ಬೆಳ್ತಂಗಡಿ | ʼಪುರುಷರ ಪೂಜೆʼ ವೇಳೆ ಮುಸ್ಲಿಂ ಸಮುದಾಯದ ಅವಹೇಳನ ಆರೋಪ : ದೂರು ದಾಖಲು

Update: 2025-04-15 15:41 IST
ಬೆಳ್ತಂಗಡಿ | ʼಪುರುಷರ ಪೂಜೆʼ ವೇಳೆ ಮುಸ್ಲಿಂ ಸಮುದಾಯದ ಅವಹೇಳನ ಆರೋಪ : ದೂರು ದಾಖಲು
  • whatsapp icon

ಬೆಳ್ತಂಗಡಿ : ವೇಣೂರು ಸಮೀಪ ಪೆರ್ಲಡ್ಕದಲ್ಲಿ ʼಪುರುಷರ ಪೂಜೆʼ ಆಚರಣೆಯ ವೇಳೆ ಕೆಲವು ಕಿಡಿಗೇಡಿಗಳು ಮುಸ್ಲಿಂ ಸಮುದಾಯವನ್ನು ಅವಹೇಳನ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಕುರಿತು ಎಸ್‌ಡಿಪಿಐ ವೇಣೂರು ಪೊಲೀಸ್‌ ಠಾಣೆಗೆ ದೂರು ನೀಡಿದೆ.

ಈ ಕುರಿತ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಮುಸ್ಲಿಂ ಮಹಿಳೆಯಂತೆ ಬುರ್ಖಾ ಧರಿಸಿದ ವ್ಯಕ್ತಿಯೋರ್ವ ಅಸಭ್ಯ ರೀತಿಯಲ್ಲಿ ಕುಣಿದಾಡುತ್ತಿದ್ದಾನೆ. ಮತ್ತೋರ್ವ ವ್ಯಕ್ತಿ ಮುಸ್ಲಿಮರು ಧರಿಸುವ ಟೋಪಿಯನ್ನು ಧರಿಸಿ ಓಡಾಡುತ್ತಿದ್ದಾನೆ. ಧಾರ್ಮಿಕ ಉಡುಪುಗಳನ್ನು ಅಗೌರವ ಮತ್ತು ಅಪಹಾಸ್ಯ ಮಾಡುವ ರೀತಿಯಲ್ಲಿ ಧರಿಸಿರುವುದು ವೀಡಿಯೊದಲ್ಲಿ ಕಂಡು ಬಂದಿದೆ. ಅಲ್ಲದೇ, ವಿಡಿಯೋದಲ್ಲಿ ಎಸ್‌ಡಿಪಿಐ ಪಕ್ಷದ ಧ್ವಜವೊಂದನ್ನು ಯುವಕನೋರ್ವ ಕೈಯಲ್ಲಿ ಹಿಡಿದುಕೊಂಡು ಓಡಾಡುತ್ತಿರುವುದು ಕಂಡು ಬರುತ್ತಿದೆ.

ಉದ್ದೇಶಪೂರ್ವಕವಾಗಿ ಸಮಯದಾಯವನ್ನು ಅವಮಾನಿಸಲು ಈ ರೀತಿ ಮಾಡಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಈ ಕುರಿತು ಧಾರ್ಮಿಕ ಭಾವನೆಗೆ ಧಕ್ಕೆ ಹಾಗೂ ಪಕ್ಷದ ಧ್ವಜ ದುರ್ಬಳಕೆ ಆರೋಪಿಸಿ SDPI ವೇಣೂರು ಠಾಣೆಗೆ ದೂರು ನೀಡಿದೆ.

ಮುಸ್ಲಿಂ ಸಮುದಾಯವನ್ನು ಅವಹೇಳನ ಮಾಡುವ ದುರುದ್ದೇಶದಿಂದ ಮುಸ್ಲಿಂ ಧಾರ್ಮಿಕ ವೇಷ ಧರಿಸಿ ಹಾಗೂ ಎಸ್ಡಿಪಿಐ ಪಕ್ಷದ ಅಧಿಕೃತ ಧ್ವಜವನ್ನು ಕಳ್ಳತನ ಮಾಡಿ ದುರ್ಬಳಕೆ ಮಾಡಿದ್ದಾರೆಂದು ಎಸ್ಡಿಪಿಐ ವೇಣೂರು ಗ್ರಾಮ ಸಮಿತಿ ವೇಣೂರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದೆ.

ʼವೇಣೂರಿನ ಪೆರ್ಲಡ್ಕದಲ್ಲಿ ಪುರುಷರಪೂಜೆ ಎಂಬ ಪಾರಂಪರಿಕ ಆಚರಣೆಯಲ್ಲಿ ಕೆಲ ಕಿಡಿಗೇಡಿಗಳು ಮುಸ್ಲಿಂ ಸಮುದಾಯವನ್ನು ಅವಹೇಳನ ಮಾಡುವ ದುರುದ್ದೇಶದಿಂದ ಮುಸ್ಲಿಂ ಸಮುದಾಯದ ಗುರುಗಳು ಧರಿಸುವ ಟೋಪಿ ಹಾಗೂ ಮಹಿಳೆಯರ ವೇಷ ಭೂಷಣ ಧರಿಸಿಕೊಂಡು ಧಾರ್ಮಿಕ ನಿಂದನೆ ಮಾಡಿದ್ದಾರೆ. ಅದೇ ರೀತಿ ಎಸ್‌ಡಿಪಿಐ ಪಕ್ಷದ ಅಧಿಕೃತ ಧ್ವಜವನ್ನು ಕಳ್ಳತನ ಮಾಡಿ ದುರ್ಬಳಕೆ ಮಾಡಿರುತ್ತಾರೆ. ಇಂತಹ ಕೃತ್ಯವನ್ನು ನಡೆಸಿದ ಹಾಗೂ ಇದಕ್ಕೆ ಕುಮ್ಮಕ್ಕು ನೀಡಿದವರನ್ನು ಈ ಕೂಡಲೇ ಬಂಧಿಸಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಆಗ್ರಹಿಸಿದ್ದಾರೆ.

ಈ ವೇಳೆ ಎಸ್‌ಡಿಪಿಐ ಮುಖಂಡರಾದ ಹಮೀದ್ ವೇಣೂರು, ಅಶ್ರಫ್ ಬದ್ಯಾರು, ನಿಝಾಮ್ ಕಟ್ಟೆ, ಅಸ್ಲಾಂ ಮದ್ದಡ್ಕ, ರಿಝ್ವಾನ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News