ಬಂಟ್ವಾಳ : ಟೋಲ್ ಸುಂಕ ಪಾವತಿಸಿಲ್ಲ ಎಂದು ಲಾರಿ ಚಾಲಕನಿಗೆ ಹಲ್ಲೆ

Update: 2025-01-18 22:19 IST
ಬಂಟ್ವಾಳ : ಟೋಲ್ ಸುಂಕ ಪಾವತಿಸಿಲ್ಲ ಎಂದು ಲಾರಿ ಚಾಲಕನಿಗೆ ಹಲ್ಲೆ
  • whatsapp icon

ಬಂಟ್ವಾಳ: ಟೋಲ್ ಸುಂಕ ಪಾವತಿಸಿಲ್ಲ ಎಂಬ ಕಾರಣಕ್ಕಾಗಿ ಲಾರಿ ಚಾಲಕನ ಮೇಲೆ ಟೋಲ್ ಸಿಬ್ಬಂದಿ ಹಲ್ಲೆ ನಡೆಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣದ ಮೂಲಕ ಹರಿದಾಡುತ್ತಿದೆ.

ಬಿ.ಸಿ.ರೋಡ್ ಸಮೀಪದ ಬ್ರಹ್ಮರಕೂಟ್ಲು ಟೋಲ್ ಗೇಟ್ ನಲ್ಲಿ ಈ ಘಟನೆ ನಡೆದಿದ್ದು, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಜ.17ರ ಸಂಜೆ ವೇಳೆ ಮಂಗಳೂರು ಕಡೆಯಿಂದ ಬರುತ್ತಿದ್ದ ಲಾರಿ ಚಾಲಕ ಬ್ರಹ್ಮರಕೂಟ್ಲು ಟೋಲ್ ಗೇಟ್ ನಲ್ಲಿ ಹಣ ನೀಡಿಲ್ಲ ಎಂಬ ಕಾರಣಕ್ಕಾಗಿ ಟೋಲ್ ಸಿಬ್ಬಂದಿ ಹಲ್ಲೆ ನಡೆಸಿದ್ದಲ್ಲದೆ, ಲಾರಿಯ ಬಾಗಿಲು ತೆರೆದು ಆತನ ಕೈ ಹಿಡಿದು ಹೊರಗೆ ಎಳೆಯುತ್ತಿರುವುದು, ಅಲ್ಲದೆ ಚಾಲಕನಿಗೆ ಅವಾಚ್ಯ ಶಬ್ದಗಳಿಂದ ಬೈದು ಲಾರಿಯನ್ನು ವಾಪಸ್ ಹಿಂದೆ ಕಳುಹಿಸಿದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವ್ಯಾಪಕ ಆಕ್ರೋಶ

ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ‌ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಟೋಲ್ ಗೇಟ್ ಮುತ್ತಿಗೆ: ಮೂನಿಷ್ ಅಲಿ

ಬಂಟ್ವಾಳ ತಾಲೂಕಿನ ಬ್ರಹ್ಮರಕೊಟ್ಲುವಿನಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದ, ಇದು ಅವೈಜ್ಞಾನಿಕ ಟೋಲ್, ಇಲ್ಲಿ ಕಳೆದ ಹಲವು ವರ್ಷಗಳಿಂದ ಹಗಲು ದರೋಡೆ ನಡೆಸುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ. ಮಾತ್ರವಲ್ಲದೆ ಇಲ್ಲಿನ ಟೋಲ್ ಸಿಬ್ಬಂದಿ ಈ ಹಿಂದೆ ಹಲವು ಬಾರಿ ವಾಹನ ಚಾಲಕರಿಗೆ ಅದರಲ್ಲೂ ಮಹಿಳೆಯರೆಂದು ನೋಡದೆ ಹಲ್ಲೆ ನಡೆಸಿ ತಮ್ಮ ದರ್ಪವನ್ನು ತೋರಿಸಿದ್ದಾರೆ.

ಈ ಬಗ್ಗೆ ಹಲವು ಬಾರಿ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ರಾಜಕೀಯ ಪ್ರಭಾವವನ್ನು ಬಳಸಿಕೊಂಡು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳುತ್ತಿದ್ದರು. ಈಗ ಮತ್ತೆ ಟೋಲ್ ಸಿಬ್ಬಂದಿಯು ಲಾರಿ ಚಾಲಕನ ಮೇಲೆ ಹಲ್ಲೆ ನಡೆಸಿ ಗೂಂಡಾಗಿರಿ ತೋರಿಸಿದ್ದಾನೆ. ಇದು ಅಮಾನವೀಯ ಮತ್ತು ಅಕ್ಷಮ್ಯ ಅಪರಾಧ ಇದನ್ನು ಎಸ್ ಡಿ ಪಿ ಐ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ಖಂಡಿಸುತ್ತದೆ ಎಂದು ಎಸ್ ಡಿ ಪಿ ಐ ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಹಾಗೂ ಬಂಟ್ವಾಳ ಪುರಸಭಾ ಉಪಾಧ್ಯಕ್ಷರಾದ ಮೂನಿಷ್ ಅಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News