ಮಂಗಳೂರು ವಿವಿ ರೂಸ 1ರ ಹಣದಲ್ಲಿ ಭ್ರಷ್ಟಾಚಾರ ಆರೋಪ : ಪಾರದರ್ಶಕ ತನಿಖೆ, ರಾಜ್ಯಪಾಲರ ಮಧ್ಯ ಪ್ರವೇಶಕ್ಕೆ ಎಬಿವಿಪಿ ಆಗ್ರಹ

Update: 2025-04-17 14:25 IST
Photo of Press meet
  • whatsapp icon

ಮಂಗಳೂರು : ಈಗಾಗಲೇ ಹಲವು ಹಗರಣಗಳಿಗೆ ತುತ್ತಾಗಿರುವ ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಉಚ್ಚತ್ತರ್ ಶಿಕ್ಷಾ ಅಭಿಯಾನ (ರೂಸ 1)ರ ಮೂಲಕ ಬಿಡುಗಡೆಯಾದ ಹಣದಲ್ಲಿಯೂ ಭ್ರಷ್ಟಾಚಾರ ಆಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಪಾರದರ್ಶಕ ತನಿಖೆ ಆಗಬೇಕು ಹಾಗೂ ರಾಜ್ಯಪಾಲರು ಮಧ್ಯ ಪ್ರವೇಶ ಮಾಡಬೇಕು ಎಂದು ಎಬಿವಿಪಿ ಆಗ್ರಹಿಸಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಜಿಲ್ಲಾ ಸಂಚಾಲಕ ಸುವಿತ್ ಶೆಟ್ಟಿ, 2013 ಮತ್ತು 2017ರವರೆಗೆ ರೂಸಾ 1ರ ಮೂಲಕ ಬಿಡುಗಡೆಯಾದ 20 ಕೋಟಿ ರೂ. ಹಣದಲ್ಲಿ ಸುಮಾರು 7 ಕೋಟಿ ರೂ. ಬಾಲಕರ ಮತ್ತು ಬಾಲಕಿಯರ ಪ್ರತ್ಯೇಕ ವಸತಿ ನಿಲಯವನ್ನು ನಿರ್ಮಾಣ ಮಾಡಲಾಗಿದೆ ಎಂಬ ಸುಳ್ಳು ದಾಖಲೆಯನ್ನು ಮಂಗಳೂರು ವಿವಿ ಆಡಳಿತ ಮಂಡಳಿ ನೀಡಿದೆ. ಪರಿಶೀಲನೆಗೆ ಬಂದ ತಜ್ಞರ ಸಮಿತಿ ಮಂಗಳೂರು ವಿವಿಯಲ್ಲಿ ಯಾವುದೇ ಹೊಸ ಹಾಸ್ಟೆಲ್ ನಿರ್ಮಾಣ ಆಗದೆ ಇರುವುದನ್ನು ಕಂಡು ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ವರದಿ ನೀಡಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಉತ್ತರಿಸುವಂತೆ ಮಂಗಳೂರು ವಿವಿ ಆಡಳಿತ ಮಂಡಳಿಯ ಅಧಿಕಾರಿಗಳಿಗೆ ಮುಖ್ಯ ಕಾರ್ಯದರ್ಶಿಯಿಂದ ಸಮನ್ಸ್ ನೀಡಲಾಗಿದೆ ಎಂಬುದು ತಿಳಿದು ಬಂದಿದೆ. ಇದು ಮಂಗಳೂರು ವಿವಿಯ ಗೌರವವನ್ನು ಕುಸಿಯುವಂತೆ ಮಾಡಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.

