ಬಸ್ ಪ್ರಯಾಣ ದರ ಏರಿಕೆ| ಜನತೆಗೆ ತೊಂದರೆಯಾಗದಂತೆ ಸರಕಾರ ನಿರ್ಧಾರ: ಸ್ಪೀಕರ್ ಯು.ಟಿ.ಖಾದರ್

Update: 2025-01-03 18:05 IST
ಬಸ್ ಪ್ರಯಾಣ ದರ ಏರಿಕೆ| ಜನತೆಗೆ ತೊಂದರೆಯಾಗದಂತೆ ಸರಕಾರ ನಿರ್ಧಾರ: ಸ್ಪೀಕರ್ ಯು.ಟಿ.ಖಾದರ್
  • whatsapp icon

ಮಂಗಳೂರು: ರಾಜ್ಯ ಸರ್ಕಾರ ಶೇ.15ರಷ್ಟು ಬಸ್ ಪ್ರಯಾಣ ದರ ಏರಿಕೆಯನ್ನು ಜನಹಿತದ ದೃಷ್ಟಿಯನ್ನು ಗಮನದಲ್ಲಿರಿಸಿ, ಜನರಿಗೆ ತೊಂದರೆಯಾಗದಂತೆ ಸರಕಾರ ಕ್ರಮ ಕೈಗೊಳ್ಳುತ್ತದೆ ಎಂದು ಸ್ಪೀಕರ್ ಯು.ಟಿ.ಖಾದರ್ ಸಮರ್ಥಿಸಿಕೊಂಡಿದ್ದಾರೆ.

ಬಸ್ ಪ್ರಯಾಣ ದರ ಏರಿಕೆಗೆ ಜನತೆಯ ವಿರೋಧ ಕುರಿತಂತೆ ಶುಕ್ರವಾರ ಮಂಗಳೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸರಕಾರದ ಈ ನಿರ್ಧಾರದ ಹಿಂದೆ ಯಾವುದೋ ಸದುದ್ದೇಶ ಇರಬಹುದು. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವಿದ್ದು, ಅವರ ಟಿಕೆಟ್ ಮೊತ್ತವನ್ನು ಸರಕಾರವೇ ಕೆಎಸ್‌ಆರ್‌ಟಿಸಿಗೆ ಭರಿಸುತ್ತದೆ. ಅದು ಕೆಎಸ್‌ಆರ್‌ಟಿಸಿಗೆ ಉಚಿತವಲ್ಲ. ಈಗ ದರ ಏರಿಕೆಯನ್ನು ಜನಸಾಮಾನ್ಯರೂ ವಿರೋಧಿಸುತ್ತಾರೆ ಎನ್ನಲಾಗದು ಎಂದರು.

ರಾಜ್ಯದಲ್ಲಿ ಗೋಹತ್ಯೆ ನಿಷೇಧವನ್ನು ಸ್ಪೀಕರ್ ಬೆಂಬಲಿಸಲಿ ಎನ್ನುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೇಳಿಕೆ ಬಗ್ಗೆ ಉತ್ತರಿಸಿದ ಯು.ಟಿ.ಖಾದರ್, ಗೋಹತ್ಯೆ ನಿಷೇಧ ಕಾನೂನು ಮೊದಲು ದೇಶದಲ್ಲಿ ಜಾರಿಗೆ ತಂದದ್ದು ಆಗಿನ ಪ್ರಧಾನಿ ಇಂದಿರಾಗಾಂಧಿ. ಆಗ ಅವರು ಬೇರೆ ಬೇರೆ ರಾಜ್ಯದಲ್ಲಿ ಬೇರೆ ಬೇರೆ ಕಾನೂನು ಜಾರಿ ಮಾಡಿಲ್ಲ. ದೇಶದ ಎಲ್ಲ ರಾಜ್ಯಗಳಿಗೂ ಒಂದೇ ಕಾನೂನು ಜಾರಿಗೆ ತಂದರು. ಅದು ದೇಶದಲ್ಲೇ ಅನುಷ್ಠಾನಗೊಳ್ಳುತ್ತಿದೆ. ಕರ್ನಾಟಕದಲ್ಲಿ ಪ್ರತ್ಯೇಕ ಕಾನೂನು ಅನುಷ್ಠಾನಗೊಳಿಸುವ ಮಾತೇ ಇಲ್ಲ. ಆನೆ, ಹಸು ಸೇರಿದಂತೆ ಯಾವೆಲ್ಲ ಪ್ರಾಣಿಗಳ ಜೀವ ಉಳಿಸಬೇಕು ಎಂಬ ಬಗ್ಗೆ ಬೇಕಾದರೆ ಅವರಿಗೆ ಪಟ್ಟಿ ನೀಡಲು ಸಿದ್ಧ ಎಂದರು.

ಜಿಲ್ಲೆಗೊಂದು ಗೋಶಾಲೆ ಯೋಜನೆ ಜಾರಿಗೊಳಿಸಿದ್ದು ಹಿಂದಿನ ಸರಕಾರ. ಅವರು ಎಷ್ಟು ಕಡೆ ಜಾರಿ ಮಾಡಿದ್ದಾರೆ ಎಂಬುದನ್ನು ಮೊದಲು ಹೇಳಲಿ. ಮತ್ತೆ ಈ ಸರಕಾರ ಗೋಶಾಲೆ ಯೋಜನೆ ರದ್ದುಗೊಳಿಸಿದ ಬಗ್ಗೆ ಮಾತನಾಡಲಿ ಎಂದು ಸ್ಪೀಕರ್ ಖಾದರ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News