ದಲಿತ ವ್ಯಕ್ತಿಯ ಮೇಲೆ ಹಲ್ಲೆ: ಆರೋಪಿಗಳ ಬಂಧನಕ್ಕೆ ದಸಂಸ ಆಗ್ರಹ
ಮಂಗಳೂರು : ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಪಾಣಿಯಾಲ್ ಎಂಬ ದಲಿತ ಸಮುದಾಯದ ನಿವಾಸಿ ಭಾಸ್ಕ ನಾಯ್ಕ ಎಂಬವರ ಮೇಲೆ ಹಲ್ಲೆ ನಡೆದು ಒಂದು ವಾರ ಕಳೆದರೂ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಈ ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ದ.ಕ. ಜಿಲ್ಲಾ ಸಮಿತಿ ಒತ್ತಾಯಿಸಿದೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಮಿತಿಯ ಜಿಲ್ಲಾ ಪ್ರಧಾನ ಸಂಚಾಲಕ ಜಗದೀಶ್ ಪಾಂಡೇಶ್ವರ, ಸೆ. 2ರಂದು ಭಾಸ್ಕರ ನಾಯ್ಕ ಎಂಬವರು ಮಂಗಳೂರಿನಲ್ಲಿ ಖಾಸಗಿ ಮಾಧ್ಯಮದಲ್ಲಿ ಕೆಲ ಘಟನೆ ಬಗ್ಗೆ ಸಂದರ್ಶನ ನೀಡಿ ಕಾರಿನಲ್ಲಿ ಸಂಜೆ 5.30ರ ವೇಳೆಗೆ ಮನೆಗೆ ಹಿಂತಿರುಗುತ್ತಿದ್ದಾಗ ಆರೋಪಿಗಳಾದ ಮಹೇಶ್ ಶೆಟ್ಟಿ ತಿಮರೋಡಿ, ಮೋಹನ್ ಶೆಟ್ಟಿ ಪಣಿಯಾಲು, ಮುಕೇಶ್ ಶೆಟ್ಟಿ, ಪ್ರಜ್ವಲ್ ಕೆ.ವಿ. ಗೌಡ, ನೀತು ಶೆಟ್ಟಿ, ಪ್ರಮೋದ್ ಶೆಟ್ಟಿ ಪಣಿಯಾಲು ಹಾಗೂ ಇತರರು ಗುಂಪು ಕಟ್ಟಿ ಕಾರಿನ ಚಾಲಕನನ್ನು ಹೊರಗೆಳೆದು ಗಾಜು ಪುಡಿಗೈದು ಚಾಲಕನಿಗೆ ಹೊಡೆದಿದ್ದಾರೆ. ಭಾಸ್ಕರ ನಾಯ್ಕರನ್ನು ಕಾರಿನಿಂದ ಹೊರಗೆಳೆದು ಅವಾಚ್ಯ ಶಬ್ಧಗಳಿಂದ ಬೈದು ಕೊಲೆ ಬೆದರಿಕೆ ಒಡ್ಡಿ ಕಂಬಕ್ಕೆ ಕಟ್ಟಿ ಹಾಕಿ ಕಲ್ಲಿನಿಂದ ಕೆನ್ನೆಗೆ, ಬೆನ್ನಿಗೆ, ಹೊಟ್ಟೆಗೆ ಹೊಡೆದಿದ್ದಾರೆ. ಭಾಸ್ಕರ ನಾಯ್ಕ ಬೊಬ್ಬೆ ಹಾಕಿದಾದ ಅವರ ಪತ್ನಿ ಮಮತ ಹಾಗೂ ಇಬ್ಬರು ಮಕ್ಕಳು ಓಡಿ ಬಂದಿದ್ದು, ಪತಿಯನ್ನು ಬಿಡಿಸಲು ಬಂದಾಗ ಮಮತ ಅವರ ಕಾಲಿಗೂ ಕಲ್ಲಿನಿಂದ ಹೊಡೆದಿದ್ದಾರೆ. ಬಳಿಕ ಸ್ಥಳಕ್ಕೆ ಪೋಲೀಸರು ಆಗಮಿಸಿದಾಗ ಆರೋಪಿಗಳು ಪರಾರಿಯಾಗಿದ್ದಾರೆ. ಭಾಸ್ಕ ನಾಯ್ಕ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಗದೀಶ್ ಪಾಂಡೇಶ್ವರ ಹೇಳಿದರು.
ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಸ್ಥಳ ಮಹಜರು ನಡೆಸಿಲ್ಲ. ಆರೋಪಿಗಳನ್ನು ಬಂಧಿಸಿಲ್ಲ. ಈ ಬಗ್ಗೆ ಪೊಲೀಸ್ ವರಿಷ್ಟಾಧಿಕಾರಿಗೆ ದೂರು ನೀಡಲಿದ್ದು, ಸಂಘಟನೆಯು ಸೌಜನ್ಯ ಹಾಗೂ ಇತರ ಅಸಹಜ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಮುಂದಿನ ವಾರ ನಿಯೋಗ ಗೃಹ ಸಚಿವರನ್ನು ಭೇಟಿಯಾಗಲಿದೆ ಎಂದರು.
ಗೋಷ್ಟಿಯಲ್ಲಿ ಮುಖಂಡರಾದ ಗಂಗಾಧರ ಅದ್ಯಪಾಡಿ, ಯಶೋಧ ಡಿ. ಹೊಸಬೆಟ್ಟು, ಸುನಿಲ್ ಕುಮಾರ್ ಅದ್ಯಪಾಡಿ, ಸತೀಶ್ ಅದ್ಯಪಾಡಿ, ಜಯ ಕೆರೆಕಾಡು ಮುಲ್ಕಿ, ಬಾಬು ಧರ್ಮಸ್ಥಳ, ಶೇಖರ ಧರ್ಮಸ್ಥಳ ಉಪಸ್ಥಿತರಿದ್ದರು.