ಬಂಟ್ವಾಳ ಸಮಾಜ ಸೇವಾ ಸಹಕಾರಿ ಸಂಘ 2024-25ನೇ ಸಾಲಿನಲ್ಲಿ ರೂ.1159 ಕೋಟಿ ವ್ಯವಹಾರ; 5.05 ಕೋಟಿ (ತಾತ್ಕಾಲಿಕ) ಲಾಭ

Update: 2025-04-23 14:11 IST
ಬಂಟ್ವಾಳ ಸಮಾಜ ಸೇವಾ ಸಹಕಾರಿ ಸಂಘ 2024-25ನೇ ಸಾಲಿನಲ್ಲಿ ರೂ.1159 ಕೋಟಿ ವ್ಯವಹಾರ; 5.05 ಕೋಟಿ (ತಾತ್ಕಾಲಿಕ) ಲಾಭ
  • whatsapp icon

ಬಂಟ್ವಾಳ : ಇಲ್ಲಿನ ಬೈಪಾಸ್ ಬಳಿ ಸ್ವಂತ ಕಟ್ಟಡದಲ್ಲಿ ಕೇಂದ್ರ ಕಚೇರಿ ಹೊಂದಿರುವ ಸಮಾಜ ಸೇವಾ ಸಹಕಾರಿ ಸಂಘವು 2024-25ನೇ ಸಾಲಿನಲ್ಲಿ 1159 ಕೋಟಿ ರೂಪಾಯಿ ವ್ಯವಹಾರ ನಡೆಸಿದ್ದು, ಸುಮಾರು 5.05 ಕೋಟಿ (ತಾತ್ಕಾಲಿಕ) ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಸುರೇಶ್ ಕುಲಾಲ್ ತಿಳಿಸಿದರು.

ಮಂಗಳವಾರ ಸಂಜೆ ಬ್ಯಾಂಕ್ ಸಭಾಂಗಣದಲ್ಲಿ ಮಾಧ್ಯಮ ಮಂದಿಗೆ ಮಾಹಿತಿ ನೀಡಿದ ಅವರು, ಸ್ವಾತಂತ್ರ್ಯ ಹೋರಾಟಗಾರ, ಸಮಾಜ ರತ್ನ ದಿವಂಗತ ಡಾ ಅಮ್ಮೆಂಬಳ ಬಾಳಪ್ಪ ಅವರ ನೇತೃತ್ವದಲ್ಲಿ ಹಾಗೂ ಸಹಕಾರಿ ಧುರೀಣ ಬಿ ಹೂವಯ್ಯ ಮೂಲ್ಯ ಅವರ ಸಾರಥ್ಯದಲ್ಲಿ ಕೇವಲ 131 ಮಂದಿ ಸದಸ್ಯರನ್ನೊಳಗೊಂಡು 22,62/- ರೂಪಾಯಿ ಪಾಲು ಬಂಡವಾಳದೊಂದಿಗೆ ಸ್ಥಾಪಿಸಲ್ಟಟ್ಟ ಸಮಾಜ ಸೇವಾ ಸಹಕಾರಿ ಬ್ಯಾಂಕ್ ಪ್ರಸ್ತುತ 16 ಶಾಖೆಗಳನ್ನು ಹೊಂದಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದ ಕಾರ್ಯವ್ಯಾಪ್ತಿ ಹೊಂದಿದೆ. ಸಂಘದ ಪೂಂಜಾಲಕಟ್ಟೆ, ಮುಡಿಪು ಹಾಗೂ ಉಪ್ಪಿನಂಗಡಿ ಶಾಖೆಯು ಸ್ವಂತ ಕಟ್ಟಡದಲ್ಲಿ ಕಾರ್ಯಾನಿರ್ವಹಿಸುತ್ತಿದೆ ಎಂದರು.

