ಕಾನ ಬಾಳ ಚತುಷ್ಪಥ ರಸ್ತೆ ಕಾಮಗಾರಿಯಲ್ಲಿ ಭ್ರಷ್ಟಾಚಾರ ಆರೋಪ: ತನಿಖೆಗೆ ಡಿವೈಎಫ್ಐ ಒತ್ತಾಯ

Update: 2023-08-31 17:19 GMT

ಸುರತ್ಕಲ್: ಜನರ ಸುಧೀರ್ಘ ಹೋರಾಟದ ಪ್ರತಿಫಲವಾಗಿ ನಿರ್ಮಾಣಗೊಳ್ಳುತ್ತಿರುವ ಚತುಷ್ಪಥ ರಸ್ತೆ ಕಾಮಗಾರಿ ಒಂದು ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ಮೂಲ ನಕ್ಷಯಂತೆ ರಸ್ತೆ ನಿರ್ಮಿಸದೆ ಅಗಲ ಕಿರಿದಾಗಿ ರಸ್ತೆ ನಿರ್ಮಿಸಲಾಗುತ್ತಿದೆ ಮತ್ತು ಅತ್ಯಂತ ಕಳಪೆ ಗುಣಮಟ್ಟದ್ದಾಗಿದೆ ಎಂದು ಡಿವೈಎಫ್ಐ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಮತ್ತು ಬಿಎಎಸ್ಎಫ್ ಕಂಪೆನಿಯ ಅಧಿಕಾರಿಗಳನ್ನು ಗುರುವಾರ ತರಾಟೆಗೆ ತೆಗೆದುಕೊಂಡಿತು.

ಕಾನ ಬಾಳ ರಸ್ತೆಯ ಕುರಿತು ಅಧಿಕಾರಿಗಳ ಗಮನ ಸೆಳೆಯುವ ಸಲುವಾಗಿ ನಡೆಸಲಾದ ಪರಿಶೀಲನೆಯ ವೇಳೆ ಅಧಿಕಾರಿ ಗಳನ್ನು ತರಾಟೆಗೆ ತೆಗೆದುಕೊಂಡ ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ರಸ್ತೆ ಕಾಮಗಾರಿ ಆರಂಭಿಸಿ ವರ್ಷ ದಾಟಿದರೂ ಚತುಷ್ಪಥ ರಸ್ತೆ ಇನ್ನೂ ಪೂರ್ಣಗೊಂಡಿಲ್ಲ. ರಸ್ತೆ ನಿರ್ಮಾಣಗೊಂಡಲ್ಲಿ ಚರಂಡಿ ನಿರ್ಮಿಸದೆ ಇರುವುದರಿಂದ ಅಕ್ಕಪಕ್ಕದ ಜನರಿಗೆ ತೊಂದರೆಯಾಗುತ್ತಿದೆ. ವಿದ್ಯುತ್ ಕಂಬಗಳನ್ನು ಸ್ಥಳಾಂತರ ಮಾಡದೆ ರಸ್ತೆ ನಿರ್ಮಿಸಲಾಗುತ್ತಿದ್ದು, ಇದರಿಂದಾಗಿ ಟ್ರಾನ್ಸ್ಫರ್ಮರ್ ಕಂಬಗಳೇ ಬೀಳುವ ಅಪಾಯದಲ್ಲಿವೆ. ಬಿಎಎಸ್ಎಫ್ ಕಂಪೆನಿ ಬಳಿ ರಸ್ತೆ ಅಗಲೀಕರಣಕ್ಕೆ ಕೆಐಎಡಿಬಿ ಭೂಮಿ ಬಿಟ್ಟು ಕೊಡುತ್ತಿಲ್ಲ ಎಂಬ ಸಬೂಬು ಹೇಳಿ ರಸ್ತೆಯನ್ನು ಕಿರಿದುಗೊಳಿಸಿ ಕೈಗಾರಿಕೆಗಳ ಬೃಹತ್ ಲಾರಿ ಗಳು ಸಂಚರಿಸುವ ಈ ರಸ್ತೆಯನ್ನು ನಿತ್ಯ ಅಪಘಾತಗಳಿಗೆ ಸರಕಾರವೇ ಆಹ್ವಾನ ನೀಡಿದಂತಾಗಿದೆ ಎಂದು ದೂರಿದರು. ಅಲ್ಲದೆ, ಕಾಂಕ್ರಿಟಿಕರಣ ಸಮತಟ್ಟು ಹೊಂದಿಲ್ಲ ಮತ್ತು ಕಾಂಕ್ರೀಟೀಕರಣಮಾಡಿ ಒಂದು ವರ್ಷ ಪೂರ್ಣಗೊಳ್ಳುವ ಮೊದಲೇ ಸಿಮೆಂಟ್ ಕಿತ್ತು ಹೋಗಿ ಜಲ್ಲಿಗಳು ಮೇಲೆದ್ದು ನಿಂತಿದೆ. ಇಲ್ಲಿ ಕಳಪೆ ಕಾಮಗಾರಿ ನಡೆಸಿರುವುದು ಕಣ್ಣಿಗೆ ರಾಚುತ್ತಿದೆ ಎಂದು ಅಧಿಕಾರಿಗಳ ಗಮನ ಸೆಳೆದರು.