ಮಾರ್ಕ್ಸ್ ಕಾರ್ಡ್ ಹಗರಣ, ಸೋಲಾರ್, ಲ್ಯಾಪ್‌ಟಾಪ್ ಸೇರಿದಂತೆ ಹಲವು ಹಗರಣಗಳ ಮೂಲಕ ಈಗಾಗಲೇ ಮಂಗಳೂರು ವಿವಿ ಕುಖ್ಯಾತಿಗೆ ಒಳಗಾಗಿದೆ. ಮಂಗಳೂರು ವಿವಿ ವ್ಯಾಪ್ತಿಗೊಳಪಡುವ ಜಿಲ್ಲೆಗಳ ಸಂಸದರು, ಶಾಸಕರು, ಉಸ್ತುವಾರಿ ಸಚಿವರು ಈ ಬಗ್ಗೆ ಯಾರೂ ಧ್ವನಿ ಎತ್ತುತ್ತಿಲ್ಲ. ಮಂಗಳೂರು ವಿವಿಯ ಪ್ರಸಕ್ತ ಉಪ ಕುಲಪತಿಯವರು ವಿವಿಯ ಆರ್ಥಿಕ ಸಂಕಷ್ಟದ ಬಗ್ಗೆ ಮಾತನಾಡುತ್ತಾರೆ. ಆದರೆ 2017ರಲ್ಲಿ ವಿವಿಯಲ್ಲಿ 218 ಕೋಟಿ ರೂ.ಗಳಿತ್ತು ಎಂಬ ದಾಖಲೆ ಇದೆ. ಅಷ್ಟು ಹಣ ಖಾಲಿಯಾಗಲು ಕಾರಣ ಏನು ಎಂಬುದನ್ನು ಆ ಅವಧಿಯಿಂದ ಈವರೆಗೆ ಆಡಳಿತ ನಡೆಸಿದವರು ನೀಡಬೇಕು ಎಂದು ಅವರು ಒತ್ತಾಯಿಸಿದರು.

ಮಂಗಳೂರು ವಿವಿಯ ಹಗರಣ ಮತ್ತು ಪ್ರಸಕ್ತ ಸ್ಥಿತಿಗತಿಯನ್ನು ಗಮನದಲ್ಲಿರಿಸಿ ರಾಜ್ಯಪಾಲರು ಮಧ್ಯ ಪ್ರವೇಶಿಸಿ ಕ್ರಮ ವಹಿಸದಿದ್ದರೆ ಎಬಿವಿಪಿ ಮಂಗಳೂರು ವಿಭಾಗದಾದ್ಯಂತ ತೀವ್ರ ಹೋರಾಟ ಸಂಘಟಿಸಲಿದೆ ಎಂದು ಅವರು ಹೇಳಿದರು.

2016ರಿಂದೀಚೆಗೆ ವಿವಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗುತ್ತಿದೆ. ವಿವಿಯಲ್ಲಿ ಕೌಶಲ್ಯ ಆಧರಿತ ಶಿಕ್ಷಣ, ಮೂಲಭೂತ ಸೌಕರ್ಯದ ಕೊರತೆ ಕಾಡುತ್ತಿದೆ. ಮಂಗಳೂರು ವಿವಿಯ ಪಿಜಿ ವಿಭಾಗದ 7 ಕೋರ್ಸ್‌ಗಳನ್ನು ಕಳೆದ ವರ್ಷ ಮುಚ್ಚಲಾಗಿದೆ. ಈ ವರ್ಷ ಮತ್ತೆ 6 ಕೋರ್ಸ್‌ಗಳನ್ನು ಮುಚ್ಚುವ ಬಗ್ಗೆ ಪ್ರಸ್ತಾಪವಾಗಿದೆ. ಇದೇ ರೀತಿ ಮುಂದುವರಿದರೆ ಮುಂದಿನ ಎರಡು ವರ್ಷಗಳೊಳಗೆ ಮಂಗಳೂರು ವಿವಿ ಸಂಪೂರ್ಣ ಮುಚ್ಚುವ ಹಂತಕ್ಕೆ ತಲುಪಲಿದೆ ಎಂದು ವಿವಿಯ ಎಬಿವಿಪಿ ಮುಖಂಡ ಮದನ್ ಕುಮಾರ್ ಆಕ್ಷೇಪಿಸಿದರು.

ಕಳೆದ ಎರಡು ವರ್ಷಗಳಿಂದ ಮಂಗಳೂರು ವಿವಿಯಲ್ಲಿ ಗೌರವ ಡಾಕ್ಟರೇಟ್ ನೀಡುವುದನ್ನೂ ವ್ಯಾಪಾರೀಕರಣಗೊಳಿಸಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ಸಾಧನೆ ಮಾಡಿದವರಿಗೆ ನೀಡಬೇಕಾದ ಗೌರವ ಡಾಕ್ಟರೇಟ್ ಪದವಿ ಕೇವಲ ಉದ್ಯಮ ರಂಗಕ್ಕೆ ಮಾತ್ರ ನೀಡಲಾಗುತ್ತಿದೆ ಎಂದು ಭರತ್ ಕುಮಾರ್ ಆರೋಪಿಸಿದರು.

ಗೋಷ್ಟಿಯಲ್ಲಿ ಎಬಿವಿಪಿ ನಾಯಕರಾದ ಮೋನಿಶ್ ತುಮಿನಾಡು, ಶ್ರೀಲಕ್ಷ್ಮಿ ಉಪಸ್ಥಿತರಿದ್ದರು.  

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News