ಕಡಲ ತಡಿಯಲ್ಲಿ ಏರುತ್ತಿರುವ ಚುನಾವಣಾ ಕಾವು: ದ.ಕ.ಜಿಲ್ಲೆಯಲ್ಲಿ ಬಿಜೆಪಿ - ಕಾಂಗ್ರೆಸ್‌ನಲ್ಲಿ ಟೈಟ್ ಫೈಟ್

Update: 2024-03-28 03:26 GMT

ಮಂಗಳೂರು: ಕಳೆದ ಮೂವತ್ತಮೂರು ವರ್ಷಗಳಿಂದ ಬಿಜೆಪಿಯ ಭದ್ರಕೋಟೆಯಾಗಿರುವ ದಕ್ಷಿಣ ಕನ್ನಡದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷವು ಬಿಜೆಪಿಯನ್ನು ಮಣಿಸಲು ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಬಿ. ಜನಾರ್ದನ ಪೂಜಾರಿ ಶಿಷ್ಯ ಪದ್ಮರಾಜ್ ಅವರನ್ನು ಕಣಕ್ಕಿಳಿಸಿದೆ.

ಬಿಜೆಪಿ ಕೂಡಾ ಈ ಕ್ಷೇತ್ರದಲ್ಲಿ ಅದ್ಯಾಕೊ ಹಾಲಿ ಸಂಸದ ಹಾಗೂ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಟಿಕೆಟ್ ನಿರಾಕರಿಸಿ ಮಾಜಿ ಸೇನಾಧಿಕಾರಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಟಿಕೆಟ್ ನೀಡಿದೆ.

ಇಬ್ಬರೂ ಕೂಡಾ ಕೂಡಾ ರಾಜ್ಯಮಟ್ಟದಲ್ಲಿ ತಮ್ಮ ಪಕ್ಷಗಳ ಮಹತ್ವದ ಹುದ್ದೆಯನ್ನು ಹೊಂದಿದವರು. ಬ್ರಿಜೇಶ್ ಚೌಟ ರಾಜ್ಯ ಬಿಜೆಪಿ ಕಾರ್ಯದರ್ಶಿ. ಪದ್ಮರಾಜ್ ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.

ಈಗಿನ ಲೆಕ್ಕಚಾರ ಪ್ರಕಾರ ಇವರ ನಡುವೆ ನೇರಾ ನೇರ ಹಣಾಹಣಿ ಫಿಕ್ಸ್. ಬಲಿಷ್ಠ ಶಕ್ತಿಗಳಾಗಿರುವ ಬಿಜೆಪಿ ಮತ್ತು ಕಾಂಗ್ರೆಸ್‌ನ್ನು ಹೊರತುಪಡಿಸಿದರೆ ಬಹುಜನ ಸಮಾಜ ಪಕ್ಷವು ಎನ್‌ಎಂಪಿಯ ನಿವೃತ್ತ ಉದ್ಯೋಗಿ ಕಾಂತಪ್ಪ ಆಲಂಗಾರ್ ಅವರನ್ನು ಅಧಿಕೃತ ಅಭ್ಯರ್ಥಿಯಾಗಿ ಘೋಷಿಸಿಕೊಂಡಿದೆ.

ಕಾಂಗ್ರೆಸ್ ಮತ್ತು ಬಿಜೆಪಿ ಅಧಿಕೃತ ಅಭ್ಯರ್ಥಿಗಳು ಕ್ಷೇತ್ರದಲ್ಲಿರುವ ದೇವಸ್ಥಾನ, ಮಠ, ಮಂದಿರಗಳ ಯಾತ್ರೆ, ಸ್ವಾಮೀಜಿ ಗಳ ಭೇಟಿಯಾಗಿ ಆಶೀರ್ವಾದ ಪಡೆಯವ ಮೂಲಕ ಚುನಾವಣಾ ತಯಾರಿ ಆರಂಭಿಸಿದ್ದಾರೆ. ಆದರೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ ಬಳಿಕವಷ್ಟೇ ಸ್ಪರ್ಧೆಯ ನೈಜ ಚಿತ್ರಣ ಲಭ್ಯವಾಗಲಿದೆ.