ಆರ್ಥಿಕ ವರ್ಷ 2024-25ರ ಅಂತ್ಯಕ್ಕೆ ಸಂಘದಲ್ಲಿ 9047 ‘ಎ’ ತರಗತಿ, 5556 ‘ಬಿ’ ತರಗತಿ ಸದಸ್ಯರಿದ್ದು, 8.09 ಕೋಟಿ ರೂಪಾಯಿ ಪಾಲು ಬಂಡವಾಳ ಹೊಂದಿರುತ್ತದೆ. 19.78 ಕೋಟಿ ರೂಪಾಯಿ ನಿಧಿಗಳು, 55.35 ಕೋಟಿ ರೂಪಾಯಿ ವಿನಿಯೋಗಗಳು, 229.47 ಕೋಟಿ ರೂಪಾಯಿ ಠೇವಣಾತಿಗಳು ಇದ್ದು, 215.21 ಕೋಟಿ ರೂಪಾಯಿ ಹೊರಬಾಕಿ ಸಾಲಗಳು ಇರುತ್ತದೆ. ಸಂಘದ ದುಡಿಯುವ ಬಂಡವಾಳ 259.66 ಕೋಟಿ ರೂಪಾಯಿ ಆಗಿರುತ್ತೆ ಎಂದ ಸುರೇಶ್ ಕುಲಾಲ್ ಆಡಿಟ್ ವರ್ಗೀಕರಣದಲ್ಲಿ ಸತತವಾಗಿ ‘ಎ’ ತರಗತಿ ಹೊಂದಿರುವ ಸಂಘವು ಸದಸ್ಯರ ಅನುಕೂಲಕ್ಕಾಗಿ ಬಂಟ್ವಾಳ ಬೈಪಾಸ್ ಶಾಖೆಯಲ್ಲಿ ಇ-ಸ್ಟಾಂಪ್ ಸೌಲಭ್ಯವನ್ನು, ಕೆಲವು ಶಾಖೆಗಳಲ್ಲಿ ಸೇಫ್ ಲಾಕರ್ ಸೌಲಭ್ಯಗಳನ್ನು, ಮಣಿಪಾಲ ಆರೋಗ್ಯ ಕಾರ್ಡ್ ಸೌಲಭ್ಯ, ಸದಸ್ಯರ ಮಕ್ಕಳಿಗೆ ಉನ್ನತ ವ್ಯಾಸಂಗಕ್ಕಾಗಿ ವಿದ್ಯಾರ್ಥಿ ವೇತನವನ್ನು, ಯಶಸ್ವಿನಿ ಆರೋಗ್ಯ ರಕ್ಷಣಾ ಸೌಲಭ್ಯ, ಸದಸ್ಯರ ಗಂಭೀರ ಕಾಯಿಲೆಗಳಿಗೆ ಆರ್ಥಿಕ ಸಹಾಯಧನ ಹೀಗೆ ಹಲವಾರು ಸೌಲಭ್ಯಗಳನ್ನು ಸದಸ್ಯರಿಗೆ ನೀಡುತ್ತಾ ಬಂದಿದೆ.

2023-24ನೇ ಸಾಲಿನಲ್ಲಿ ವ್ಯವಹಾರದಲ್ಲಿ ಸರ್ವತೋಮುಖ ಪ್ರಗತಿ ಸಾಧಿಸಿ ಹಾಗೂ ಬ್ಯಾಂಕಿನೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ ಮಂಗಳೂರು ಇವರಿಂದ ಸಾಧನಾ ಪ್ರಶಸ್ತಿ ಪಡೆದುಕೊಂಡಿದ್ದು, ಈಗಾಗಲೇ ಮೂರು ಬಾರಿ ಸಾಧನಾ ಪ್ರಶಸ್ತಿ ಪಡೆದುಕೊಂಡಿದೆ ಎಂದರು.

2025-26 ನೇ ಸಾಲಿನಲ್ಲಿ ನಮ್ಮ ಸಂಘದ ವ್ಯವಹಾರವನ್ನು ವಿಸ್ತರಿಸುವ ಸಲುವಾಗಿ ಮತ್ತು ಸಮಾಜದ ಕಟ್ಟಕಡೆಯ ಹಿಂದುಳಿದ ವ್ಯಕ್ತಿಯು ಆರ್ಥಿಕವಾಗಿ ಸದೃಢರಾಗಬೇಕೆನ್ನುವ ಹಾಗೂ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಆಶಯದೊಂದಿಗೆ ಹೊಸ ಶಾಖೆಯನ್ನು ತೆರೆಯುವ ಇರಾದೆ ಆಡಳಿತ ಮಂಡಳಿಗಿದೆ ಎಂದ ಬ್ಯಾಂಕ್ ಅಧ್ಯಕ್ಷ ಸುರೇಶ್ ಕುಲಾಲ್ ಅವರು ಸಂಘದ ಮೆಲ್ಕಾರ್ ಶಾಖೆಗೆ ಸ್ವಂತ ಕಟ್ಟಡವನ್ನು ಖರೀದಿಸುವ ಪ್ರಸ್ತಾವನೆ ಆಡಳಿತ ಮಂಡಳಿಯ ಮುಂದಿದೆ ಎಂದರು.

ಸಂಘದ ಉಪಾಧ್ಯಕ್ಷ ಜನಾರ್ದನ ಬೊಂಡಾಲ, ಬ್ಯಾಂಕ್ ಸಿಇಒ ಭೋಜ ಮೂಲ್ಯ, ಎಂಜಿಎಂ ಮೋಹನ್ ಎಂ ಕೆ, ನಿರ್ದೇಶಕರಾದ ಅರುಣ್ ಬೋರುಗುಡ್ಡೆ, ರಮೇಶ್ ಸಾಲ್ಯಾನ್, ಅರುಣ್ ಕುಮಾರ್ ಕೆ, ಬಿ ರಮೇಶ್ ಸಾಲ್ಯಾನ್, ಭೋಜ ಸಾಲ್ಯಾನ್, ಕಿರಣ್ ಕುಮಾರ್ ಎ ಅಟ್ಲೂರು, ಪ್ರೇಮನಾಥ ಬಂಟ್ವಾಳ, ಸತೀಶ್ ಪಲ್ಲಮಜಲು, ಹರೀಶ್ ಜಾರಬೆಟ್ಟು, ಮಾಲತಿ ಮಚೇಂದ್ರ, ಜಗನ್ನಿವಾಸ ಗೌಡ ಮೊದಲಾದವರು ಈ ಸಂದರ್ಭ ಜೊತೆಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News