ಕೇಂದ್ರ ಸರಕಾರ ಭಯವನ್ನೇ ಧರ್ಮದ ಮೂಲವನ್ನಾಗಿಸಿದೆ: ಮೀನಾಕ್ಷಿ ಬಾಳಿ

Update: 2023-10-15 14:14 GMT

ಮಂಗಳೂರು, ಅ.15: ಪ್ರಧಾನಿ ನರೇಂದ್ರ ಮೋದಿ 2014ರಲ್ಲಿ ಗದ್ದುಗೆಗೆ ಏರುವ ಮುನ್ನ ಸುಮಾರು 2 ಕೋಟಿ ಉದ್ಯೋಗ ಸೃಷ್ಟಿ ಮಾಡಲಾಗುವುದು ಎಂದಿದ್ದರು. ಆದರೆ ಉದ್ಯೋಗ ಪ್ರಮಾಣವನ್ನು ಕಡಿಮೆ ಮಾಡಿದ್ದಾರೆಯೇ ವಿನಃ ಹೊಸ ಉದ್ಯೋಗ ಸೃಷ್ಟಿಸಲಿಲ್ಲ. ಬದಲಾಗಿ ಭಯವನ್ನೇ ಧರ್ಮದ ಮೂಲವನ್ನಾಗಿಸಿಕೊಂಡು ದೇಶದಲ್ಲಿ ಅಭದ್ರತೆಯ ವಾತಾ ವರಣ ಸೃಷ್ಟಿಸಿದ್ದಾರೆ ಎಂದು ಹೋರಾಟಗಾರ್ತಿ, ಸಂಶೋಧಕಿ ಮೀನಾಕ್ಷಿ ಬಾಳಿ ಆರೋಪಿಸಿದ್ದಾರೆ.

‘ಶಿಕ್ಷಣ, ಉದ್ಯೋಗ, ಆರೋಗ್ಯದ ಹಕ್ಕಿಗಾಗಿ, ಜಾತ್ಯತೀತತೆ, ಪ್ರಜಾಪ್ರಭುತ್ವ, ಸಂವಿಧಾನದ ಉಳಿವಿಗಾಗಿ’ ಎಂಬ ಘೋಷಣೆಯಡಿ ನಗರದ ಬಲ್ಠಠದ ಬಿಪಪ್ ಜತ್ತನ್ನ ಸಭಾಂಗಣದಲ್ಲಿ ರವಿವಾರ ನಡೆದ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ಯುವಜನ ಸಂಘಟನೆಯ 14ನೇ ದ.ಕ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ಯುವ ಸಮೂಹವನ್ನು ಭ್ರಮೆ ಎಂಬ ತೊಟ್ಟಿಲಲ್ಲಿ ಹಾಕಿ ತೂಗಲಾಗುತ್ತಿದೆ. ಆದರೆ ಈ ಜೋಗುಳ ನಿಲ್ಲಬೇಕು. ತೊಟ್ಟಿಲು ಮುರಿಯಬೇಕು. ಯುವಕರು ಭ್ರಮೆಯಿಂದ ಹೊರಬಂದು ಶಿಕ್ಷಣ, ಉದ್ಯೋಗ, ಆರೋಗ್ಯದ ಸಮಸ್ಯೆಗಳನ್ನು ಎತ್ತಿ ಹೋರಾಟ ಮಾಡಬೇಕು ಎಂದು ಕರೆ ನೀಡಿದ ಮೀನಾಕ್ಷಿ ಬಾಳಿ ಪ್ರಧಾನಿ ಸುಳ್ಳು ಹೇಳುವುದರಲ್ಲಿ ನಿಸ್ಸಿಮರಾಗಿದ್ದಾರೆ. ಜಗತ್ತಿನ ಯಾವ ದೇಷದಲ್ಲೂ ಇಷ್ಟು ಸುಳ್ಳು ಹೇಳುವ ಪ್ರಧಾನಿಯಿಲ್ಲ. ಕೇಂದ್ರವು ಎಲ್ಲಾ ಸಮಸ್ಯೆಗೆ ಕೋವಿಡ್ ಕಾರಣ ಎಂದು ಹೇಳುತ್ತದೆ. ಆದರೆ ಅದೇ ಕೋವಿಡ್ ಸಂದರ್ಭ ಅಂಬಾನಿ, ಅದಾನಿಯ ಆದಾಯ ಮಾತ್ರ ದುಪ್ಪಟ್ಟಾಗಿದೆ. ಅದರ ಬಗ್ಗೆ ಈ ಮೋದಿ ಸರಕಾರ ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಭಾರತ ಅಭಿವೃದ್ಧಿ ಹೊಂದುತ್ತಿರುವ ದೇಶ ಎಂದು ಎಂಬಂತೆ ಕೇಂದ್ರ ಸರಕಾರ ಬಿಂಬಿಸುತ್ತದೆ. ಆದರೆ ಹಲವು ಸಮೀಕ್ಷೆ ಗಳನ್ನು ಅವಲೋಕಿಸಿದಾಗ ಭಾರತವು ಹಿಂದುಳಿದ ದೇಶವಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ನಿರುದ್ಯೋಗ ಪ್ರಮಾಣ ಭಾರೀ ಏರಿಕೆಯಾಗಿದೆ ಎಂದ ಮೀನಾಕ್ಷಿ ಬಾಳಿ ಮತ್ತೊಬ್ಬರನ್ನು ದ್ವೇಷ ಮಾಡುವುದು ಭಾರತದ ಸಂಸ್ಕ್ರತಿಯಲ್ಲ. ನಮ್ಮ ಸಂಸ್ಕೃತಿ ದಯವೇ ಧರ್ಮದ ಮೂಲವಯ್ಯ ಅನ್ನುತ್ತದೆ. ಆದರೆ ಈಗಿನ ಕೇಂದ್ರ ಸರಕಾರ ಭಯವೇ ಧರ್ಮದ ಮೂಲವ ನ್ನಾಗಿಸಿದೆ ಎಂದು ಆರೋಪಿಸಿದರು.

ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ ಸುಳ್ಳು ಹೇಳುವುದರಲ್ಲಿ ಕುಖ್ಯಾತಿ ಪಡೆದ ಸೂಲಿಬೆಲೆ, ಮುಸ್ಲಿಮರ ವಿರುದ್ಧ ಮಾತನಾಡಿ ಮುಸ್ಲಿಂ ಉದ್ಯಮಿಗಳೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಂಡಿರುವ ಶರಣ್ ಪಂಪ್‌ವೆಲ್ ಶಿಕ್ಷಣ, ಉದ್ಯೋಗ ಸಮಸ್ಯೆ ಬಗ್ಗೆ ಮಾತನಾಡುತ್ತಿಲ್ಲ. ಬದಲಾಗಿ ದ್ವೇಷ ಭಾಷಣ ಮಾಡಿ ಅಧಿಕಾರ ಪಡೆಯುತ್ತಾರೆ ಎಂದು ವ್ಯಂಗ್ಯವಾಡಿದರು.

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತುಳುನಾಡಿನ ಸಂಘ ಪರಿವಾರ ಇರಲಿಲ್ಲ. ಗೇಣಿದಾರರು, ಭೂಮಾಲಕರ ವಿರುದ್ಧದ ಹೋರಾಟದಲ್ಲೂ ಈ ಸಂಘ ಪರಿವಾರ ಇರಲಿಲ್ಲ. ಈ ಹೋರಾಟದಲ್ಲಿ ಕೆಂಪು ಬಾವುಟ ಇತ್ತೇ ವಿನಃ ಕೇಸರಿ ಬಾವುಟ ವಿರಲಿಲ್ಲ ಎಂದು ಮುನೀರ್ ಕಾಟಿಪಳ್ಳ ಹೇಳಿದರು.

ಶರಣ್ ಪಂಪ್‌ವೆಲ್ ಬಡತನ, ಶಿಕ್ಷಣ ಸಮಸ್ಯೆ, ನಿರುದ್ಯೋಗ, ಶೋಷಣೆ ವಿರುದ್ಧ ಶೌರ್ಯ ಪ್ರದರ್ಶಿಸಲಿ. ಅದು ಬಿಟ್ಟು ಬಡ ಮುಸ್ಲಿಂ ಜಾತ್ರೆ ವ್ಯಾಪಾರಿಗಳ ಮೇಲೆ ಅಲ್ಲ ಎಂದ ಮುನೀರ್ ಕಾಟಿಪಳ್ಳ ನಾವು ಖಾಸಗಿ ಆಸ್ಪತ್ರೆಗಳ ವಿರುದ್ಧ ಮಾತನಾಡಿ ಜನರಿಗಾಗಿ ಹೋರಾಟ ಮಾಡಿದ್ದೇವೆಯೇ ವಿನಃ ಯುವಕರನ್ನು ಕ್ರಿಮಿನಲ್‌ಗಳನ್ನಾಗಿ ಮಾಡಿಲ್ಲ. ನ್ಯಾಯಕ್ಕಾಗಿ ಎದೆಗೊಟ್ಟು ಹೋರಾಡಿದ ಕೋಟಿ ಚೆನ್ನಯ್ಯರ ವಾರಿಸುದಾರರು ನಾವು ಎಂದರು.

ಅಧ್ಯಕ್ಷತೆ ವಹಿಸಿದ್ದ ಡಿವೈಎಫ್‌ಐ ಜಿಲ್ಲಾಧ್ಯಕ್ಷ, ಬಿ.ಕೆ. ಇಮ್ತಿಯಾಝ್ ಮಾತನಾಡಿ ಸ್ವಾತಂತ್ರ್ಯ ಹೋರಾಟ ಆರಂಭವಾದಾಗ ಕೊನೆ ಯಾವಾಗ ಎಂಬುದು ತಿಳಿದಿರಲಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೂ ನಮ್ಮ ಹೋರಾಟಕ್ಕೂ ಕೊನೆ ತಿಳಿದಿಲ್ಲ. ಹಾಗಾಗಿ ನಾವು ನಿರಂತರ ಹೋರಾಟ ಮಾಡುತ್ತಿದ್ದೇವೆ. ದ.ಕ.ಜಿಲ್ಲೆಯಲ್ಲಿ ಶೋಷಿತರಿಗೆ ಮತ್ತಷ್ಟು ಅನ್ಯಾಯ ನಡೆಯುತ್ತಿ ದ್ದರೂ ಕಾಂಗ್ರೆಸ್ ಮೌನ ತಾಳಿದೆ ಎಂದು ಆರೋಪಿಸಿದರು.

ಡಿವೈಎಫ್‌ಐ ಮುಖಂಡರಾದ ಮನೋಜ್ ವಾಮಂಜೂರು ಸ್ವಾಗತಿಸಿದರು. ಜೀವನ್ ರಾಜ್ ಕುತ್ತಾರ್ ವಂದಿಸಿದರು. ಸಂತೋಷ್ ಬಜಾಲ್ ಕಾರ್ಯಕ್ರಮ ನಿರೂಪಿಸಿದರು. 








 


 

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News