ನೇತ್ರಾವತಿ ನದಿಯಲ್ಲಿ ವಾಟರ್ ಮೆಟ್ರೊ ಯೋಜನೆಗೆ ಸಿಎಂ ಸಿದ್ದರಾಮಯ್ಯ ಅಸ್ತು

ಮಂಗಳೂರು, ಎ.23: ಮಂಗಳೂರಿನ ಗುರುಪುರ- ನೇತ್ರಾವತಿ ನದಿಯಲ್ಲಿ ಮಂಗಳೂರು ವಾಟರ್ ಮೆಟ್ರೋ ಯೋಜನೆ ಕಾರ್ಯಗತಗೊಳಿಸುವ ಪ್ರಸ್ತಾವನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಅನುಮೋದನೆ ನೀಡಿದರು.
ಬೆಂಗಳೂರಿನ ಮುಖ್ಯಮಂತ್ರಿಗಳ ಕಾವೇರಿ ನಿವಾಸದಲ್ಲಿ ನಡೆದ ಕರ್ನಾಟಕ ಜಲಸಾರಿಗೆ ಮಂಡಳಿಯ ಸಭೆಯಲ್ಲಿ ರಾಜ್ಯದ ಬಂದರುಗಳು ಅಭಿವೃದ್ಧಿ, ಜಲಸಾರಿಗೆ ಯೋಜನೆಗಳ ಪ್ರಗತಿ, ಸರಕು ಸಾಗಣೆಗೆ ಅವಶ್ಯವಿರುವ ಮೂಲ ಸೌಲಭ್ಯಗಳ ಬಗ್ಗೆ ಸಮಿತಿಯಲ್ಲಿ ಚರ್ಚಿಸಲಾಯಿತು.
ಸಾಗರಮಾಲಾ ಯೋಜನೆಯಡಿಯಲ್ಲಿ ಮಂಗಳೂರಿನಲ್ಲಿ ಕರ್ನಾಟಕ ಜಲಸಾರಿಗೆ ತರಬೇತಿ ಕೇಂದ್ರವನ್ನು ಸ್ಥಾಪಿಸುವ ಪ್ರಸ್ತಾವನೆಗೆ ಮುಖ್ಯಮಂತ್ರಿ ಅವರು ಒಪ್ಪಿಗೆ ನೀಡಿದರು.
ಪುನರ್ವಸತಿ, ಬಂದರು ಸಂಬಂಧಿತ ಕಾರ್ಯಾಚರಣೆಗಳಿಗೆ ಭೂಮಿ ಹಂಚಿಕೆ ಗುತ್ತಿಗೆ ಅವಧಿಯನ್ನು ಪರಿಶೀಲಿಸಿ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದ್ದು ಜತೆಗೆ ಅತಿಕ್ರಮಣ ಮಾಡಿಕೊಂಡಿರು ವವರನ್ನು ಕೂಡಲೇ ಎತ್ತಂಗಡಿ ಮಾಡುವಂತೆ ಸಿಎಂ ಸೂಚಿಸಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಗುರುತಿಸಲಾಗಿರುವ ದ್ವೀಪಗಳ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಡ್ರೋನ್ ಸರ್ವೇ ಮಾಡಿಸಿ ಇನ್ನು ಮೂರು ತಿಂಗಳ ಒಳಗಾಗಿ ವರದಿ ನೀಡುವಂತೆ ಉತ್ತರ ಕನ್ನಡ ಜಿಲ್ಲಾಧಿಕಾರಿಗಳಿಗೆ ಸಿಎಂ ಸೂಚಿಸಿದರು.
ಆಂಧ್ರ ಪ್ರದೇಶ, ವಿಶಾಖಪಟ್ಟಣ, ಕೇರಳ, ತಮಿಳು ನಾಡು, ಗುಜರಾತ್ ನಲ್ಲಿ ಬಂದರುಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ ಎಂಬುದರ ಬಗ್ಗೆ ಅಧ್ಯಯನ ಮಾಡಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಬಂದರು ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರ, ಸೌಲಭ್ಯ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.