ದಕ್ಷಿಣ ಕನ್ನಡದಲ್ಲಿ ಕಳೆದ ಬಾರಿ ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ಒಂದೇ ಸಮುದಾಯದ ಅಂದರೆ ಬಂಟ್ ಸಮುದಾಯದ ಅಭ್ಯರ್ಥಿಗಳಿದ್ದರು. ಆದರೆ ಈ ಬಾರಿ ಇದು ಬದಲಾಗಿದೆ. ಬಿಜೆಪಿ ಅದೇ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ, ಕಾಂಗ್ರೆಸ್ ಬದಲಾವಣೆ ಮಾಡಿದೆ. ಬಿಲ್ಲವ ಸಮುದಾಯದ ಪ್ರಬಲ ನಾಯಕನಿಗೆ ಮಣೆ ಹಾಕಿದೆ. ಈ ಕ್ಷೇತ್ರದಲ್ಲಿ ಬಿಲ್ಲವ ಮತದಾರರು ಅಧಿಕ ಸಂಖ್ಯೆಯಲ್ಲಿ ಇದ್ದಾರೆ. ಬಿಜೆಪಿ ಗೆಲುವಿನಲ್ಲಿ ಅವರೇ ನಿರ್ಣಾಯಕರು ಎಂಬ ಲೆಕ್ಕಾಚಾರದೊಂದಿಗೆ ಬಿಜೆಪಿಗೆ ಸಡ್ಡು ಹೊಡೆಯಲು ಬಿಲ್ಲವ ಸಮುದಾಯದ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಆದರೆ ಈ ಪ್ರಯೋಗ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ಎನ್ನುವುದು ಚುನಾವಣಾ ಫಲಿತಾಂಶದ ಮೂಲಕ ಗೊತ್ತಾಗಲಿದೆ.

ತಳಮಟ್ಟದಿಂದ ಬಂದವರಲ್ಲ: ಎರಡೂ ಪಕ್ಷಗಳ ಅಭ್ಯರ್ಥಿಗಳು ಪಕ್ಷದ ತಳಮಟ್ಟದ ಕಾರ್ಯಕರ್ತರಾಗಿ ಬಂದವರಲ್ಲ. ತಮಗಿರುವ ಪ್ರಭಾವ ಬಳಸಿ ತಮಗಿಂತ ಹಿರಿಯರನ್ನು ಬದಿಗೆ ಸರಿಸಿ ಟಿಕೆಟ್ ಗಿಟ್ಟಿಸಿಕೊಂಡವರು. ಸಹಜವಾಗಿಯೇ ಇವರ ಬಗ್ಗೆ ಕೆಲವು ಹಿರಿಯ ನಾಯಕರಿಗೆ ಅಸಮಾಧಾನ ಇದೆ. ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಪಕ್ಷದ ನಾಯಕರ ನಿಲುವಿನ ಬಗ್ಗೆ ತಿರುಗಿ ಬಿದ್ದಿಲ್ಲ. ಯಾಕೆಂದರೆ ಪಕ್ಷ ತಮಗೆ ನೀಡಿರುವ ಅವಕಾಶದ ಬಗ್ಗೆ ಅವರು ತೃಪ್ತರಾಗಿದ್ದಾರೆ ಎನ್ನುವುದು ಅವರ ಮಾತುಗಳಿಂದ ವ್ಯಕ್ತವಾಗಿದೆ. 2009 ಮತ್ತು 2014ರಲ್ಲಿ ಸತತ ಎರಡು ಬಾರಿ ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಅವರನ್ನು 2019ರಲ್ಲಿ ಕಾಂಗ್ರೆಸ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಅವರನ್ನು ಮಣಿಸಿ ಹ್ಯಾಟ್ರಿಕ್ ಸಾಧಿಸಿದ್ದ ನಳಿನ್ ಕುಮಾರ್ ಕಟೀಲ್ ಅವರಿಗೆ ಬಳಿಕ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನವು ಸಿಕ್ಕಿತು. ಅವರು ಸಂಸತ್ ಸದಸ್ಯನಾಗಿ ಕ್ಷೇತ್ರದ ಜನತೆಗೆ ಏನು ಮಾಡಿದ್ದಾರೆ ? ಸಂಸತ್‌ನಲ್ಲಿ ಕ್ಷೇತ್ರದ ಜನರ ಪರ ಎಷ್ಟು ಬಾರಿ ಧ್ವನಿ ಎತ್ತಿದ್ದಾರೆ ಎನ್ನುವುದು ಬುದ್ಧಿವಂತ ಮತದಾರರಿಗೆ ಚೆನ್ನಾಗಿ ಗೊತ್ತಿದೆ. ಆದರೆ ಮೂರು ದಶಕಗಳಲ್ಲಿ ಇಲ್ಲಿ ಅಭಿವೃದ್ಧಿಯ ವಿಚಾರ ಮತದಾನದಲ್ಲಿ ಪ್ರಭಾವ ಬೀರಲಿಲ್ಲ. ಬರೇ ಹಿಂದುತ್ವ , ಕೋಮು ಸೂಕ್ಷ್ಮ ವಿಚಾರಗಳು ಪ್ರಭಾವ ಬೀರಿದೆ ಎನ್ನುವುದನ್ನು ಪ್ರಜ್ಞಾವಂತ ಮತದಾರರು ಅರಿತುಕೊಂಡಿದ್ದಾರೆ.

