ಸೈಬರ್ ವಂಚನೆ: ಎಚ್ಚರಿಕೆ ವಹಿಸಲು ಮಂಗಳೂರು ಪೊಲೀಸ್ ಕಮಿಷನರ್ ಸೂಚನೆ
ಮಂಗಳೂರು, ಆ.24: ದಿನದಿಂದ ದಿನಕ್ಕೆ ಸೈಬರ್ ವಂಚನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಕೆಲವೊಂದು ಸಲಹೆ, ಸೂಚನೆಗಳನ್ನು ನೀಡಿ ಜಾಗರೂಕರಾಗಿರುವಂತೆ ಮನವಿ ಮಾಡಿದ್ದಾರೆ.
ವಂಚಕರು ಆನ್‌ಲೈನ್ ಪಾರ್ಟ್ ಟೈಮ್ ಉದ್ಯೋಗದ ಭರವಸೆಗಳನ್ನು ನೀಡಿ ಹಣ ಹೂಡಿಕೆ ಮಾಡಿಸಿ ವಂಚಿಸುತ್ತಿದ್ದಾರೆ. ಯಾವುದೇ ಹೂಡಿಕೆ ಮಾಡದೆ ಮನೆಯಿಂದಲೇ ಪಾರ್ಟ್‌ಟೈಮ್ ಉದ್ಯೋಗದ ಮೂಲಕ ಹಣಗಳಿಸಬಹುದು. ಆಸಕ್ತಿ ಇದ್ದಲ್ಲಿ ಸಂಪರ್ಕಿಸಿ ಎಂದು ಸೈಬರ್ ವಂಚಕರು ಅಂತಾರಾಷ್ಟ್ರೀಯ ಸಂಖ್ಯೆಗಳಿಂದ ವಾಟ್ಸ್‌ಆ್ಯಪ್/ಟೆಲಿಗ್ರಾಂ ಮೂಲಕ ಬಲ್ಕ್ ಎಸ್‌ಎಂಎಸ್ ರವಾನಿಸುತ್ತಾರೆ. ಇದನ್ನು ನಂಬಿ ವಂಚಕರನ್ನು ಸಂಪರ್ಕಿಸುವ ವ್ಯಕ್ತಿಗಳಿಗೆ ಆ ವಂಚಕರು ತಾವು ವಾಟ್ಸ್‌ಆ್ಯಪ್ ಮೂಲಕ ಕಳುಹಿಸಿಕೊಡುವ ಯೂಟ್ಯೂಬ್ ಚಾನೆಲ್‌ಗಳನ್ನು ಸಬ್‌ಸ್ಕ್ರೈಬ್ ಮಾಡುವಂತೆ ಹಾಗೂ ವೀಡಿಯೋಗಳನ್ನು ಲೈಕ್ ಮಾಡಿ ಸ್ಕ್ರೀನ್ ಶಾಟ್‌ಗಳನ್ನು ಕಳುಹಿಸುವಂತೆ ತಿಳಿಸುತ್ತಾರೆ. ಅದರಂತೆ ಪ್ರತೀ ದಿನ 5 ರಿಂದ 10 ಸ್ಕ್ರೀನ್ ಶಾಟ್ ಕಳುಹಿಸಿದಾಗ ಮೊದಲ ಹಂತದಲ್ಲಿ ನೊಂದ ವ್ಯಕ್ತಿಗಳಿಗೆ ಸಣ್ಣ ಮೊತ್ತವನ್ನು ಅವರ ಬ್ಯಾಂಕ್ ಖಾತೆಗಳಿಗೆ ಪಾವತಿ ಮಾಡುತ್ತಾರೆ. ಆ ಬಳಿಕ ನೊಂದ ವ್ಯಕ್ತಿಯನ್ನು ಸಂಪರ್ಕಿಸುವ ವಂಚಕರು ವಾಟ್ಸ್ ಆ್ಯಪ್ ಮೂಲಕ ಕಳುಹಿಸುವ ಲಿಂಕ್‌ನಲ್ಲಿ ನೊಂದ ವ್ಯಕ್ತಿಯು ತನ್ನ ವೈಯುಕ್ತಿಕ ಮಾಹಿತಿಯನ್ನು ದಾಖಲಿಸಿ ಪ್ರೊಫೈಲ್ ತೆರೆದು ಆ ಮೂಲಕ ಹಣ ಹೂಡಿಕೆ ಮಾಡಿದಲ್ಲಿ ಅದಕ್ಕೆ ಹೆಚ್ಚಿನ ಲಾಭ ಒದಗಿಸುವುದಾಗಿ ತಿಳಿಸಿ ಹಂತ ಹಂತವಾಗಿ ವಂಚಕರು ಕಳುಹಿಸುವ ಬ್ಯಾಂಕ್ ಖಾತೆಗಳಿಗೆ ಹಣವನ್ನು ಪಾವತಿ ಮಾಡಿಸಿಕೊಳ್ಳುತ್ತಾರೆ ಎಂದು ಸೈಬರ್ ಪೊಲೀಸರು ಮಾಹಿತಿ ನೀಡಿದ್ದಾರೆ.
