ದೇರಳಕಟ್ಟೆ | ಸಿಪಿಐಎಂ ವತಿಯಿಂದ ಹಕ್ಕೊತ್ತಾಯ ಸಮಾವೇಶ

Update: 2025-04-29 16:04 IST
ದೇರಳಕಟ್ಟೆ | ಸಿಪಿಐಎಂ ವತಿಯಿಂದ ಹಕ್ಕೊತ್ತಾಯ ಸಮಾವೇಶ
  • whatsapp icon

ಕೊಣಾಜೆ : ಉಳ್ಳಾಲ ಎಂಬುದು ಒಂದು ಐತಿಹಾಸಿಕವಾದ ಪ್ರದೇಶ. ಪೋರ್ಚುಗೀಸರ ಕಾಲದಿಂದ ಹಿಡಿದು ಅನೇಕ ಹೋರಾಟಗಳು ಈ ನೆಲದಲ್ಲಿ ನಡೆದು ಅಚ್ಚಳಿಯದ ಹೆಜ್ಜೆ ಗುರುತುಗಳನ್ನು ಮೂಡಿಸಿದೆ. ಒಂದು ಕಾಲದಲ್ಲಿ ರೈತರು, ಕಾರ್ಮಿಕರು ತುಂಬಿದ್ದಂತಹ ಈ ಉಳ್ಳಾಲವು ಇಂದು ನವಬಂಡವಾಳಶಾಹಿಗಳ ಕೇಂದ್ರವಾಗಿ ರೂಪುಗೊಂಡಿದೆ ಎಂದು ಸಿಪಿಐಎಂ ನ ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಅವರು ಹೇಳಿದರು.

ಸಿಪಿಐಎಂ ವತಿಯಿಂದ‌ ದೇರಳಕಟ್ಟೆಯಲ್ಲಿ ಮಂಗಳವಾರ ನಡೆದ‌ ಉಳ್ಳಾಲ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಹಾಗೂ ಎಲ್ಲಾ ಜನವಿಭಾಗಗಳ ಹಲವಾರು ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ನಡೆದ ಬೃಹತ್ ಹಕ್ಕೊತ್ತಾಯ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎರಡು ಮೂರು ದಶಕಗಳಲ್ಲಿ ಇಲ್ಲಿಯ ಪರಿಸ್ಥಿತಿ ಬದಲಾಗಿದೆ. ದೊಡ್ಡ ದೊಡ್ಡ ಕಟ್ಟಡಗಳು, ರಸ್ತೆಗಳು,‌ ಖಾಸಗಿ ಮೆಡಿಕಲ್ ಕಾಲೇಜುಗಳು, ದೊಡ್ಡ ದೊಡ್ಡ ಮಾಲ್ ಗಳ ನಿರ್ಮಾಣಗೊಂಡು ಬಡತನ ನಿರ್ಮೂಲನೆ ಆಗಿದೆ ಎಂಬ ಭ್ರಮೆಯನ್ನು ನಮಗೆ ಮೂಡಿಸುತ್ತದೆ. ಅದರೆ ಇದರ ಒಳಹೊಕ್ಕು ನೋಡಿದಾಗ ನೈಜತೆಯ ಅರಿವಾಗುತ್ತದೆ.

ಉಳ್ಳಾಲ ತಾಲೂಕಿನ ಅಭಿವೃದ್ಧಿಯ ಬಗೆಗೆ ಸ್ಥಳೀಯ ಶಾಸಕರು ನಡೆಸುವ ಸಮಾಲೋಚನಾ ಸಭೆಯಲ್ಲಿ ಶ್ರಮಜೀವಿಗಳ, ಅಂಚಿನಲ್ಲಿರುವ ಜನ ಸಮುದಾಯಗಳ,‌ ವ್ಯಾಪರಸ್ಥರ, ರೈತರ ಪ್ರತಿನಿಧಿಗಳು ಇರುವುದಿಲ್ಲ, ಮೆಡಿಕಲ್ ಕಾಲೇಜಿನ ದಣಿಗಳು, ಬಂಡವಾಳಶಾಹಿಗಳೊಂದಿಗೆ ಕುಳಿತುಕೊಂಡು ಉಳ್ಳಾಲ ಅಭಿವೃದ್ಧಿಯ ಬಗ್ಗೆ ಸಮಾಲೋಚನೆ ಮಾಡ್ತಾರೆ‌. ಇದರಿಂದ ಅದೇ ರೀತಿಯ ಅಭಿವೃದ್ಧಿ ನೀತಿಗಳು ರಚನೆಯಾಗುತ್ತಿವೆ.