ಪೂಜಾರಿ ಕನಸು: ಬಿ.ಜನಾರ್ದನ ಪೂಜಾರಿ 1977ರಲ್ಲಿ ಮೊದಲ ಬಾರಿ ಸಂಸತ್ ಪ್ರವೇಶಿಸಿದ್ದರು. ಕೇಂದ್ರ ಸಚಿವರಾಗಿ ಜನಪ್ರಿಯತೆ ಪಡೆದ ಅವರು ಬಳಿಕ 1980, 1984 ಮತ್ತು 1989ರಲ್ಲಿ ಗೆಲ್ಲುವ ಮೂಲಕ ಸತತ ನಾಲ್ಕು ಬಾರಿ ಜಯ ಗಳಿಸಿದ್ದರು. ಆದರೆ ಬಳಿಕ ಅವರ ಸ್ಟೈಲ್ ಕೆಲವರಿಗೆ ಇಷ್ಟವಾಗಲಿಲ್ಲ. 1991ರಲ್ಲಿ ಮೊದಲ ಬಾರಿ ಧನಂಜಯ ಕುಮಾರ್ ವಿರುದ್ಧ ಸೋಲು ಅನುಭವಿಸಿದ ಪೂಜಾರಿ ಬಳಿಕ 1996, 1998, 2009 ಮತ್ತು 2014ರಲ್ಲಿ ಆಯ್ಕೆಗೆ ಪ್ರಯತ್ನ ನಡೆಸಿದ್ದರೂ ಮತ್ತೆ ಲೋಕಸಭೆ ಪ್ರವೇಶದ ಅವರ ಕನಸು ಈಡೇರಲಿಲ್ಲ. ಹೀಗಿದ್ದರೂ ಅವರು 1994-2000 ಮತ್ತು 2002-2008ರ ತನಕ ರಾಜ್ಯಸಭಾ ಸದಸ್ಯರಾಗಿದ್ದರು. ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಕೆಪಿಸಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಈ ಇಳಿವಯಸ್ಸಿನಲ್ಲೂ ಕಾಂಗ್ರೆಸ್ ಪಕ್ಷದೊಂದಿಗಿನ ಒಡನಾಟದಿಂದ ದೂರವಾಗಿಲ್ಲ. ಶಿಷ್ಯ ಹಾಗೂ ಅಭ್ಯರ್ಥಿ ಪದ್ಮರಾಜ್ ಅವರ ಚುನಾವಣಾ ಪ್ರಚಾರ ಕಚೇರಿ ಉದ್ಘಾಟನೆಗೆ ಆಗಮಿಸಿದ್ದರು.

ಜವಾಬ್ದಾರಿ ಕೊಟ್ಟರು: ಕಾಂಗ್ರೆಸ್‌ನಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಹಿರಿಯರಿಗೆ ಟಿಕೆಟ್ ಕೈತಪ್ಪಿದ್ದರಿಂದ ಬೇಜಾರಾಗದಿರಲಿ ಎಂಬ ಉದ್ದೇಶದಿಂದ ಕಾಂಗ್ರೆಸ್‌ನ ಹೈಕಮಾಂಡ್ ಹಿರಿಯರಿಗೆ ಜವಾಬ್ದಾರಿ ಕೊಟ್ಟು ಕೈತೊಳೆದುಕೊಂಡಿದೆ.

ಮಂಗಳೂರು ಕ್ಷೇತ್ರದಲ್ಲಿ ಆರಂಭದಲ್ಲಿ ಟಿಕೆಟ್‌ನ ವಿಚಾರದಲ್ಲಿ ಕೇಳಿ ಬರುತ್ತಿದ್ದ ಹೆಸರು ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ಮತ್ತು ಬಿ.ರಮಾನಾಥ ರೈ ಅವರದ್ದು. ಆದರೆ ಇದೀಗ ರೈ ಅವರಿಗೆ ದಕ್ಷಿಣ ಕನ್ನಡದ ಚುನಾವಣಾ ಉಸ್ತುವಾರಿಯನ್ನು ನೀಡಲಾಗಿದೆ. ವಿನಯ ಕುಮಾರ್ ಸೊರಕೆ ಅವರು ರಾಜ್ಯ ಕಾಂಗ್ರೆಸ್‌ನ ಪ್ರಚಾರ ಸಮಿತಿಯ ಅಧ್ಯಕ್ಷರಾಗಿದ್ದಾರೆ. ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ಒಲಿದು ಬಂದಿದೆ. ಹಿರಿಯರ ಬಾಯಿ ಮುಚ್ಚಿಸಲು ಕಾಂಗ್ರೆಸ್ ಹೈಕಮಾಂಡ್ ಈ ರೀತಿ ಸದ್ದಿಲ್ಲದೆ ಪ್ರಯತ್ನ ನಡೆಸಿರುವುದು ಇದೀಗ ಬಹಿರಂಗಗೊಂಡಿದೆ.

ಒಟ್ಟಿನಲ್ಲಿ ಬೇಸಿಗೆಯ ರಣ ಬಿಸಿಲು ತೀವ್ರಗೊಂಡಿದೆ, ಕುಡಿಯುವ ನೀರಿನ ಸಮಸ್ಯೆ ಎಲ್ಲಡೆ ಕಾಣಿಸಿಕೊಂಡಿದೆ. ಈ ಸವಾಲಿನ ನಡುವೆ ಚುನಾವಣೆ ಕಾವು ನಿಧಾನವಾಗಿ ಏರುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News