ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ; ಎಸಿ ನೇತೃತ್ವದಲ್ಲಿ ಸಮಿತಿ ರಚನೆ: ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್

Update: 2023-11-23 12:28 GMT

ಮುಲ್ಲೈ ಮುಗಿಲನ್

ಮಂಗಳೂರು: ಮುಂಬರುವ ದಿನಗಳಲ್ಲಿ ದ.ಕ. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸಲು ಸಕಲ ಸಿದ್ಧತೆಗಳನ್ನು ನಡೆಸುವ ನಿಟ್ಟಿನಲ್ಲಿ ಸಹಾಯಕ ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.

ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಟಿಯ ಸಂದರ್ಭ ಈ ಬಗ್ಗೆ ಮಾಹಿತಿ ನೀಡಿದ ಅವರು, ಕುಡಿಯುವ ನೀರಿನ ಕುರಿತಂತೆ ಈಗಾಗಲೇ ಮೂರು ಸುತ್ತಿನ ಚರ್ಚೆಗಳು ನಡೆದಿವೆ ಎಂದರು.

ನಗರ ಪಾಲಿಕೆ ವ್ಯಾಪ್ತಿಗೆ ನೀರು ಪೂರೈಕೆ ಮಾಡುವ ತುಂಬೆ ಅಣೆಕಟ್ಟು, ಹಿನ್ನೀರಿನ ಇತರ ಮೂಲಗಳು, ಸಣ್ಣ ಅಣೆಕಟ್ಟಗಳು, ಬಹುಗ್ರಾಮ ಕುಡಿಯುವ ನೀರಿನ ವಿವಿಧ ಯೋಜನೆಗಳು, ಹೊಸ ಯೋಜನೆಗಳನ್ನು ಗಣನೆಗೆ ತೆಗೆದುಕೊಂಡು ಹೆಚ್ಚುವರಿ ನೀರಿನ ಮಟ್ಟವನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಈ ಸಮಿತಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ. ತುಂಬೆ ಸಮೀಪದ ಹರೇಕಳ ಡ್ಯಾಂನಲ್ಲಿ ಸಾಕಷ್ಟು ನೀರು ಸಂಗ್ರಹಿಸಲು ಅವಕಾಶವಿದ್ದು, ಈ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ. ಪ್ರಸ್ತುತ ತುಂಬೆ ಅಣೆಕಟ್ಟಿನಲ್ಲಿ ನದಿಯ ಒಳಹರಿವು ನಿಂತಾಗ ಅಲ್ಲಿ ಸಂಗ್ರಹವಾಗುವ ನೀರು ನಗರಕ್ಕೆ ಸುಮಾರು ೫೦ ದಿನಗಳಿಗೆ ಪೂರೈಕೆ ಮಾಡಲು ಸಾಧ್ಯವಿದೆ. ಈ ಎಲ್ಲಾ ಅಂಶಗಳ ಬಗ್ಗೆ ಸ್ಥೂಲವಾದ ವರದಿಯನ್ನು ತಿಂಗಳೊಳಗೆ ಈ ಸಮಿತಿ ಸಿದ್ಧಪಡಿಸಲಿದೆ ಎಂದು ಅವರು ಹೇಳಿದರು.

ಸದ್ಯ ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಎನ್‌ಜಿಟಿ ಆದೇಶದ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಕಳೆದ ಎರಡು ವರ್ಷಗಳಿಂದ ಮರಳುಗಾರಿಕೆಗೆ ನಿರ್ಬಂಧವಿದೆ. ನಾನ್ ಸಿಆರ್‌ಝೆಡ್‌ನಡಿ ಸಾಕಷ್ಟು ಮರಳು ಲಭ್ಯವಿದ್ದು, 25 ಮಂದಿ ಟೆಂಡರುದಾರರಿಗೆ ಮರಳು ತೆಗೆಯಲು 25 ಬ್ಲಾಕ್‌ಗಳನ್ನು ಗುರುತಿಸಲಾಗಿದೆ. ಅದರಿಂದ ನಿಗದಿತ ಶೇ. 50 ಮರಳು ಕೂಡಾ ಇನ್ನೂ ತೆರವುಗೊಳಿಸುವ ಕಾರ್ಯ ನಡೆದಿಲ್ಲ. ಹಾಗಾಗಿ ನಾನ್‌ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಸಾಕಷ್ಟು ಮರಳಿದೆ. ಗುತ್ತಿಗೆದಾರರಿಗೆ ತೆರವುಗೊಳಿಸಿದ ಮರಳನ್ನು ಸಾಗಿಸುವ ನಿಟ್ಟಿನಲ್ಲಿ ತಮ್ಮ ಸ್ಟಾಕ್‌ಯಾರ್ಡ್ ಬಳಿ ವೇ ಬ್ರಿಡ್ಜ್ ಅಳವಡಿಸುವಂತೆ ತಿಳಿಸಲಾಗಿತ್ತು. ಆದರೆ ಅಳವಡಿಸದ ಕಾರಣ ಆರಂಭದಲ್ಲಿಕೆಲ ದಿನಗಳ ಕಾಲ ತೊಡಕಾಗಿತ್ತು. ಬಳಿಕ ಒಂದು ತಿಂಗಳ ಕಾಲಾವಕಾಶ ನೀಡಿ ಮರಳುಗಾರಿಕೆಗೆ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News