ಹಣವನ್ನು ಹೂಡಿಕೆ ಮಾಡಿದ ವ್ಯಕ್ತಿಗಳು ವಂಚಕರು ತಿಳಿಸಿದಂತೆ ತೆರೆದಿರುವ ಆನ್‌ಲೈನ್ ಡ್ಯಾಷ್ ಬಾರ್ಡ್‌ನಲ್ಲಿ ಅವರು ಹೂಡಿಕೆ ಮಾಡಿದ ಹಣದ ಇಂಡೆಕ್ಸ್‌ನಲ್ಲಿ ಹಣವು ದ್ವಿಗುಣಗೊಳ್ಳುವ ಮಾಹಿತಿಯನ್ನು ಸತ್ಯವೆಂದು ತಿಳಿದು ಹೆಚ್ಚಿನ ಹೂಡಿಕೆ ಮಾಡುತ್ತಾರೆ. ಕೊನೆಗೆ ತಾನು ಹೂಡಿಕೆ ಮಾಡಿದ ಹಣವನ್ನು ವಿಥ್‌ಡ್ರಾ ಮಾಡಲು ಪ್ರಯತ್ನಿಸಿದರೆ ಮುಂದಿನ ಹಂತವನ್ನು ಪೂರ್ಣಗೊಳಿಸದೆ (ಟಾಸ್ಕ್) ಅದು ಸಾಧ್ಯವಿಲ್ಲವೆಂದು ತಿಳಿಸಿ ಹಣವನ್ನು ಮರುಪಾವತಿ ಮಾಡದೆ ವಂಚನೆ ಮಾಡುತ್ತಾರೆ.
ಹಾಗಾಗಿ ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ಅಪರಿಚಿತ ನಂಬರ್‌ಗಳಿಂದ ವಾಟ್ಸ್‌ಆ್ಯಪ್ ಮೂಲಕ ಮತ್ತು ಅಪರಿಚಿತ ವ್ಯಕ್ತಿಗಳಿಂದ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಮೂಲಕ ಅರೆಕಾಲಿಕ ಉದ್ಯೋಗ ಬಗ್ಗೆ ಸ್ವೀಕೃತವಾಗುವ ಸಂದೇಶಗಳಿಗೆ ಸ್ಪಂದಿಸಬಾರದು. ಆ ನಂಬರ್‌ಗಳನ್ನು ರಿಪೋರ್ಟ್ ಮತ್ತು ಬ್ಲಾಕ್ ಮಾಡಬೇಕು. ಪಾರ್ಟ್‌ಟೈಮ್ ಉದ್ಯೋಗದಿಂದ ನಿರೀಕ್ಷೆಗೂ ಮೀರಿದ ಹೆಚ್ಚು ಆದಾಯ ಗಳಿಸಿ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ/ಈ ಮೇಲ್ ಮೂಲಕ ಎಸ್‌ಎಂಎಸ್ ಮೂಲಕ ಬರುವ ಯಾವುದೇ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬಾರದು. ವಂಚಕರು ವಿವಿಧ ಸಾಮಾಜಿಕ ಮಾಧ್ಯಮಗಳನ್ನು ಬಳಸುವುದರಲ್ಲಿ ಜಾಣರಾಗಿದ್ದು, ಇಂತಹವರ ಮೋಸದ ಜಾಲಕ್ಕೆ ಬೀಳಬಾರದು ಎಂದು ಮನವಿ ಮಾಡಿದ್ದಾರೆ.