ಪ್ಲಾಸ್ಟರ್ ಆಫ್ ಪ್ಯಾರಿಸ್ ವಿಗ್ರಹಗಳ ತಯಾರಿಕೆ, ಮಾರಾಟ ನಿಷೇಧ: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ
ಮಂಗಳೂರು : ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ಮಾಡಿರುವ ಹಾಗೂ ಬಣ್ಣ ಲೇಪಿತವಾದ ಗೌರಿ ಹಾಗೂ ಗಣೇಶ ವಿಗ್ರಹಗಳನ್ನು ರಾಜ್ಯದ ಕೆರೆ, ನದಿ, ಕಾಲುವೆ, ಬಾವಿ ಹಾಗೂ ಇತರೆ ಜಲಮೂಲಗಳಲ್ಲಿ ವಿಸರ್ಜಿಸುವುದನ್ನು ನಿಷೇಧಿಸಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಆದೇಶಿಸಿದೆ.
ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಗಣೇಶ ಮತ್ತು ಗೌರಿ ವಿಗ್ರಹಗಳ ತಯಾರಿಕೆ ಘಟಕ ಹಾಗೂ ಮಾರಾಟ ಮಾಡುವ ಮಳಿಗೆಗಳನ್ನು ಪರೀಕ್ಷಿಸಿದಾಗ ನಿಷೇಧಿತ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ಗಣೇಶ ಮತ್ತು ಗೌರಿ ವಿಗ್ರಹಗಳ ತಯಾರಿಸುತ್ತಿರುವುದು ಹಾಗೂ ಬಣ್ಣದ ವಿಗ್ರಹಗಳನ್ನು ಮಾರಾಟಕ್ಕಿಟ್ಟಿರುವುದನ್ನು ಗಮನಿಸಿದೆ. ಹಾಗಾಗಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಾದ ಗಣೇಶ ಮತ್ತು ಗೌರಿ ಮತ್ತು ಬಣ್ಣಲೇಪಿತವಾದ ಹಾಗೂ ಇತರೆ ರಾಜ್ಯಗಳಿಂದ ಆಮದು ಮಾಡಿಕೊಂಡ ವಿಗ್ರಹಗಳನ್ನು ವಶಕ್ಕೆ ಪಡೆದು ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಲ್ಯಾಂಡ್ ಫೀಲ್ ಸೈಟ್‌ನಲ್ಲಿ ವಿಲೇವಾರಿ ಮಾಡಬೇಕೆಂದು ನಗರದ ಸ್ಥಳೀಯ ಸಂಸ್ಥೆಗಳ ಪೌರಾಯುಕ್ತರು, ಮುಖ್ಯಾಧಿಕಾರಿಗಳಿಗೆ ಪತ್ರದ ಮೂಲಕ ನಿರ್ದೇಶನ ನೀಡಲಾಗಿದೆ.
ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಬಣ್ಣ ಲೇಪಿತ ಗಣೇಶ ಮತ್ತು ಗೌರಿ ವಿಗ್ರಹ ಮಾರಾಟ ಮಾಡುವುದನ್ನು ನಿಷೇಧಿಸಲು, ತಡೆಯಲು ಹಾಗೂ ನಿಯಮ ಉಲ್ಲಂಘಿಸಿ ಅನಧಿಕೃತವಾಗಿ ತಯಾರಿಸುವುದು ಅಥವಾ ಮಾರಾಟ ಮಾಡುವ ವ್ಯಕ್ತಿ ಅಥವಾ ಸಂಸ್ಥೆಗಳ ಮೇಲೆ ಕಾನೂನು ಕ್ರಮ ಜರುಗಿಸಲು ಜಿಲ್ಲೆಯ ನಗರಸ್ಥಳೀಯ ಸಂಸ್ಥೆಗಳಿಗೆ ಆದೇಶಿಸಲಾಗಿದೆ.
ಜಿಲ್ಲೆಯಲ್ಲಿ ಇದರ ಮೇಲ್ವಿಚಾರಣೆಗೆ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರನ್ನು ನೋಡಲ್ ಅಧಿಕಾರಿಯನ್ನಾಗಿ ನಿಯೋಜಿಸಲಾಗಿದೆ ಎಂದು ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದಾರೆ.