ಮುಸ್ಲಿಂ ಐಕ್ಯತಾ ವೇದಿಕೆಯಿಂದ ‘ಡ್ರಗ್ಸ್ ಮುಕ್ತ ಕುದ್ರೋಳಿ’ ಅಭಿಯಾನಕ್ಕೆ ಚಾಲನೆ
ಮಂಗಳೂರು: ಕುದ್ರೋಳಿಯ ಮುಸ್ಲಿಂ ಐಕ್ಯತಾ ವೇದಿಕೆಯ ವತಿಯಿಂದ ‘ಡ್ರಗ್ಸ್ ಮುಕ್ತ ಕುದ್ರೋಳಿ’ ಅಭಿಯಾನಕ್ಕೆ ಗುರುವಾರ ಕುದ್ರೋಳಿ ಜಂಕ್ಷನ್‌ನಲ್ಲಿ ಚಾಲನೆ ನೀಡಲಾಯಿತು.
ಡ್ರಗ್ಸ್ ಮತ್ತಿತರ ಮಾದಕ ವಸ್ತುಗಳ ಚಟಕ್ಕೆ ಯುವ ಸಮೂಹ ಬಲಿಯಾಗುತ್ತಿರುವುದನ್ನು ಮನಗೊಂಡು ‘ಮುಸ್ಲಿಂ ಐಕ್ಯತಾ ವೇದಿಕೆ’ಯು ಊರಿನ ನಾಗರಿಕರ ಸಹಕಾರದೊಂದಿಗೆ ‘ಡ್ರಗ್ಸ್ ಮುಕ್ತ ಕುದ್ರೋಳಿ’ಯನ್ನಾಗಿಸಲು ಆ.9ರ ರಾತ್ರಿ 7.30ಕ್ಕೆ ಕುದ್ರೋಳಿ ಜಂಕ್ಷನ್‌ನಲ್ಲಿರುವ ಉರ್ದು ಶಾಲೆಯಲ್ಲಿ ಜನಜಾಗೃತಿ ಸಮಾವೇಶ ಹಮ್ಮಿಕೊಂಡಿವೆ.
ಈ ಸಮಾವೇಶದ ಪ್ರಚಾರದ ಅಂಗವಾಗಿ ಮುಸ್ಲಿಂ ಐಕ್ಯತಾ ವೇದಿಕೆಯ ಸದಸ್ಯರು, ಮೊಹಲ್ಲಾ ಆಡಳಿತ ಸಮಿತಿಯ ಸದಸ್ಯರು ಹಾಗೂ ಊರಿನ ಪ್ರಮುಖರು ಗುರುವಾರ ಮನೆ ಮನೆ ಭೇಟಿ ನೀಡಿದರು.
ಕಾರ್ಪೊರೇಟರ್ ಶಂಸುದ್ದೀನ್ ಎಚ್‌ಬಿಟಿ ಮಾತನಾಡಿ ಅನೇಕ ಯುವಕರು ಈ ಚಟಕ್ಕೆ ತುತ್ತಾಗಿದ್ದಾರೆ. ಅವರನ್ನು ರಕ್ಷಿಸ ಬೇಕು, ನಾಡಿನ ಸತ್ಪ್ರಜೆಯನ್ನಾಗಿಸಬೇಕು ಎಂಬ ನಿಟ್ಟಿನಲ್ಲಿ ಕುದ್ರೋಳಿ ಪರಿಸರದ ಐದು ಮಸೀದಿಗಳ ಆಡಳಿತ ಸಮಿತಿಯ ಸದಸ್ಯರು, ಮೊಹಲ್ಲಾಗಳ ನಾಯಕರು ಒಗ್ಗೂಡಿ ದೊಡ್ಡ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಇದರಲ್ಲಿ ಯಶಸ್ವಿಯಾಗುವ ವಿಶ್ವಾಸವಿದೆ ಎಂದರು.
ಮಾಜಿ ಮೇಯರ್ ಕೆ. ಅಶ್ರಫ್ ಮಾತನಾಡಿ ದ.ಕ.ಜಿಲ್ಲೆಯಲ್ಲಿ ಯುವಕರು ಮಾದಕ ವ್ಯಸನಕ್ಕೆ ಆಕರ್ಷಿತರಾಗುತ್ತಿದ್ದಾರೆ. ಅದರ ನಿರ್ಮೂಲನೆಗಾಗಿ ಪೊಲೀಸ್ ಇಲಾಖೆಯು ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಅದಕ್ಕೆ ಪೂರಕವಾಗಿ ಮುಸ್ಲಿಂ ಐಕ್ಯತಾ ವೇದಿಕೆಯು ಪೊಲೀಸ್ ಇಲಾಖೆಯ ಜೊತೆ ಕೈ ಜೋಡಿಸಿದೆ. ಯುವಕರನ್ನು ಈ ಜಾಲದಿಂದ ಹೊರಗೆ ತರುವ ಸಲುವಾಗಿ ಅವರ ಮನಪರಿವರ್ತನೆ ಅಗತ್ಯವಿದೆ. ಅದಕ್ಕಾಗಿ ಕೌನ್ಸಿಲಿಂಗ್ ನಡೆಸಲಾಗುವುದು. ಕುದ್ರೋಳಿ ಪರಿಸರವನ್ನು ಡ್ರಗ್ಸ್ ಮುಕ್ತಗೊಳಿಸಲು ಹೋರಾಟ ಮುಂದುವರಿಸಲಿದ್ದೇವೆ ಎಂದರು.
ಈ ಸಂದರ್ಭ ಮುಸ್ಲಿಂ ಐಕ್ಯತಾ ವೇದಿಕೆಯ ಅಧ್ಯಕ್ಷ ಯಾಸೀನ್ ಕುದ್ರೋಳಿ, ಪ್ರಧಾನ ಕಾರ್ಯದರ್ಶಿ ಹಾಜಿ ಬಿ. ಅಬೂಬಕ್ಕರ್, ಕೋಶಾಧಿಕಾರಿ ಮಕ್ಬೂಲ್ ಜಾಮಿಅ, ಸಂಚಾಲಕ ಅಬ್ದುಲ್ ಅಝೀಝ್, ಎಸ್‌ವೈಎಸ್ ಮುಖಂಡ ಅಶ್ರಫ್ ಕಿನಾರ, ಬಂದರ್ ಇನ್‌ಸ್ಪೆಕ್ಟರ್ ಶ್ಯಾಮ್ ಸುಂದರ್ ಎಚ್‌ಎಂ, ಪ್ರಮುಖರಾದ ವಹ್ಹಾಬ್ ಕುದ್ರೋಳಿ, ಎನ್‌ಕೆ ಅಬೂಬಕ್ಕರ್, ಇಸ್ಮಾಯಿಲ್ ಎ, ಮಕ್ಬೂಲ್ ಅಹ್ಮದ್, ಹಾರಿಸ್, ಮುಝೈರ್ ಅಹ್ಮದ್ ನಡುಪಳ್ಳಿ, ಮುಸ್ತಾಕ್, ಬಿಎ ಇಸ್ಮಾಯಿಲ್, ಇಸ್ಮಾಯೀಲ್ ನಡುಪಳ್ಳಿ, ಶಮೀಮ್ ಅಹ್ಮದ್, ಅಝೀಝ್ ಎಎಟಿ ಮತ್ತಿತರರು ಉಪಸ್ಥಿತರಿದ್ದರು.