1940 ರಿಂದ ಹಿಡಿದು 1970 ರವರೆಗೆ ಇಲ್ಲಿ ಭೂ ಮಾಲಕರ ವಿರುದ್ದ ದೊಡ್ಡ ಹೊರಾಟ ನಡೆಯಿತು. ಕಾಮ್ರೆಡ್ ಕೃಷ್ಣ ಶೆಟ್ಟಿಯಿಂದ ಹಿಡಿದು ಇತರ ನಾಯಕರು ಹೋರಾಟ‌ ನಡೆಸಿ ಉಳ್ಳಾಲವನ್ನು ಕಟ್ಟುವಂತಹ ಪ್ರಯತ್ನವನ್ನು ಆ ಕಾಲಘಟ್ಟದಲ್ಲಿ ಮಾಡಿದ್ದರು. ಗೇಣಿದಾರರಿಗೆ ಭೂಮಿ ಬಂತು. ಭೂಮಾಲಕ ಪದ್ಧತಿ ಹೋಯಿತು. ಆದರೆ ಇದೀಗ ಮತ್ತೆ ನಮ್ಮ ಸುತ್ತ ಮುತ್ತ ಭೂ ಮಾಲಕರರು ಸೃಷ್ಟಿಯಾಗುತ್ತಿದ್ದಾರೆ. ನವ ಭೂಮಾಲಕರು ಉದಯವಾಗಿದ್ದಾರೆ. ನೂರಾರು ಎಕರೆಗಳ ಹೊಸ ಹೊಸ ಸಾಮ್ರಾಜ್ಯಗಳು ಸೃಷ್ಟಿಯಾಗಿವೆ. ನವ ಲ್ಯಾಂಡ್ ಲಾರ್ಡ್ ಗಳು ಉಳ್ಳಾಲ ವನ್ನು ಆಳುವ ಪರಿಸ್ಥಿತಿ ಎದುರಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾಗಿ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಯಾದವ ಶೆಟ್ಟಿ ಭಾಗವಹಿಸಿ ಮಾತನಾಡಿ, ಸ್ವಾತಂತ್ರ್ಯ ದೊರೆತು ಇಷ್ಟು ವರ್ಷಗಳಾದರೂ ಈ ದೇಶದ ಬಡತನ ಕಡಿಮೆಯಾಗಿಲ್ಲ. ಆದರೆ ಇವತ್ತಿಗೂ ಶೇ.20ರಷ್ಟು ಜನರಲ್ಲಿ ಶೇ.80ರಷ್ಟು ಭೂಮಿ ಇದೆ. ಇವತ್ತಿಗೂ ಬಡವರ ಮನೆ ನಿವೇಶನದ ಬಗ್ಗೆ ಬಿಜೆಪಿ,‌ ಕಾಂಗ್ರೆಸ್ ಧ್ವನಿ ಎತ್ತುತ್ತಿಲ್ಲ. ಬಡವರಿಗೆ ಉದ್ಯೋಗ, ಆರೋಗ್ಯ, ವಸತಿ, ಶಿಕ್ಷಣ‌ಕ್ಕೆ ಸಂಬಂಧಿಸಿದ‌ ಪ್ರಶ್ನೆಗಳು ಇನ್ನೂ ಬಗೆಹರಿದಿಲ್ಲ. ಸಿಪಿಐಎಂ ಮಾತ್ರ ಈ ಬಗ್ಗೆ ಹೋರಾಟ‌ ಮುಂದುವರಿಸುತ್ತಾ ಬಂದಿದೆ ಎಂದರು.

ಹಿರಿಯ ಮುಖಂಡರಾದ ಕೃಷ್ಣಪ್ಪ ಸಾಲಿಯಾನ್ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಉಳ್ಳಾಲ ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಈ ಹಕ್ಕೋತ್ತಾಯ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಜಿಲ್ಲಾ ಕಾರ್ಯದರ್ಶಿ ಮಂಡಳಿಯ ಸುಕುಮಾರ್ ತೊಕ್ಕೊಟ್ಟು, ಮುಖಂಡರಾದ ಸಿಪಿಐ(ಎಂ) ಮುಡಿಪು ವಲಯ ಕಾರ್ಯದರ್ಶಿ ರಫೀಕ್ ಹರೇಕಳ, ಶೇಖರ್ ಕುಂದರ್, ಜಿಲ್ಲಾ ಜನಾರ್ದನ ಜಯಂತ್ ನಾಯಕ್, ಸಿಐಟಿ ಉಳ್ಳಾಲ ವಲಯದ ಅಧ್ಯಕ್ಷರಾದ ಸುಂದರ ಕುಂಪಲ,‌ಕಟ್ಟಡ ಕಾರ್ಮಿಕರ ಸಂಘಟನೆ ಉಳ್ಳಾಲ ವಲಯ ಅಧ್ಯಕ್ಷರಾದ ಜನಾರ್ದನ, ಡಿವೈಎಫ್ಐ ನ ಉಳ್ಳಾಲ ತಾಲೂಕಿನ ಅಧ್ಯಕ್ಷರಾದ ನಿತಿನ್ ಕುತ್ತಾರ್ , ಕಾರ್ಯದರ್ಶಿ ರಿಝ್ವಾನ್ ಹರೇಕಳ, ಮುಖಂಡರಾದ‌ ಇಬ್ರಾಹಿಂ ಅಂಬ್ಲಮೊಗರು, ಕನೆಕೆರೆ ನಾಗರಿಕರ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಪಾರೂಕ್, ಅಟೋ ರಿಕ್ಷಾ ಚಾಲಕರ ಸಂಘಟನೆಯ ಅಧ್ಯಕ್ಷ ಮುಸ್ತಾಕ್ ಆಲಿ, ಬೀದಿ ಬದಿ ವ್ಯಾಪರಸ್ಥರ ಸಂಘಟನೆಯ ವಿನಾಯಕ ಶೆಣೈ, ದಲಿತ ಹಕ್ಕುಗಳ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ ಕಿನ್ಯಾ, ಮುಖಂಡರಾದ ಗಿಲ್ಬರ್ಟ್ ಡಿಸೋಜ, ಆದಿವಾಸಿ ಹಕ್ಕುಗಳ ಸಮಿತಿಯ ಮುಖಂಡರಾದ ಕರಿಯ ಕೆ, ಕೋಟೆಕಾರ್ ಸರ್ಕಲ್ ಬೀಡಿ ವರ್ಕರ್‌ ಸಮಿತಿಯ ಪದ್ಮಾವತಿ ಎಸ್ ಶೆಟ್ಟಿ‌, ಯುವ ಮುಖಂಡ ಮಹಾಬಲ ದೆಬ್ಬೆಲಿಮಾರ್, ಗಣೇಶ್ ಅಡ್ಯಾಂತ್ಯಾಯ, ಪಂಚಾಯತ್ ಸದಸ್ಯರಾದ ಅಶ್ರಫ್ ಹರೇಕಳ,‌ ಪ್ರಮೋದಿನಿ ಕಲ್ಲಾಪು, ಚಂದ್ರಹಾಸ್ ಪಿಲಾರ್ ಮೊದಲಾದವರು ಉಪಸ್ಥಿತರಿದ್ದರು.