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಚುನಾವಣೆಯ ಹೊಸ್ತಿಲಲ್ಲಿ ಈ ರಸ್ತೆಗೆ ಶಂಕುಸ್ಥಾಪನೆ ನಡೆಸಿ ಹೋದ ಶಾಸಕ ಭರತ್‌ ಶೆಟ್ಟಿಯವರು ರಸ್ತೆ ಕಾಮಗಾರಿಯನ್ನು ಪರಿಶೀಲಿಸದೆ ಕಳಪೆ ಗುಣಮಟ್ಟದ ಕಾಮಗಾರಿಯ ಕುರಿತು ಮೌನ ವಾಗಿರುವುದು ಯಾಕೆ ಎಂದು ಶಾಸಕರನ್ನು ಪ್ರಶ್ನಿಸಿದರು. 

ಶಾಸಕರು ಸ್ಥಳಕ್ಕೆ ಬಂದು ಕಾಮಗಾರಿಯನ್ನು ಪರಿಶೀಲಿಸಬೇಕು. ರಸ್ತೆ ಕಾಮಗಾರಿಯಲ್ಲಿ ದೊಡ್ಡ ರೀತಿಯಲ್ಲಿ ಭ್ರಷ್ಟಾಚಾರ ನಡೆದಿರುವ ಅನುಮಾನ ಇದೆ. ಸರಕಾರ ಕೂಡಲೇ ತನಿಖೆ ನಡೆಸಿ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಕಳಪೆ ಕಾಮಗಾರಿಗೆ ಸಹಕರಿಸಿದ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ ಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಅವರು, ಶಾಸಕರು ಮತ್ತು ಅಧಿಕಾರಿಗಳು ಜನರ ಕಾನೂನು ಬದ್ಧ ಮೂಲ ಸೌಕರ್ಯಗಳನ್ನು ನೀಡಲು ನಿರ್ಲಕ್ಷ್ಯಿ ಸಿದರೆ ಬೃಹತ್‌ ಹೋರಾಟ ನಡೆಸುವ ಮೂಲಕ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ಹೋರಾಟ ನಡೆಸಿ ಬಿಸಿಮುಟ್ಟಿಸಲೂ ಡಿವೈಎಫ್‌ಐ ಸಿದ್ಧವಿದೆ ಎಂದು ಎಚ್ಚರಿಕೆಯನ್ನೂ ನೀಡಿದರು.

ಈ ಸಂಧರ್ಭದಲ್ಲಿ ಕಾನ ಅಟೋರಿಕ್ಷಾ ಚಾಲಕರ ಸಂಘ ಅಧ್ಯಕ್ಷರಾದ ಅಬ್ದುಲ್ ಬಷೀರ್, ಮುಖಂಡರಾದ ಪ್ರದೀಪ್, ಮಿಥುನ್, ಲಕ್ಷ್ಮೀಶ, ಹಂಝ ಮೈಂದಗುರಿ, ಸಿಪಿಎಂ ಮುಖಂಡ ಐ.ಮುಹಮ್ಮದ್, ಡಿವೈಎಫ್ಐ ಸುರತ್ಕಲ್ ಘಟಕದ ಅಧ್ಯಕ್ಷ ಬಿ.ಕೆ. ಮಸೂದ್, ಪ್ರಮುಖರಾದ ರಾಜೇಶ್ ಕಾನ, ಆಸ್ಕರ್ ಜನತಾಕಾಲನಿ, ಮುನೀಬ್ ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News