿ ಬ್ರಿಡ್ಜ್ -ತೊಕ್ಕೊಟ್ಟು- ಉಳ್ಳಾಲ ರಸ್ತೆಯ ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ಮತ್ತು ತೊಕ್ಕೊಟ್ಟು ಜಂಕ್ಷನ್- ಉಳ್ಳಾಲ ಮುಖ್ಯ ರಸ್ತೆ - ಮಾಸ್ತಿಕಟ್ಟೆ -ರಾಣಿ ಅಬ್ಬಕ್ಕ ಸರ್ಕಲ್ -ಸೋಮೇಶ್ವರ ರಸ್ತೆಯಲ್ಲಿ ಎ.24ರಿಂದ ಮೇ 18ರ ತನಕ ಬೆಳಗ್ಗೆ 9 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ವಾಹನಗಳ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಈ ಕಾರಣದಿಂದಾಗಿ ಸುಗಮ ಸಂಚಾರಕ್ಕಾಗಿ ಕೆಳಕಂಡ ಪರ್ಯಾಯ ರಸ್ತೆಗಳನ್ನು ಬಳಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ.

ವಿವರ ಇಂತಿವೆ

* ಮೆಲ್ಕಾರು ಜಂಕ್ಷನ್(ರಾಷ್ಟ್ರೀಯ ಹೆದ್ದಾರಿ-75): ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಬಿ.ಸಿ.ರೋಡ್ ಕಡೆಯಿಂದ ಕೇರಳಕ್ಕೆ ಹೋಗುವ ಮತ್ತು ತೊಕ್ಕೊಟ್ಟು, ಉಳ್ಳಾಲ ಹಾಗೂ ಉರೂಸ್ ಕಾರ್ಯಕ್ರಮಕ್ಕೆ ಬರುವ ಮತ್ತು ಹೋಗುವ ಸಾರ್ವಜನಿಕರ ವಾಹನಗಳು ಮೆಲ್ಕಾರು ಜಂಕ್ಷನ್‌ನಲ್ಲಿ ತಿರುವು ಪಡೆದು ಬೊಳ್ಯಾರ್ -ಮುಡಿಪು -ಕೊಣಾಜೆ -ತೊಕ್ಕೊಟ್ಟು ಮೂಲಕ ಸಂಚರಿಸಬಹುದಾಗಿದೆ.

* ಅಡ್ಯಾರು ಕಟ್ಟಿ (ರಾಷ್ಟ್ರೀಯ ಹೆದ್ದಾರಿ-73): ಫರಂಗಿಪೇಟೆ, ತುಂಬೆ, ಅಡ್ಯಾರ ಕಡೆಯಿಂದ ಕೇರಳಕ್ಕೆ ಹೋಗುವ ಮತ್ತು ತೊಕ್ಕೊಟ್ಟು, ಉಳ್ಳಾಲ ಹಾಗೂ ಉರೂಸ್ ಕಾರ್ಯಕ್ರಮಕ್ಕೆ ಬರುವ ಅಥವಾ ಹೋಗುವ ಕಾರು, ದ್ವಿ-ಚಕ್ರ ವಾಹನಗಳು ಅಡ್ಯಾರು ಕಟ್ಟೆ (ಬೊಂಡಾ ಫ್ಯಾಕ್ಟರಿ) ರಸ್ತೆಯಾಗಿ ಹರೇಕಳ ಸೇತುವೆ- ಗ್ರಾಮಚಾವಡಿ ನ್ಯೂಪಡ್ಪು -ತೊಕ್ಕೊಟ್ಟು ಮೂಲಕ ಸಂಚರಿಸಬಹುದಾಗಿದೆ.

ಸಲಹೆಗಳು

* ನೇತ್ರಾವತಿ ಹಳೆಯ ಸೇತುವೆಯ ದುರಸ್ತಿ ಕಾಮಗಾರಿ ನಡೆಯುತ್ತಿರುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ನೇತ್ರಾವತಿ ಸೇತುವೆಯ ಮೂಲಕ ಸಂಚರಿಸುವ ಎಲ್ಲಾ ವಾಹನಗಳ ಚಾಲಕರು ಮತ್ತು ಸವಾರರು ಸರದಿಯಂತೆ ಎಚ್ಚರಿಕೆಯಿಂದ ಚಲಿಸುವುದು.

* ಉರೂಸ್ ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರು ಉಳ್ಳಾಲ ಮುಖ್ಯರಸ್ತೆ, ಅಬ್ಬಕ್ಕ ವೃತ್ತದಿಂದ ದರ್ಗಾದ ವರೆಗೆ ರಸ್ತೆಯ ಎರಡು ಬದಿಗಳಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಬಾರದು.

* ಕಾರ್ಯಕ್ರಮಕ್ಕೆ ಬರುವ ವಾಹನಗಳನ್ನು ನಿಗದಿಪಡಿಸಿದ ನಿಲುಗಡೆ ಸ್ಥಳಗಳಲ್ಲೇ ನಿಲ್ಲಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News