ಸಿಪಿಐಎಂ ಉಳ್ಳಾಲ ವಲಯ ಸಮಿತಿ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಪಿಐ(ಎಂ) ಮುಡಿಪು ವಲಯ ಕಾರ್ಯದರ್ಶಿ ರಫೀಕ್ ಹರೇಕಳ ವಂದಿಸಿದರು.

ಸಮಾವೇಶದ ಪೂರ್ವಭಾವಿಯಾಗಿ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆ ಜಂಕ್ಷನ್ ಹಾಗೂ ನಾಟೆಕಲ್ ಜಂಕ್ಷನ್‌ನಿಂದ ಎರಡು ಬೃಹತ್ ರ್‍ಯಾಲಿಗಳು ಹೊರಟು ಸಮಾವೇಶದ ಸ್ಥಳಕ್ಕೆ ತಲುಪಿತು.

ತಾಲೂಕು ರಚನೆಯಾಗಿ ಐದು ವರ್ಷವಾದರೂ ಪ್ರಮುಖವಾಗಿ ಬೇಕಾದ ಸುಸಜ್ಜಿತವಾದ ಮಿನಿ ವಿಧಾನಸೌಧ, ಸಬ್ ರಿಜಿಸ್ಟ್ರಾರ್ ಕಚೇರಿ, ತಾಲೂಕು ಮಟ್ಟಡ ಕ್ರೀಡಾಂಗಣ, ವ್ಯವಸ್ಥಿತ ರಂಗ ಮಂದಿರ, ಪುರಭವನ, ತಾಲೂಕು ನ್ಯಾಯಾಲಯಕ್ಕೆ ಭಾಗ್ಯ ಇನ್ನು ಒದಗಿಬಂದಿಲ್ಲ. ಉಳ್ಳಾಲ ತಾಲೂಕಿನಾದ್ಯಂತ ಮರಳು ಮಾಫಿಯಾ, ಕೆಂಪು ಮಣ್ಣು ಮಾಫಿಯಾ ಹೆಚ್ಚಾಗಿ ನಡೆಯುತ್ತಿದೆ. ನೇತ್ರಾವತಿ ನದಿ ನಡುವಿನ ಕುದ್ರುಗಳು ಮರಳು ಮಾಫಿಯಾದ ದುರಾಸೆಗೆ ಕಳಚಿ ಬೀಳುತ್ತಿದೆ. ಹೀಗೆ ಉಳ್ಳಾಲ ತಾಲೂಕಿನ ಜನರ ನೂರಾರು ಸಮಸ್ಯೆಗಳ ಪರಿಹಾರಕ್ಕಾಗಿ ಹಾಗೂ ಉಳ್ಳಾಲದ ಸಮಗ್ರ ಅಭಿವೃದ್ಧಿಗಾಗಿ ಈ ಸಮಾವೇಶದಲ್ಲಿ ಹಕ್ಕೊತ್ತಾಯವನ್ನು ಮಾಡುತ್ತಿದ್ದೇವೆ.

-ಸುನಿಲ್ ಕುಮಾರ್ ಬಜಾಲ್, ಸಿಪಿಐಎಂ ಉಳ್ಳಾಲ ವಲಯ ಸಮಿತಿ ಕಾರ್ಯದರ್ಶಿ

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News