ಆಧುನಿಕ ಸವಾಲುಗಳನ್ನು ಎದುರಿಸಲು ಸಮರ್ಥರಾಗಿ: ಕಾನೂನು ವಿದ್ಯಾರ್ಥಿಗಳಿಗೆ ನ್ಯಾ. ಮುರಳೀಕೃಷ್ಣ ಕರೆ

Update: 2024-12-14 10:41 GMT

ಮಂಗಳೂರು, ಡಿ.14: ಜನಸಾಮಾನ್ಯರಿಗೆ ನ್ಯಾಯ ಒದಗಿಸುವಲ್ಲಿ ಆಧುನಿಕ ಸವಾಲುಗಳು ಕಾನೂನಿನ ವ್ಯಾಖ್ಯಾನದಲ್ಲಿಯೂ ಹಲವಷ್ಟು ಬದಲಾವಣೆಗೆ ಕಾರಣವಾಗಿದ್ದು, ಕಾನೂನು ವಿದ್ಯಾರ್ಥಿಗಳು ಈ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ತಮ್ಮ ಶಿಕ್ಷಣವನ್ನು ಕೇಂದ್ರೀಕರಿಸಬೇಕು ಎಂದು ಕೇರಳ ಉಚ್ಚ ನ್ಯಾಯಾಲಯದ ನ್ಯಾಯಾಧೀಶ, ಎಸ್.ಡಿ.ಎಂ. ಕಾನೂನು ಕಾಲೇಜಿನ ಹಳೇ ವಿದ್ಯಾರ್ಥಿ ನ್ಯಾ.ಮುರಳೀಕೃಷ್ಣ ಕರೆ ನೀಡಿದ್ದಾರೆ.

ನಗರದ ಟಿ.ಎಂ.ಎ. ಪೈ ಸಭಾಂಗಣದಲ್ಲಿ ಶನಿವಾರ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನ ಸುವರ್ಣ ಮಹೋತ್ಸವದ ಸಂಭ್ರಮ ಸುವರ್ಣ ಪಥ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

25 ವರ್ಷಗಳ ಹಿಂದೆ ಎಸ್ ಡಿಎಂ ಕಾಲೇಜಿನ ವಿದ್ಯಾರ್ಥಿಯಾಗಿದ್ದ ವೇಳೆ, ವಿದ್ಯುತ್ ಸಂಪರ್ಕದ ಕೊರತೆ, ನೀರಿನ ಸಮಸ್ಯೆ ಮೊದಲಾದ ಮೂಲಭೂತ ಸಮಸ್ಯೆಗಳ ಬಗ್ಗೆ ನ್ಯಾಯಕ್ಕಾಗಿ ಜನರ ಬೇಡಿಕೆಗಳನ್ನು ನೋಡುತ್ತಿದ್ದೆವು. ಆದರೆ ಈಗ ಬದಲಾದ ಕಾಲಘಟ್ಟದಲ್ಲಿ ಜನರ ಸಮಸ್ಯೆಗಳೂ ಬದಲಾಗಿವೆ. ಸೈಬರ್ ಕ್ರೈಂ, ಹಣದ ಸಮಸ್ಯೆ ಜನರನ್ನು ಬಹುವಾಗಿ ಕಾಡುತ್ತಿದೆ. ಆಧುನಿಕ ತಂತ್ರಜ್ಞಾನದ ಪರಿಣಾಮವಾಗಿ ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ನ್ಯಾಯ ಒದಗಿಸುವ ಸವಾಲು ನ್ಯಾಯಾಂಗದ ಮುಂದಿದೆ. ಈ ನಿಟ್ಟಿನಲ್ಲಿ ಕಾನೂನು ವಿದ್ಯಾರ್ಥಿಗಳು ತಮ್ಮನ್ನು ತಯಾರುಗೊಳಿಸಬೇಕು ಎಂದು ಅವರು ಹೇಳಿದರು.

ಪ್ರಜಾಪ್ರಭುತ್ವದ ಅಡಿಪಾಯಗಳಲ್ಲಿ ಒಂದಾದ ನ್ಯಾಯಾಂಗ ವ್ಯವಸ್ಥೆಯು ಸಂವಿಧಾನದ ಚೌಕಟ್ಟಿನಿಂದ ನಿಂಯತ್ರಿಸಲ್ಪಟ್ಟಿದೆ. ಅಂತಹ ಮಹತ್ತರವಾದ ಸಂವಿಧಾನದಿಂದಾಗಿ ನ್ಯಾಯಾಂಗ ವ್ಯವಸ್ಥೆಯ ಮೇಲಿನ ಜನರ ವಿಶ್ವಾಸವೂ ದೃಢವಾಗಿದೆ ಎಂದವರು ಹೇಳಿದರು.

ಸಂಸ್ಥಾಪನಾ ದಿನದ ಉಪನ್ಯಾಸ ನೀಡಿದ ಹಿರಿಯ ವಕೀಲ ಉದಯ ಹೊಳ್ಳ, ಧರ್ಮಾಧಿಕಾರಿಯಾಗಿದ್ದು ಸ್ವತಃ ಜನರ ಸಮಸ್ಯೆಗಳಿಗೆ ನ್ಯಾಯ ಒದಗಿಸುವ ಕೆಲಸ ನಿರ್ವಹಿಸುತ್ತಾ ಬಂದಿರುವ ಡಾ.ವೀರೇಂದ್ರ ಹೆಗ್ಗಡೆ ಕಾನೂನು ಕಾಲೇಜು ಸ್ಥಾಪನೆಯ ಮೂಲಕ ಸಮಾಜಕ್ಕೆ ಬೆಳಕು ನೀಡುವ ದೀವಿಗೆಗಳಾಗಿ ಕೆಲಸ ಮಾಡುವ ವಕೀಲರನ್ನು ಸೃಷ್ಟಿಸುವ ಕಾರ್ಯವನ್ನು ಕಾನೂನು ಕಾಲೇಜಿನ ಮೂಲಕ ಮಾಡಿದ್ದಾರೆ. ಇದು ಡಾ. ಹೆಗ್ಗಡೆಯವರ ದೃಷ್ಟಿಕೋನದ ಸಾಕ್ಷ್ಯವಾಗಿದೆ ಎಂದು ಶ್ಲಾಘಿಸಿದರು.

