ಗಡಿಪಾರು ನೋಟಿಸ್ ಜಾತಿ, ಧರ್ಮ, ಸಂಘಟನೆ, ಪಕ್ಷ ಆಧಾರಿತ ಕ್ರಮವಲ್ಲ: ಮಂಗಳೂರು ನಗರ ಪೊಲೀಸ್ ಆಯುಕ್ತರ ಸ್ಪಷ್ಟನೆ
ಮಂಗಳೂರು, ಜು.21: ಕಾನೂನು ಬಾಹಿರ ಕೃತ್ಯ ನಡೆಸಿ ಗಡಿಪಾರು ನೋಟಿಸ್‌ಗೊಳಗಾಗಿರುವ ವ್ಯಕ್ತಿಗಳ ವಿರುದ್ಧ ಜಾತಿ, ಧರ್ಮ, ಸಂಘಟನೆ, ಪಕ್ಷ ಆಧಾರಿತ ಕಾನೂನು ಕ್ರಮ ಜರಗಿಸಿಲ್ಲ. ಆರೋಪಿಗಳ ಕಾನೂನು ಬಾಹಿರ ಕೃತ್ಯಗಳನ್ನು ಆಧರಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಸ್ಪಷ್ಟನೆ ನೀಡಿದ್ದಾರೆ.
ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯ 62 ಮಂದಿಯ ವಿರುದ್ಧ ಗಡಿಪಾರು ನೋಟಿಸ್ ಜಾರಿಗೊಳಿಸಲಾಗಿದೆ. ಈ ಪೈಕಿ ಬಾಲಚಂದ್ರ, ಗಣೇಶ್ ಅತ್ತಾವರ, ಜಯಪ್ರಕಾಶ್ ಎಂಬ ಆರೋಪಿಗಳು ಕಾನೂನು ಹೋರಾಟ ಮಾಡುವುದಾಗಿ ನೀಡಿದ ಹೇಳಿಕೆಗೆ ಪ್ರತಿಯಾಗಿ ಪೊಲೀಸ್ ಆಯುಕ್ತರು ಈ ಸ್ಪಷ್ಟನೆ ನೀಡಿದ್ದಾರೆ.
ಬಾಲಚಂದ್ರ ಮತ್ತು ಗಣೇಶ್ ಅತ್ತಾವರ ವಿರುದ್ಧ ತಲಾ 5 ಮತ್ತು ಜಯಪ್ರಕಾಶ್ ವಿರುದ್ಧ 7 ಪ್ರಕರಣಗಳು ದಾಖಲಾಗಿವೆ. ಇವರಿಂದ ಜಾಮೀನು ಮುಚ್ಚಳಿಕೆ ಪಡೆದುಕೊಂಡ ಅವಧಿಯಲ್ಲಿ ಎರಡು ಬಾರಿ ಕಾನೂನು ಉಲ್ಲಂಘಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಅವರಿಗೆ ದಂಡ ವಿಧಿಸಲಾಗಿದೆ. ಮುಂದೆಯೂ ಇವರಿಂದ ಕಾನೂನು ಭಂಗವಾಗುವ ಸಾಧ್ಯತೆ ಇದೆ ಎಂದು ಗುಪ್ತ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಮಂಗಳೂರು ನಗರ/ ದ.ಕ.ಜಿಲ್ಲಾ ವ್ಯಾಪ್ತಿಯಿಂದ ಹೊರ ಜಿಲ್ಲೆಗೆ ಗಡಿಪಾರು ಮಾಡುವಂತೆ ಸಂಬಂಧಪಟ್ಟ ಪೊಲೀಸ್ ಠಾಣಾಧಿಕಾರಿಯು ವರದಿ ನೀಡಿದ ಹಿನ್ನೆಲೆಯಲ್ಲಿ ಇವರಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಇಲಾಖೆಯು ಆರೋಪಿಗಳ ಧರ್ಮ, ಜಾತಿ, ಸಂಘಟನೆ, ಪಕ್ಷ ಆಧರಿಸಿ ಕ್ರಮ ಕೈಗೊಂಡಿಲ್ಲ. ಕಾನೂನು ಉಲ್ಲಂಘಿಸುವ ಕೃತ್ಯದಲ್ಲಿ ಯಾರು ತೊಡಗುತ್ತಾರೋ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.