ನಂದಿಗುಡ್ಡ ಸ್ಮಶಾನದಲ್ಲಿ ವಿದ್ಯುತ್ ಶವಗಾರ ನಿರ್ಮಾಣಕ್ಕೆ ಒತ್ತಾಯ
ಮಂಗಳೂರು, ಡಿ.31: ನಗರ ನಂದಿಗುಡ್ಡ ಸ್ಮಶಾನದಲ್ಲಿ ವಿದ್ಯುತ್ ಶವಗಾರ ನಿರ್ಮಾಣಕ್ಕೆ ಮುಂದಾಗುವಂತೆ ಜಿಲ್ಲೆಯ ಜನಪ್ರತಿನಿಧಿಗಳು ಸಹಕಾರ ನೀಡಬೇಕು ಎಂದು ಮಾಜಿ ಕಾರ್ಪೊರೇಟರ್ ಕೆ. ಭಾಸ್ಕರ ರಾವ್ ಒತ್ತಾಯಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಂದಿಗುಡ್ಡ ಸ್ಮಶಾನದಲ್ಲಿ ವಿದ್ಯುತ್ ಶವಾಗಾರ ನಿರ್ಮಾಣ ಮಾಡುವ ಮೂಲಕ ಬಡ ಕುಟುಂಬಗಳ ಖರ್ಚು ವೆಚ್ಚವನ್ನು ಕಡಿಮೆ ಮಾಡಲು ಸಹಕರಿಸಬೇಕು ಎಂದರು.
ಇದಲ್ಲದೆ ಮಂಗಳಾದೇವಿ ಮೋರ್ಗನ್‌ಗೇಟ್ ಕಂಕನಾಡಿ ಮೂಲಕ ಎಜೆ ಆಸ್ಪತ್ರೆ, ಲ್ಯಾಂಡ್ ಲಿಂಕ್ ದೇರೆಬೈಲ್‌ಗೆ ಬಸ್ ಸೌಲಭ್ಯ, ಮಂಗಳಾದೇವಿಯಿಂದ ಪಡೀಲ್ ಜಲ್ಲಿಗುಡ್ಡೆಗೆ ಹೊಸ ಬಸ್ಸು ಸೌಲಭ್ಯ, ಮೋರ್ಗನ್‌ಗೇಟ್‌ನಿಂದ ಕಂಕನಾಡಿಗೆ ಬಸ್ಸು, ರಿಕ್ಷಾ, ಟೆಂಪೋ ತಂಗುದಾಣಗಳ ಜತೆಗೆ ಕುಡಿಯುವ ನೀರಿನ ಸೌಲಭ್ಯ, ಶೌಚಾಲಯದ ವ್ಯವಸ್ಥೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ನಗದಲ್ಲಿ ಸುಸಜ್ಜಿತ ಪಾರ್ಸ್‌ಪೋರ್ಟ್ ಕಚೇರಿಯ ಜತೆಗೆ 75 ವರ್ಷ ಮೇಲ್ಪಟ್ಟ, ಯಾವುದೇ ಪಿಂಚಣಿ ಹೊಂದಿಲ್ಲದ ಹಿರಿಯ ನಾಗರಿಕರಿಗೆ 5000 ರೂ. ಗೌರವಧನದ ಪಿಂಚಣಿ, ಉಚಿತ ವೈದ್ಯಕೀಯ ನೆರವು ಎಲ್ಲಾ ಆಸ್ಪತ್ರೆಗಳಲ್ಲಿ ದೊರೆಯುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಸೇರಿದಂತೆ ಸಂಬಂಧಪಟ್ಟ ಜನಪ್ರತಿನಿಧಿಗಳು ಕ್ರಮ ವಹಿಸಬೇಕು ಎಂದು ಅವರು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಸತೀಶ್ ಪೆಂಗಾಲ್, ಇಮ್ರಾನ್ ಎ.ಆರ್, ಮೀನಾ ಟೆಲ್ಲಿಸ್, ಬಬಿತಾ ಡಿಸೋಜಾ, ಆನಂದ ಸೋನ್ಸ್ ಉಪಸ್ಥಿತರಿದ್ದರು.