ಕಾನೂನು ಎಂಬುದು ಸೇವೆಯನ್ನು ಆಧರಿಸಿದ ವೃತ್ತಿ ಎಂಬುದನ್ನು ಕಾನೂನು ವಿದ್ಯಾರ್ಥಿಗಳು ಅರಿತುಕೊಂಡು, ಭ್ರಷ್ಟಾಚಾರದಿಂದ ಹದಗೆಟ್ಟಿರುವ ಸಮಾಜದ ವೌಲ್ಯ ವ್ಯವಸ್ಥೆಯನ್ನು ಎತ್ತಿಹಿಡಿಯುವ ಕಾರ್ಯವನ್ನು ಕಾನೂನು ಪದವೀಧರರು ನಿರ್ವಹಿಸಬೇಕಿದೆ. ನ್ಯಾಯಕಾಗಿ ಪರಿತಪಿಸುವ ಜನರ ಕಣ್ಣೊರೆಸುವ ಅವಕಾಶವು ಕಾನೂನು ಪದವೀಧಕರಿಗೆ ಲಭ್ಯವಾಗಿದ್ದು, ಜಿಲ್ಲಾ ನ್ಯಾಯಾಲಗಳಲ್ಲಿ ಸೂಕ್ತವಾಗಿ ತಮ್ಮ ಕಾರ್ಯವೈಖರಿಯ ಮೂಲಕ ಸಮಾಜದ ಸಬಲೀಕರಣಕ್ಕೆ ಮುಂದಾಗುವಂತೆ ಅವರು ಕಾನೂನು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಉದ್ಘಾಟನಾ ಸಮಾರಂಭದಲ್ಲಿ ಕಾಲೇಜಿನ ಮ್ಯಾಗಝೀನ್ ಅನಾವರಣಗೊಳಿಸಲಾಯಿತು. ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಉಜ್ವರ ಅವರ ‘ಲೀಗಲ್ ಲಾಂಗ್ವೇಜ್ ಆ್ಯಂಡ್ ಜನರಲ್ ಇಂಗ್ಲಿಷ್’ ಪುಸ್ತಕವನ್ನು ಈ ಸಂದರ್ಭ ಬಿಡುಗಡೆಗೊಳಿಸಲಾಯಿತು.

ಸಮಾರಂಭದಲ್ಲಿ ಕಾಲೇಜಿನ ಸಂಸ್ಥಾಪಕ ಡಾ.ಡಿ.ವೀರೇಂದ್ರ ಹೆಗ್ಗಡೆ, ನ್ಯಾ.ಮುರಳೀಕೃಷ್ಣ, ನ್ಯಾಯವಾದಿ ಉದಯ ಹೊಳ್ಳ, ಪ್ರೊ. ಎ. ರಾಜೇಂದ್ರ ಶೆಟ್ಟಿ, ನ್ಯಾಯವಾದಿ ರೋಹಿತ್ ರಾವ್ ಅವರನ್ನು ಸನ್ಮಾನಿಸಲಾಯಿತು.

ಎಸ್ ಡಿಎಂ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ. ತಾರನಾಥ ಸ್ವಾಗತಿಸಿದರು. ಡಾ.ಸುಬ್ಬಲಕ್ಷ್ಮಿ ಪಿ. ಸನ್ಮಾನಿತರ ಬಗ್ಗೆ ಮಾಹಿತಿ ನೀಡಿದರು. ಡಾ. ಬಾಲಿಕ ವಂದಿಸಿದರು.

ಯುವ ಪೀಳಿಗೆ ಕಾನೂನಿನ ಅರಿವು ಪಡೆಯಬೇಕು: ಡಾ.ಹೆಗ್ಗಡೆ

ಆಧುನಿಕ ತಂತ್ರಜ್ಞಾನದ ಸವಾಲುಗಳುಗಳನ್ನು ಸ್ವೀಕರಿಸುವ ಜತೆಗೆ ಪ್ರಾಕೃತಿಕ ಸಂಪನ್ಮೂಲಗಳ ರಕ್ಷಣೆಗೆ ಒತ್ತು ನೀಡುವ ನಿಟ್ಟಿನಲ್ಲಿ ಕಾನೂನು ಶಿಕ್ಷಣ ಬಲಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಯುವ ಪೀಳಿಗೆ ಕಾನೂನಿನ ಅರಿವನ್ನು ಪಡೆಯಬೇಕು. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಚತುರ್ದಾನಗಳಲ್ಲಿ ನ್ಯಾಯವೂ ಒಂದಾಗಿದ್ದು, ವೇದ ಹಾಗೂ ಉಪನಿಷತ್ ಗಳು ಕೂಡಾ ಮಾನವತೆ, ಧರ್ಮ, ಕಾನೂನು ಪರಿಪಾಲನೆಯನ್ನು ಪ್ರತಿಪಾದಿಸುತ್ತವೆ. ನೈತಿಕತೆ ಮತ್ತು ನಿಯತ್ತು ಜೀವನದಲ್ಲಿ ಪ್ರಮುಖವಾಗಿರಬೇಕು ಎಂದು ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಹಾಗೂ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅಭಿಪ್ರಾಯಿಸಿದರು.

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News